ಉತ್ತಮ ಆಚರಣೆಗಳು ನಿರಂತರ ನಡೆಯಲಿ,  ಆಚಾರ್ಯ ಶ್ರೀ 108 ಪುಣ್ಯಸಾಗರ ಮಹಾರಾಜರು,  ಅಮರಗೋಳದಲ್ಲಿ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ

IMG-20250518-WA0008-1.jpg
Published on

ಹುಬ್ಬಳ್ಳಿ: ಪೂಜೆ, ಧರ್ಮಾಚರಣೆಯಿಂದ ಮನುಷ್ಯನಿಗೆ ಮುಕ್ತಿ ಪ್ರಾಪ್ತಿಯಾಗುತ್ತದೆ. ಸಮ್ಯಕ್ ದರ್ಶನದಿಂದ ಅನಂತ ಪುಣ್ಯವನ್ನು ಗಳಿಸುತ್ತಾನೆ, ಹಾಗಾಗಿ ಪೂಜಾ ವಿಧಾನ, ಉತ್ತಮ ಆಚರಣೆಗಳನ್ನು ನಿತ್ಯ ನಿರಂತರವಾಗಿ ನಡೆಸಬೇಕು ಎಂದು ಅಭಿಕ್ಷಣ ಜ್ಞಾನ ಭಾಸ್ಕರ ಆಚಾರ್ಯ ಶ್ರೀ 108 ಪುಣ್ಯಸಾಗರ ಮಹಾರಾಜರು ಹೇಳಿದರು.

ಇಲ್ಲಿಯ ಅಮರಗೋಳದಲ್ಲಿ ಭಾನುವಾರ ಶ್ರೀಮದ್ ದೇವಾದಿದೇವ ಭಗವಾನ್ 1008 ಪಾರ್ಶ್ವನಾಥ ತೀರ್ಥಂಕರರ ಜಿನಬಿಂಬ ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವದ ದ್ವಾದಶ ವರ್ಷದ ನಿಮಿತ್ತ ಬೃಹತ್ ಸಿದ್ಧಚಕ್ರ ಆರಾಧನೆ ಹಾಗೂ ನೂತನ ಜಿನಬಿಂಬದ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಮಾಂಗಲಿಕ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ನಿತ್ಯವೂ ದೇವರ ಧ್ಯಾನ ಮಾಡಬೇಕು. ಗುರು ಉಪದೇಶವನ್ನು ಆಲಿಸಿ ಪಾಲಿಸಬೇಕು. ಅದರಿಂದ ಎಲ್ಲವೂ ಶುದ್ಧಿಯಾಗುತ್ತದೆ. ಗರ್ಭ ಕಲ್ಯಾಣಕ್ಕೆ ಬಹಳಷ್ಟು ಮಹತ್ವವಿದೆ. ನೋಡಿದ್ದು ಸುಳ್ಳಾಗಬಹುದು, ಆದರೆ, ಜ್ಞಾನ ಎಂದಿಗೂ ಸುಳ್ಳಾಗುವುದಿಲ್ಲ ಎಂದು ಹೇಳಿದರು.

ಬೆಳಗ್ಗೆಯಿಂದ ಆರಂಭವಾದ ಧಾರ್ಮಿಕ ಆಚರಣೆಗಳಿಗೆ ಮಾರ್ಗದರ್ಶನ ಮಾಡಿದ ಮುನಿ ಮಹಾರಾಜರ ಸಾನ್ನಿಧ್ಯದಲ್ಲಿ ಆಚಾರ್ಯ ನಿಮಂತ್ರಣ, ಇಂದ್ರ ಪ್ರತಿಷ್ಠಾ, ಕಂಕಣ ಬಂಧನ ಮುಂತಾದ ಕಾರ್ಯಕ್ರಮಗಳು ಜರುಗಿದವು.

ಬೆಳಗ್ಗೆ ಧರ್ಮ ಧ್ವಜಾರೋಹಣವನ್ನು ಅಮರಗೋಳ ಜೈನ ಸಮಾಜ ಅಧ್ಯಕ್ಷ ಶಾಂತಪ್ಪ ಬ. ದೇವಕ್ಕಿ ನೆರವೇರಿಸಿದರು. ಅಶೋಕ ದೇವಕ್ಕಿ ಹಾಗೂ ಕವಿತಾ ದೇವಕ್ಕಿ ದಂಪತಿ ಮಂಟಪ ಉದ್ಘಾಟನೆ ನೆರವೇರಿಸಿದರು.

ಮಂಗಲ ವಾದ್ಯ ಘೋಷದೊಂದಿಗೆ ಮೆರವಣಿಗೆಯಲ್ಲಿ ಸೌಧರ್ಮ ಇಂದ್ರ- ಇಂದ್ರಾಣಿಯವರನ್ನು ವೇದಿಕೆಗೆ ಕರೆ ತರಲಾಯಿತು. ರಮೇಶ ದೇವಕ್ಕಿ, ವಿಜಯಲಕ್ಷ್ಮಿ ದೇವಕ್ಕಿ, ಪಾರ್ಶ್ವನಾಥ ದೇವಕ್ಕಿ, ಪದ್ಮಾವತಿ ದೇವಕ್ಕಿ, ಪ್ರತಿಷ್ಠಾಚಾರ್ಯರಾದ ಶ್ರೀಮಂದರ ಉಪಾಧ್ಯೆ, ಸ್ಥಾನಿಕ ಪುರೋಹಿತರಾದ ಆದಿನಾಥ ಉಪಾಧ್ಯೆ, ಬಾಲಬ್ರಹ್ಮಚಾರಿ ಶ್ರೀ ಸೋಮದೇವ ಭಯ್ಯಾಜಿ, ಶ್ರಾವಕ, ಶ್ರಾವಕಿಯರು, ಇತರರು ಇದ್ದರು.

ಪಾರ್ಶ್ವನಾಥ ತೀರ್ಥಂಕರ ಜೈನ ಸಮಾಜ, ಮಹಾವೀರ ಯುವಕ ಮಂಡಳ, ಪದ್ಮಾವತಿ ಮಹಿಳಾ ಮಂಡಳ, ಸುಮತಿ ಮಹಿಳಾ ಮಂಡಳದ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಕೋಥಳಿಯ ಪ್ರವಿಣ ಲಕ್ಕಣ್ಣವರ ಹಾಗೂ ತಂಡದವರು ಸಂಗೀತ ಸೇವೆ ನೀಡಿದರು.
ಸಂಜೆ ನಡೆದ ಧರ್ಮಸಭೆಯಲ್ಲಿ ಪಾಲಿಕೆ ಮಾಜಿ ಸದಸ್ಯ ಅಜ್ಜಪ್ಪ ಹೊರಕೇರಿ, ಚಂಬಣ್ಣ ಕರಿಕಟ್ಟಿ, ಜಿ.ಜೆ. ಲೋಬೋಗೋಳ, ಆರ್.ಟಿ. ಅಣ್ಣಿಗೇರಿ, ಶಿವಲಿಂಗಪ್ಪ ನಾಗಣ್ಣವರ, ಶಿದ್ದನಗೌಡ್ರ ಪಾಟೀಲ, ನಾಗಪ್ಪ ಚಿನಗಿ, ರಾಯಪ್ಪ, ಭೂಪಾಲ ದೇವಕ್ಕಿ ಇತರರು ಪಾಲ್ಗೊಂಡಿದ್ದರು. ದಾನಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net