ಮೈಸೂರಿನಲ್ಲಿ ಲೋಕಕಲ್ಯಾಣಕ್ಕಾಗಿ ಪಂಚಗರುಡೋತ್ಸವ

14
Published on

ಮೈಸೂರು: ಲೋಕಕಲ್ಯಾಣಕ್ಕಾಗಿ ಆಯೋಜಿಸಿರುವ ಪಂಚಗರುಡೋತ್ಸವ ಎಲ್ಲರಿಗೂ ಒಳಿತು ಮಾಡಲಿ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಪಂಚಗರುಡೋತ್ಸವ ಸಮಿತಿಯಿಂದ ಜಯಲಕ್ಷ್ಮೀಪುರಂನ ಮಹಾಜನ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಗರುಡೋತ್ಸವ ಸೇವೆಯಲ್ಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಂಚಗರುಡೋತ್ಸವ ಸೇವಾ ಸಮಿತಿಯಿಂದ ಆಯೋಜಿಸಿರುವ ಈ ಧಾರ್ಮಿಕ ಕಾರ್ಯಕ್ರಮದ ವಿವಿಧ ಪೂಜಾ ವಿಧಿ-ವಿಧಾನದಲ್ಲಿ ಮೈಸೂರಿನ ಜನತೆ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಮನವಿ ಮಾಡಿದರು.

ಮೇಲುಕೋಟೆಯ ಯದುಗಿರಿ ಯತಿರಾಜ ನಾರಾಯಣ ರಾಮಾನುಜು ಜೀಯರ, ಪರಕಾಲ ಮಠದ ಶ್ರೀಮದಭಿನವ ವಾಗೀಶ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮೀಜಿ, ಶ್ರೀಭಾಷ್ಯಂ ಸ್ವಾಮೀಜಿ ಸೇರಿದಂತೆ ಹಲವರು ಶ್ರೀ ನಾರಾಯಣ ದೇವರ ಸೇವೆಯನ್ನು ಮಾಡುತ್ತಿರುವುದರ ಜತೆಗೆ ಲೋಕಕಲ್ಯಾಣಕ್ಕೆ ಹಲವು ಧಾರ್ಮಿಕ ವಿಧಿ-ವಿಧಾನದಲ್ಲಿ ಪಾಲ್ಗೊಂಡು ಲೋಕದ ಹಿತ ಬಯಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀಯೋಗಾನರಸಿಂಹಸ್ವಾಮಿ ದೇವಸ್ಥಾನದ ಶ್ರೀಭಾಷ್ಯಂ ಸ್ವಾಮಿ ಮಾತನಾಡಿ, ಪಂಚ ಗರುಡೋತ್ಸವ, ಹನ್ನೆರಡು ಗರುಡೋತ್ಸವ ಸೇವೆಯ ಮಹಿಮೆ ಅಗಾಧವಾದುದು. ಹಾಗಾಗಿ ನಗರದಲ್ಲಿ ಎರಡನೇ ಬಾರಿಗೆ ಪಂಚ ಗರುಡೋತ್ಸವ ಧಾರ್ಮಿಕ ಕಾರ್ಯವು ಶ್ರೀಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸಮ್ಮುಖದಲ್ಲಿ ನಡೆಯುತ್ತಿರುವುದು ಸಂತೋಷದ ಸಂಗತಿ ಎಂದರು.

ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸಮ್ಮುಖದಲ್ಲಿ ಬೃಹತ್ ಊದುಬತ್ತಿ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಪಂಚ ಗರುಡೋತ್ಸವ ಸೇವಾ ಸಮಿತಿ ಗೌರವಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಬಿಜೆಪಿ ಮೈಸೂರು ನಗರಾಧ್ಯಕ್ಷ ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ನಗರ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್, ಸಮಿತಿ ಸದಸ್ಯರಾದ ಕೆ.ಆರ್.ಯೋಗಾನರಸಿಂಹನ್, ವೀರರಾಘವನ್, ಎಂ.ಕೆ.ಶ್ಯಾಮ್ ಶ್ರೀನಿವಾಸ, ರಾಮಪ್ರಿಯನ್, ವೈಯ್ಯಕರಣಿ, ರಾಮಾನುಜಂ, ಆರ್.ರಾಮಸ್ವಾಮಿ, ರಂಗರಾಜು, ಶ್ರೀನಿಧಿ ಶಾಂತಾರಾಂ, ಎಂ.ಆನಂದ್, ಎಸ್.ಸುದರ್ಶನ್, ಪಿ.ರಾಮಾನುಜಂ, ಮಣಿವಣ್ಣನ್, ಜಯಸಿಂಹ, ಶ್ರೀರಂಗರಾಜನ್, ಜಾನಕಿ ಶೇಷಾದ್ರಿ, ಪದ್ಮಶ್ರೀ, ಜಿ.ಕೆ.ಕಮಲಾ, ಎಂ.ಆರ್.ನಾಗಮಣಿ, ಜಾನಕಿ ಕೃಷ್ಣಮೂರ್ತಿ ಇತರರು ಇದ್ದರು.

ವಿದ್ವಾನ್ ಎಂ.ಜಿ.ರಂಗನಾಥ್ ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹಲವು ದಾಸರ ಪದಗಳನ್ನು ಪ್ರಸ್ತುತಪಡಿಸಲಾಯಿತು. ವಿದ್ವಾನ್ ವಂಶಿಧರ್ ಮತ್ತು ವೃಂದದವರಿಂದ ಕೊಳಲು ನುಡಿಸಿ, ಪ್ರೇಕ್ಷಕರ ಮನಗೆದ್ದರು.

ವಿದ್ವಾನ್ ಆರ್.ಕೆ.ಪದ್ಮನಾಭನ್ ತಂಡದ ಕಲಾವಿದರಿಂದ ವೀಣಾವಾದನ, ವಿಷ್ಣು ಸಹಸ್ರನಾಮ ಪಾರಾಯಣ, ಭರತಾಂಜಲಿ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ವಿದುಷಿ ಶೀಲಾ ಶ್ರೀೀಧರ್, ವಿದುಷಿ ಶಾಶ್ವತಿ ರಘುನಂದನ್ ಅವರಿಂದ ವಿಷ್ಣು ದಶಾವತಾರ ನೃತ್ಯರೂಪಕ ಪ್ರದರ್ಶಿಸಿದರು. ಶ್ರೀಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಗೋಷ್ಠಿ ಕಲಾವಿದರಿಂದ ನೃತ್ಯರೂಪಕ ಪ್ರದರ್ಶಿಸಿದರು.

ಮಹಾಜನ ವಿದ್ಯಾಸಂಸ್ಥೆ ಕ್ರೀಡಾಂಗಣದಿಂದ ಆರಂಭ ಪಂಚ ಗರುಡೋತ್ಸವ ದೇವರ ಮೆರವಣಿಗೆ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಮರಳಿ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net