ಧರ್ಮಸ್ಥಳ ಸಂಸ್ಥೆಯಿಂದ ಪಾನಮುಕ್ತರ ಜಿಲ್ಲಾ ಸಮಾವೇಶ

3blrp1
Published on


ಬೇಲೂರು : ಗಾಂಧಿ ಜಯಂತಿ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಹಾಸನ ಜಿಲ್ಲಾ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯಿಂದ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮತಿ ಮತ್ತು ಪಾನಮುಕ್ತರ ಜಿಲ್ಲಾ ಸಮಾವೇಶವನ್ನು ಪಟ್ಟಣದ ಶ್ರೀ ಶಿವಕುಮಾರಸ್ವಾಮೀಜಿ ಸಮುದಾಯ ಭವನದಲ್ಲಿ ಗುರುವಾರ ಆಯೋಜಿಸಲಾಗಿತ್ತು.


ಸಮಾವೇಶಕ್ಕೂ ಮುನ್ನ ಶ್ರೀ ಚನ್ನಕೇಶವಸ್ವಾಮಿ ದೇಗುಲ ಆವರಣದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಪದಾಧಿಕಾರಿಗಳು, ಕಾರ್ಯಕರ್ತರು, ಪಾನ ಮುಕ್ತರು, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ವಿವಿಧ ಬಿತ್ತಿ ಪತ್ರಗಳನ್ನಿಡಿದು ಮದ್ಯಪಾನ ನಿಷೇಧಿಸುವಂತೆ ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು.


ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಸರ್ಕಾರ ಇಂದು ಯಾವುದೇ ಕೆಲಸಗಳನ್ನು ಮಾಡಲು ಆಗದ ಸಂದರ್ಭದಲ್ಲೇ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸರ್ಕಾರಕ್ಕಿಂತ ಹೆಚ್ಚಾಗಿ ರೈತರ, ಜನ ಸಾಮಾನ್ಯರ ಹಲವು ಯೋಜನೆ ರೂಪಿಸಿ ಕೆಲಸಗಳನ್ನು ಮಾಡುವ ಮೂಲಕ ಮನೆ ಮಾತಾಗಿದೆ. ಜತೆಗೆ ಪರುಷರಿಗೆ ಸರಿ ಸಮನಾದ ಕೆಲಸ ಮಾಡುವಂತೆ ಮಹಿಳೆಯರಿಗೆ ಒತ್ತು ನೀಡುತ್ತಿದೆ ಮತ್ತು ಮಧ್ಯಪಾನದಿಂದ ಸಾಕಷ್ಟು ಕುಟುಂಬಗಳು ಬೀದಿ ಪಾಲಾಗುವುದನ್ನು ಕಂಡು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಮದ್ಯವರ್ಜನ ಶಿಬಿರ ಆಯೋಜಿಸಿ ಬಡ ಕುಟುಂಬಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ. ಇದರ ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಉತ್ತಮ ಜೀವನ ನಡೆಸಬೇಕು ಸಲಹೆ ನೀಡಿದರು.


ರಾಜ್ಯ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಸತೀಶ್ ಹೊನ್ನವಳ್ಳಿ ಮಾತನಾಡಿ, ಭಾರತ ಸದೃಡ ದೇಶವಾಗಬೇಕಾದರೆ ದುಶ್ಚಟಮುಕ್ತ ಸಮಾಜವಾಗಬೇಕೆಂದು ಕನಸಿನ ಭಾರತ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಸ್ವಾತಂತ್ರ್ಯಾ ನಂತರದಲ್ಲಿ ರಾಜಕೀಯ ಬದಲಾವಣೆಯಿಂದ ಎಲ್ಲೆಂದರಲ್ಲಿ ಮದ್ಯದಂಗಡಿಗಳು ಪ್ರಾರಂಭವಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.


ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್ ಮಾತನಾಡಿದರು. ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಡಾ.ನವೀನ್‌ಚಂದ್ರಶೆಟ್ಟಿ, ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ.ಪಾಯಸ್, ಉಪಾಧ್ಯಕ್ಷ ಸೋಮಶೇಖರ್, ಖಜಾಂಚಿ ಜಗದೀಶ್, ಪ್ರಾದೇಶಿಕ ನಿರ್ದೇಶಕ ಜಯರಾಮ್ ನೆಲ್ಲಿತ್ತಾಯ ಇತರರು ಇದ್ದರು.

ಚಿತ್ರ:3(ಬಿಎಲ್‌ಆರ್)1-ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹಾಸನ ಜಿಲ್ಲಾ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯಿಂದ ಆಯೋಜಿಸಿದ್ದ ಗಾಂಧಿ ಸ್ಮತಿ ಮತ್ತು ಪಾನಮುಕ್ತರ ಜಿಲ್ಲಾ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net