ಪಾಂಚಜನ್ಯ ಹಿಂದು ಗಣಪತಿ ವಿಸರ್ಜನಾ ಶೋಭಾಯಾತ್ರೆ

ಪಾಂಚಜನ್ಯ ಹಿಂದು ಗಣಪತಿ ವಿಸರ್ಜನಾ ಶೋಭಾಯಾತ್ರೆ
Published on

ಹಾಸನ: ನಗರದ ಜಿಲ್ಲಾ ಕಸಾಪ ಭವನದ ಆವರಣದಲ್ಲಿ ಕೂರಿಸಿದ್ದ ಪಾಂಚಜನ್ಯ ಹಿಂದು ಗಣಪತಿ ವಿಸರ್ಜನಾ ಶೋಭಾಯಾತ್ರೆ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.

ಮಧ್ಯಾಹ್ನ 1.30ರ ಸುಮಾರಿಗೆ ಆರಂಭವಾದ ಮೆರವಣಿಗೆ ಬಸವೇಶ್ವರ ದೇವಸ್ಥಾನ, ಹೊಸಲೈನ್ ರಸ್ತೆ, ಬಿ.ಎಂ.ರಸ್ತೆ, ಸುಭಾಷ್ ಚೌಕ ಮೂಲಕ ಸಾಗಿ ನಂತರ ದೇವಿಕೆರೆಗೆ ತಲುಪಿತು.

ಶೋಭಾಯಾತ್ರೆಯಲ್ಲಿ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್, ಸಿಮೆಂಟ್ ಮಂಜು, ಎಚ್.ಕೆ.ಸುರೇಶ್, ಮಾಜಿ ಶಾಸಕ ಹಾಗೂ

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪಾಂಚಜನ್ಯ ಗಣೇಶ ಸಮಿತಿಯ ವೇಣುಗೋಪಾಲ್, ರವಿಸೋಮು ಸೇರಿದಂತೆ ನೂರಾರು ಹಿಂದುಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ವಿವಿಧ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.

ಯುವಕ-ಯುವತಿಯರು ಪ್ರತ್ಯೇಕವಾಗಿ ಕುಣಿದು ಕುಪ್ಪಳಿಸಿದರು. ನಡುವೆ ಮಳೆ ಸುರಿದರೂ ಮೆರವಣಿಗೆಯಲ್ಲಿ ಉತ್ಸಾಹ ತಣಿಯಲಿಲ್ಲ. ನೆನೆಯುತ್ತಲೇ ಯುವಕ-ಯುವತಿಯರು, ಮಕ್ಕಳು ಡಿಜೆ ಹಾಡಿಗೆ ಹೆಜ್ಜೆ ಹಾಕಿದರು. ಭಾಗಿಯಾಗಿದ್ದ ಎಲ್ಲರೂ ಜೈ ಶ್ರೀರಾಮ್, ಬಜರಂಗಿ ಘೋಷಣೆಗಳು ಮೊಳಗಿದವು.

ಶ್ರೀಕೃಷ್ಣ, ಕೆಂಪೇಗೌಡ, ಆಪರೇಷನ್ ಸಿಂಧೂರ್, ಅಯೋಧ್ಯರಾಮ, ಡಾ.ಬಿ.ಆರ್.ಅಂಬೇಡ್ಕರ್, ಕಾಮಧೇನು ಸ್ತಬ್ಧಚಿತ್ರಗಳು ಗಮನ ಸೆಳೆದವು. ಇದರ ಜತೆಗೆ ಕೇಸರಿ ಬಾವುಟ ರಾರಾಜಿಸಿದವು. ನಡುವೆ ಅನ್ನ ಸಂತರ್ಪಣೆ, ಪಾನಕ ವಿತರಣೆ ವ್ಯವಸ್ಥೆ ಮಾಡಲಾಗಿತ್ತು.

ಬಿಗಿ ಪೊಲೀಸ್ ಬಂದೋಬಸ್ತ್: ಮುನ್ನೆಚ್ಚರಿಕೆ ಕ್ರಮವಾಗಿ ಎಸ್ಪಿ ಮೊಹಮದ್ ಸುಜೀತಾ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಸಿಬ್ಬಂದಿ

ಸೇರಿ 800ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಭದ್ರತೆಗಾಗಿ ಅಕ್ಕ ಪಕ್ಕದ ಜಿಲ್ಲೆಗಳಿಂದಲೂ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ. ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ ನಗರದಲ್ಲೇ ಇದ್ದರು.

ಪಾಂಚಜನ್ಯ ಗಣಪತಿ ವಿಸರ್ಜನೆ ಹಾಗೂ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಹಾಸನ ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ಮದ್ಯ ಮಾರಾಟ ನಿಷೇಧ ಮಾಡಿ, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಆದೇಶ ಹೊರಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net