

ವಿಜಯವಾಣಿ ಸುದ್ದಿಜಾಲ ನಂದೇಶ್ವರ
ಸಮೀಪದ ಮಹಿಷವಾಡಗಿ ಗ್ರಾಮದಲ್ಲಿ ಏ.28ರಿಂದ ಮೇ 4ರ ವರೆಗೆ ವಿಶ್ವ ಕಲ್ಯಾಣಕ್ಕಾಗಿ ಪಂಚಕಲ್ಯಾಣ ಮಹೋತ್ಸವ ಜರುಗಲಿದೆ. ಏಳು ಜೈನಮುನಿಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ ಕೀರ್ತಿ ಮಹಿಷವಾಡಗಿದೆ ಎಂದು ಹಳಿಂಗಳಿ ಭದ್ರಗಿರಿ ಬೆಟ್ಟದ ಆಚಾರ್ಯರತ್ನ 108 ಕುಲರತ್ನಭೂಷಣ ಮುನಿ ಮಹಾರಾಜರು ಹೇಳಿದರು.
ಸಮೀಪದ ಮಹಿಷವಾಡಗಿ ಗ್ರಾಮದಲ್ಲಿ ಭಾನುವಾರ ಪಂಚಕಲ್ಯಾಣ ಮಹೋತ್ಸವ ನಿಮಿತ್ತ ಸರ್ವಧರ್ಮೀಯರ ಸಭೆ ಹಾಗೂ ಕಾರ್ಯಕ್ರಮದ ಪೂರ್ವ ತಯಾರಿ ವೀಕ್ಷಿಸಿ ಮಾತನಾಡಿದರು. ಜೈನ ಧರ್ಮ ತಾಯಿಯ ಮಮತೆ ತೋರಿಸುತ್ತದೆ. ಬದುಕು ಬದುಕಲು ಬಿಡು ಎನ್ನುವುದು ಜೈನ ಧರ್ಮದ ತಿರುಳು. ಯಾವುದೇ ಮನುಷ್ಯ ಸತ್ಕಾರ್ಯಗಳಿಂದಲ್ಲದೆ ಜನ್ಮದಿಂದ ಶ್ರೇಷ್ಠನಾಗುವುದಿಲ್ಲ. ನದಿಗಳು ಬೇರೆ ಬೇರೆಯಾದರೂ ಸೇರುವುದು ಸಾಗರವನ್ನೇ. ಹಾಗೆಯೇ ಎಲ್ಲ ಧರ್ಮಗಳ ಉದ್ದೇಶ ಒಂದೇ ಎಂದು ತಿಳಿಸಿದರು.
ವಿವಿಧ ಧರ್ಮದವರು ಕಾರ್ಯಕ್ರಮದ ಕುರಿತಾಗಿ ಅಭಿಪ್ರಾಯ ಹಂಚಿಕೊಂಡರು. ಬಾಬಾಸಾಹೇಬ ಪಾಟೀಲ, ಅಶೋಕ ಮುಗ್ಗನವರ, ವಿವೇಕಾನಂದ ಯಲಗುದ್ರಿ, ಮಲ್ಲು ಪಾಸಾಣಿ, ಮಹಾವೀರ ಶಿರಹಟ್ಟಿ, ಸುರೇಂದ್ರ ಸಿದ್ದವಗೋಳ, ಕುಮಾರ ಪಸಾಣಿ, ಬಸಗೊಂಡ ಝಿಂಜರವಾಡ, ಮಲ್ಲಪ್ಪ ಶಿರಹಟ್ಟಿ, ಬಂಡು ಕೊಕಟನೂರ ಹಾಗೂ ಶ್ರಾವಕ, ಶ್ರಾವಕಿಯರು ಉಪಸ್ಥಿತರಿದ್ದರು.