

ಹುಬ್ಬಳ್ಳಿ: ಬೆಂಗಳೂರಿನಲ್ಲಿ ಜುಲೈ 23ರಂದು ಪಂಚಮಸಾಲಿ ಸಮಾಜದ ವಕೀಲರ ರಾಜ್ಯಮಟ್ಟದ ಸಭೆ ಆಯೋಜಿಸುವ ಮೂಲಕ 2ಎ ಮೀಸಲಾತಿ ಹೋರಾಟಕ್ಕೆ ಕಾನೂನಾತ್ಮಕ ಸ್ವರೂಪ ನೀಡಲು ನಿರ್ಧರಿಸಲಾಗಿದೆ ಎಂದು ಕೂಡಲಸಂಗಮ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಲಿಂಗಾಯತ ಒಳಪಂಗಡಗಳಿಗೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಯ ಬಗ್ಗೆ ಸಭೆಯಲ್ಲಿ ಚಚಿರ್ಸಲಾಗುವುದು. ಲಿಂಗಾಯತ ಪಂಚಮಸಾಲಿ ಸಮಾಜದ ಹಿರಿಯ ವಕೀಲರ ತಂಡ ರಚನೆ ಮಾಡಿ ಮುಂದಿನ ಹಂತದ ಕಾನೂನು ಹೋರಾಟಕ್ಕೆ ಮಾಡಲಾಗುವುದು ಎಂದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಮಂಡಳ ಅಧಿವೇಶನದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ 20 ಶಾಸಕರು ಧ್ವನಿ ಎತ್ತುವ ಮೂಲಕ ಸಮಾಜದ ಋಣ ತೀರಿಸಬೇಕು ಎಂದು ಸಲಹೆ ನೀಡಿದರು.
ಸಮಾಜದ ವಕೀಲರು ಪಂಚಮಸಾಲಿ ಹೋರಾಟಕ್ಕೆ ಈ ವರೆಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದರು. ಇದೀಗ ಸಭೆ ಮೂಲಕ ಕಾನೂನು ಹೋರಾಟಕ್ಕೆ ಬೆಂಬಲ ನೀಡಲು ಕೋರಲಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸಮಾಜದ ಪಂಚಸೇನೆಯ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜುಲೈ 21ರಂದು ಏರ್ಪಡಿಸಲಾಗಿದೆ ಎಂದು ಸ್ವಾಮೀಜಿ ಮಾಹಿತಿ ನೀಡಿದರು.
ಲಿಂಗಾಯತ ಸಮಾಜದ ಉಳಿದ ಒಳಪಂಗಡಗಳಿಗೆ ಮೀಸಲಾತಿ ನೀಡಿದರೂ ನಾವು ಬೆಂಬಲ ನೀಡುತ್ತೇವೆ. ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿಗಾಗಿ 10 ವರ್ಷ ಹೋರಾಟ ನಡೆಸಿದ್ದರು. ಇದೀಗ ಸಮಾಜಕ್ಕೂ ನ್ಯಾಯ ಸಿಗುವ ನಂಬಿಕೆ ಇದೆ ಎಂದು ಹೇಳಿದರು.
ಸಮಾಜದ ವಕೀಲರ ಸಭೆ: ನಗರದ ಖಾಸಗಿ ಹೋಟೆಲ್ನಲ್ಲಿ ಗುರುವಾರ ಉತ್ತರ ಕರ್ನಾಟಕ ಭಾಗದ ಪಂಚಮಸಾಲಿ ವಕೀಲರ ಸಭೆ ಏರ್ಪಡಿಸಲಾಗಿತ್ತು. ಸಮಾಜಕ್ಕೆ 2ಎ ಮೀಸಲಾತಿಗೆ ಕಾನೂನು ಹೋರಾಟ ನಡೆಸಲು ನಿರ್ಧರಿಸಲಾಯಿತು.
ಸಾನ್ನಿಧ್ಯ ವಹಿಸಿದ್ದ ಕೂಡಲ ಸಂಗಮ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, 2ಎ ಮೀಸಲಾತಿಗಾಗಿ ಸಮಾಜದ ವಕೀಲರು ಒಗ್ಗಟ್ಟಿನಿಂದ ಬೆಂಬಲಿಸಬೇಕು ಎಂದು ಕೋರಿದರು.
ಹುಬ್ಬಳ್ಳಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಡಿ.ಎಂ. ನರಗುಂದ ಮಾತನಾಡಿದರು. ಆರ್.ಜಿ. ಕೊಡ್ಲಿ, ಎ.ವಿ. ಬಳಿಗಾರ, ಹನುಮಂತ ಶಿಗ್ಗಾವಿ, ಎಸ್.ಎಸ್. ನಾಗನಗೌಡ್ರ, ಬಾಪುಗೌಡ ಶಾಬಾಳದ, ವೈ.ಬಿ. ಮುದಿಗೌಡ್ರ, ಸಾವಿತ್ರಿ ಪೊಲೀಸಗೌಡ್ರ, ಸಿ.ವಿ. ಹೊಂಬಾಳ, ಸುಜಾತಾ ಗೋವನಕೊಪ್ಪ, ವಿ.ಟಿ. ಕುಲಕರ್ಣಿ, ಜಿ.ಆರ್. ಪಾಟೀಲ, ಎಸ್.ಎಸ್. ಕೋಟಗಿ, ಜಿ.ಎಫ್. ಸಂಕಣ್ಣವರ, ವಿಜಯಲಕ್ಷ್ಮಿ ವಾಲಿ, ಪಿ.ಎಸ್. ನರೇಗಲ್ ಸೇರಿ ಸಮಾಜದ 200ಕ್ಕೂ ಹೆಚ್ಚು ವಕೀಲರು ಸಭೆಯಲ್ಲಿ ಪಾಲ್ಗೊಂಡಿದ್ದರು.