

ವಿಜಯವಾಣಿ ಸುದ್ದಿಜಾಲ ಉಡುಪಿ
ಯಕ್ಷಗಾನ ಕರಾವಳಿಯ ಮೂಲ ಕಲೆಯಾದರೂ ಸಹ ಯಾವುದೇ ಪ್ರದೇಶದ ಪರಿಮಿತಿ ಅಥವಾ ಯಾವುದೇ ಭಾಷೆಯ ಬಂಧವೂ ಇಲ್ಲ. ಅದೊಂದು ಸೀಮಾತೀತ ಕಲೆ. ಯಾವುದೇ ಕಲೆ ಸೀಮಾತೀತವಾಗಿ ಬೆಳೆದಾಗ ಆ ಕಲೆಯ ಮಹತ್ವ ಇನ್ನಷ್ಟು ಪ್ರಸಾರಗೊಳ್ಳುತ್ತದೆ. ಯಕ್ಷಗಾನ ನಮ್ಮೆಲ್ಲರ ಹೆಮ್ಮೆಯಾಗಿದ್ದು ಎಲ್ಲ ಮಾಹಿತಿ, ಜ್ಞಾನ ಒಳಗೊಂಡ ಸಂಪೂರ್ಣ ಕಲೆಯಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿಯ 8ನೇ ವಾರ್ಷಿಕೋತ್ಸವದ ನಿಮಿತ್ತ ಜೂನ್ 15ರಂದು ಸಂಜೆ ಆಯೋಜಿಸಿದ್ದ ವೆಂಟ್ರಾಯ ಐತಾಳ ಸಂಸ್ಮರಣಾ ಯಕ್ಷಗಾನ ಸಪ್ತಾಹ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಧರ್ಮದರ್ಶಿ ಹರಿಕೃಷ್ಣ ಪುನರೂರು, ಶ್ರೀಕ್ಷೇತ್ರ ಕಟೀಲು ಆನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಅಸ್ರಣ್ಣ, ಯಕ್ಷಗಾನ ಚಿಂತಕ ಡಾ. ಎಂ.ಪ್ರಭಾಕರ ಜೋಶಿ, ಯಕ್ಷನಂದನ ಸಂಚಾಲಕ ಸಂತೋಷ ಐತಾಳ, ಕರ್ನಾಟಕ ಬ್ಯಾಂಕ್ ಮಂಗಳೂರಿನ ಡಿಜಿಎಂ ವಸಂತ ಹೇರ್ಳೆ, ರಮೇಶ ಭಟ್ ಉಪಸ್ಥಿತರಿದ್ದರು.
ಆದ್ಯತಾ, ಶ್ರಾವ್ಯಾ ಹಾಗೂ ಸುಶಾಂತ್ ಗಣಪತಿ ಸ್ತುತಿ ಹಾಡಿದರು. ಗೋಪಿಕಾ ಮಯ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸುನೀಲ ಮುಂಡ್ಕೂರು ವಂದಿಸಿದರು. ರವಿನಂದನ ಕಾರ್ಯಕ್ರಮ ನಿರೂಪಿಸಿದರು. ರಮೇಶ ಮಯ್ಯ, ಸತೀಶ ಮಯ್ಯ, ಶಕುಂತಲಾ, ವಲ್ಲಭ ತಂತ್ರಿ, ವಾದಿರಾಜ, ಸುಧನ್ವ ಹಾಗೂ ಸ್ತುತಿ ಸಹಕರಿಸಿದರು. ಬಳಿಕ, ಯಕ್ಷಗುರು ರಾಕೇಶ ರೈ ಅಡ್ಕ ನಿರ್ದೇಶನದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ತಾಮ್ರಧ್ವಜ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು.
ಯಕ್ಷಗಾನವು ಕರಾವಳಿಯ ಹಿಂದು ಸಮಾಜದಲ್ಲಿ ಸಂಸ್ಕಾರ ಬಿತ್ತಿದ ಕಲೆಯಾಗಿದೆ. ಪೌರಾಣಿಕ, ಸಾಮಾಜಿಕ, ಕಥಾನಕಗಳ ಮೂಲಕ ಜನರಿಗೆ ಉತ್ತಮ ಸಂದೇಶ ನೀಡುವ ಅನುಪಮ ಕಲೆಯಾಗಿದೆ. ಈ ಕಲೆಯ ಅಭಿಮಾನಿಗಳು, ಕಲಾವಿದರೂ ಸಹ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವುದಿಲ್ಲ. ಸಮುದ್ರ ನಗರಿ ಮುಂಬಯಿಯಲ್ಲಿಯೂ ಸಹ ಯಕ್ಷಗಾನದ ಖದರು ಪಸರಿಸುವಲ್ಲಿ ವೆಂಕಟ್ರಾಯ ಐತಾಳರ ಯೋಗದಾನ ಬಹಳ ಇದೆ. | ಸಚ್ಚಿದಾನಂದ ಭಾರತೀ ಸ್ವಾಮೀಜಿ. ಎಡನೀರು ಮಠ