

ಕಾರ್ಗಲ್: ನೂತನವಾಗಿ ನಿರ್ಮಾಣವಾದ ಜೈನ ಧರ್ಮದ 23ನೇ ತೀರ್ಥಂಕರ ಭಗವಾನ್ 1008 ಶ್ರೀಪಾರ್ಶ್ವನಾಥ ಸ್ವಾಮಿಯ ಪಂಚ ಕಲ್ಯಾಣ ಮಹಾಮಹೋತ್ಸವವು ಮಾ.1ರಿಂದ 6ರವರೆಗೆ ಶ್ರೀಕ್ಷೇತ್ರ ವಡನಬೈಲಿನಲ್ಲಿ ವಿಜೃಂಭಣೆಯಿಂದ ನಡೆಯಲಿದ್ದು, ಮಾ.5ರಂದು 11 ಅಡಿ ಎತ್ತರದ ಪಾರ್ಶ್ವನಾಥ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನಾ ಕಾರ್ಯ ನೆರವೇರಲಿದೆ ಎಂದು ಶ್ರೀ ಕ್ಷೇತ್ರ ವಡನಬೈಲು ಹೆಬ್ಬೈಲು ಬಳೆ ಪದ್ಮಾವತಿ ಅಮ್ಮನವರ ದೇವಾಲಯದ ಧರ್ಮದರ್ಶಿ ಎಚ್.ಎಂ.ವೀರರಾಜಯ್ಯ ಜೈನ್ ತಿಳಿಸಿದರು.
ಮಹೋತ್ಸವದಲ್ಲಿ ಜೈನ ಮುನಿಶ್ರೀ 108 ಪುಣ್ಯಸಾಗರ ಮಹಾರಾಜರು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಸೋಂದ ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಸೇರಿ ನಾಡಿನ ಸುಮಾರು 20 ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಾ.1ರಂದು ಆರತಿ, ಜಪ ಮತ್ತು ಅನುಷ್ಠಾನಗಳೊಂದಿಗೆ, ಶಾಂತಿ ಚಕ್ರ ಆರಾಧನೆ ನಡೆಯಲಿದೆ. ಮಧ್ಯಾಹ್ನ 3ಗಂಟೆಯ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಲಿದ್ದಾರೆ. ಮುನಿಶ್ರೀ 108 ಪುಣ್ಯಸಾಗರ ಮಹಾರಾಜರು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಸ್ವಾದಿ ಜೈನ ಮಠ ಸೋಂದಾದ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಕಾರ್ಕಳದ ಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಕೊಲ್ಲಾಪುರದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಹಾಗೂ ಆನಂದಪುರದ ಮುರುಘಾ ಮಠದ ಜಗದ್ಗುರು ಡಾ. ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.
ಪಂಚಕಲ್ಯಾಣ ಮಹೋತ್ಸವ ಸಮಿತಿ ಸಂಚಾಲಕಿ ಬಬಿತಾ ಪ್ರೇಮ್‌ಕುಮಾರ್ ಜೈನ್ ಮಾತನಾಡಿ, ಜೈನ ಧರ್ಮದಲ್ಲಿ ಪೂಜಿಸಲ್ಪಡುವ ತೀರ್ಥಂಕರರ ಪೈಕಿ ಪಾರ್ಶ್ವನಾಥ ಸ್ವಾಮಿ 23ನೇಯವರು. ಮೊದಲ ದಿನ ಶಾಂತಿಚಕ್ರ ಆರಾಧನೆ, ಎರಡನೇ ದಿನ ಗರ್ಭಕಲ್ಯಾಣ, ಮೂರನೇ ದಿನ ಜನ್ಮ ಕಲ್ಯಾಣ, ನಾಲ್ಕನೇ ದಿನ ರಾಜ್ಯಾಭಿಷೇಕ ಹಾಗೂ ಐದನೇ ದಿನ ಮಾನಸ್ಥಂಭೋಪರಿ ಜಿನಬಿಂಬ ಸ್ಥಾಪನೆಯೊಂದಿಗೆ ಪಂಚಕಲ್ಯಾಣ ಕಾರ್ಯ ನೆರವೇರಲಿದೆ. ಆರನೇ ದಿನ ಪಾರ್ಶ್ವನಾಥ ಸ್ವಾಮಿಗೆ ಮಸ್ತಕಾಭಿಷೇಕ, 1008 ಕಳಸಗಳಿಂದ ಮಹಾಭಿಷೇಕ ಹಾಗೂ ಮಹಾ ಶಾಂತಿ ಮಂತ್ರ ನೆರವೇರಲಿದೆ ಎಂದು ತಿಳಿಸಿದರು.
ಪಂಚ ಕಲ್ಯಾಣ ಮಹೋತ್ಸವ ಸಮಿತಿಯ ಕಾರ್ಯದರ್ಶಿ ದರ್ಶನ್ ಜೈನ್ ಮಾತನಾಡಿ, ಮಹಾ ಉತ್ಸವದ ಪ್ರಯುಕ್ತ ರಾಜ್ಯಾದ್ಯಂತ ಸುಮಾರು 5 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ದೇಗುಲದಲ್ಲಿ ತ್ರಿಕಾಲ ಅನ್ನದಾಸೋಹ ನಡೆಯಲಿದೆ. ಭಕ್ತರ ವಾಸ್ತವ್ಯಕ್ಕೆಂದು ದೇವಾಲಯದ ಆವರಣದಲ್ಲಿ ತಾತ್ಕಾಲಿಕವಾಗಿ 60 ಶೆಡ್‌ಗಳನ್ನು ನಿರ್ಮಿಸಲಾಗಿದೆ. ಉತ್ಸವದ ನಿಮಿತ್ತ ಹಲವು ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಮಹಾವೀರ ಸಮೂಹ ಸಂಸ್ಥೆಗಳ ಅಧ್ಯಕ್ಷ ಮಹಾವೀರ ನೀಲಜಗಿ, ಉತ್ಸವ ಸಮಿತಿಯ ವಕ್ತಾರ ವಿ.ಟಿ.ಸ್ವಾಮಿ ಉಪಸ್ಥಿತರಿದ್ದರು.