ಮಂಗಳೂರು : ನಗರದ ಹೊರ ವಲಯದ ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ಶ್ರವಣ ಬೆಳಗೊಳದ ಹತ್ತಿರದ ಹಳ್ಳಿಯೊಂದರ ವಾಸಿ ಕೃಷಿಕರೊಬ್ಬರನ್ನು ಪಣಂಬೂರು ಪೊಲೀಸರು ತಮ್ಮ ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ.
ಮೇ 22ರಂದು ಸಂಜೆ 7 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಆರೋಗ್ಯ ಸಮಸ್ಯೆ ಹಾಗೂ ಸಣ್ಣ ಮಟ್ಟಿಗಿನ ಹಣಕಾಸು ಸಮಸ್ಯೆ ಇದ್ದ ಹಾಸನ ಮೂಲದ ಈ ವ್ಯಕ್ತಿ ಅಂದು ಬೆಳಗ್ಗೆ ಮನೆಯಲ್ಲಿ ಯಾರಿಗೂ ಹೇಳದೆ ಮನೆ ಬಿಟ್ಟು ಬಂದಿದ್ದರು. ಮೊಬೈಲ್ ಫೋನನ್ನು ಮಾತ್ರ ಆನ್‌ನಲ್ಲಿ ಇಟ್ಟುಕೊಂಡಿದ್ದರು. ಫೋನ್ ಮುಖಾಂತರ ಮನೆಯವರು, ಸಂಬಂಧಿಕರು ಅವರನ್ನು ಸಂಪರ್ಕಿಸಿ ಮನೆಗೆ ಹಿಂದಿರುಗಿ ಬರುವಂತೆ ಎಷ್ಟು ಬೇಡಿಕೊಂಡರೂ ತಾನು ಎಲ್ಲಿದ್ದೇನೆ ಎಂದು ತನ್ನ ಇರುವಿಕೆ ಬಗ್ಗೆ ಹೇಳದೆ ತಾನು ಸಾಯುವುದಾಗಿ ಹೇಳಿಕೊಂಡಿದ್ದರು.
ಕೊನೆಗೆ ಅವರು ಪಣಂಬೂರು ಬೀಚ್ ಹತ್ತಿರ ಇರುವ ಬಗ್ಗೆ ಮಾಹಿತಿ ಪಡೆದ ಸಂಬಂಧಿಕರು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮುಖಾಂತರ ಸಂಜೆ 5.30ರ ಸುಮಾರಿಗೆ ಪಣಂಬೂರು ಪೊಲೀಸ್ ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್‌ರ ಅವರನ್ನು ಸಂಪರ್ಕಿಸಿ ವಿಚಾರ ತಿಳಿಸಿದ್ದಾರೆ. ಹೇಗಾದರೂ ಮಾಡಿ ಅವರನ್ನು ಕಾಪಾಡುವಂತೆಯೂ ಕೇಳಿಕೊಂಡಿದ್ದರು. ಪೊಲೀಸ್ ಇನ್ಸ್‌ಪೆಕ್ಟರ್ ಸಲೀಂ ಅವರು ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ತಮ್ಮ ತಂಡದೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದ ವ್ಯಕ್ತಿಯ ಪತ್ತೆಗಾಗಿ ಕಾರ್ಯಪ್ರವೃತ್ತರಾಗಿದ್ದಾರೆ.
ಪೊಲೀಸರ ಹುಡುಕಾಟ ಯಶಸ್ವಿ
ಪೊಲೀಸ್ ಕಮೀಷನರ್ ಕಚೇರಿಯ ತಾಂತ್ರಿಕ ಘಟಕದೊಂದಿಗೆ ಸಮನ್ವಯ ಸಾಧಿಸಿ ಆತ್ಮಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯ ಹುಡುಕಾಟಕ್ಕೆ ತೊಡಗಿದ್ದಾರೆ. ಮೊದಲಿಗೆ ಫೋನ್ ಮಾಡಿ ಸಂಪರ್ಕ ಸಾಧಿಸಿದ ಪೊಲೀಸರು ಸಾಂತ್ವನ ಹೇಳಿದ್ದಾರೆ. ಎಷ್ಟು ಸಾಂತ್ವಾನ ಹೇಳಿದರೂ ವ್ಯಕ್ತಿ ಸ್ಪಂದಿಸಿಲ್ಲ. ಕೊನೆಗೆ ನಿರಂತರ ಒಂದೂವರೆ ಗಂಟೆ ಕಾಲ ಹುಡುಕಾಡಿದ ಬಳಿಕ ರಾತ್ರಿ 7ಗಂಟೆಗೆ ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಆತ್ಮವಿಶ್ವಾಸ ತುಂಬಿದ ಪೊಲೀಸರು
ವ್ಯಕ್ತಿ ಪತ್ತೆಯಾದ ಸ್ಥಳವು ಪಣಂಬೂರು ಠಾಣಾ ವ್ಯಾಪ್ತಿಯ ಹೊರಗಡೆ ಕಾವೂರು ಠಾಣಾ ವ್ಯಾಪ್ತಿಗೆ ಸೇರಿದ್ದರೂ ಒಂದು ಅಮೂಲ್ಯ ಜೀವವನ್ನು ಉಳಿಸುವ ಉದ್ದೇಶದಲ್ಲಿ ಸರಹದ್ದಿನ ಬಗ್ಗೆ ಚಿಂತಿಸದೇ ಸಕಾಲಿಕ ಕ್ರಮ ಕೈಗೊಂಡು ಅವರನ್ನು ಪಣಂಬೂರು ಠಾಣೆಗೆ ಕರೆದುಕೊಂಡು ಬಂದು ನೀರು, ಆಹಾರ ನೀಡಿ, ಸಾಂತ್ವನ, ಬುದ್ದಿ ಮಾತು ಹೇಳಿ ಆತ್ಮ ವಿಶ್ವಾಸ ತುಂಬಿದ್ದಾರೆ. ಕೊನೆಗೆ ಅವರ ಊರಿನಿಂದ ಬಂದ ಸಂಬಂಧಿಕರ ಜತೆ ಅವರನ್ನು ಮನೆಗೆ ಕಳಿಸಿ ಕೊಟ್ಟಿರುತ್ತಾರೆ. ವ್ಯಕ್ತಿಯ ಪ್ರಾಣ ಉಳಿಸಿದ ಪಣಂಬೂರು ಪೊಲೀಸರ ಕಾರ್ಯಕ್ಕೆ ಸಂಬಂಧಿಕರು ಹರ್ಷ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿರುತ್ತಾರೆ.
ಪಣಂಬೂರು ಪೊಲೀಸ್ ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್, ಸಬ್ ಇನ್ಸ್‌ಪೆಕ್ಟರ್ ಜ್ಞಾನಶೇಖರ್, ಎಎಸ್‌ಐ ಸುಬ್ರಹ್ಮಣ್ಯ, ಸಿಬಂದಿ ಸುರೇಂದ್ರ, ದೀಪಕ್, ಇಮ್ತಿಯಾಝ್, ರಾಕೇಶ್, ಫಕ್ಕಿರೇಶ್, ಶರಣ ಬಸವ, ಅನ್ವರ್, ಮಂಜುನಾಥ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.