

ಮಂಗಳೂರು: ನಗರದ ಹೊರ ವಲಯದ ಪಣಂಬೂರು ಬೀಚ್‌ನಲ್ಲಿ ಭಾನುವಾರ ಸಂಜೆ ಮೂವರು ಯುವಕರು ನೀರುಪಾಲಾಗಿರುವ ದಾರುಣ ಘಟನೆ ನಡೆದಿದೆ.
ಮಿಶೋ ಸಂಸ್ಥೆಯಲ್ಲಿ ಡೆಲಿವರಿ ಕೆಲಸ ಮಾಡುತ್ತಿದ್ದ ಮಿಲನ್ (20), ಕೈಕಂಬ ರೋಸಾ ಮಿಸ್ತಿಕಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಲಿಖಿತ್ (18) ಹಾಗೂ ಬೈಕಂಪಾಡಿ ಮುಂಗಾರು ಜಂಕ್ಷನ್‌ನಲ್ಲಿರುವ ಎಂಎಂಆರ್ ಕಂಪೆನಿಯಲ್ಲಿ ಮೇಲ್ವಿಚಾರಕನಾಗಿದ್ದ ನಾಗರಾಜ್ (24) ನೀರುಪಾಲಾದವರು.
ರಜಾ ದಿನವಾದ ಕಾರಣ ಭಾನುವಾರ ವಿಹಾರಕ್ಕೆಂದು ಪಣಂಬೂರು ಬೀಚ್‌ಗೆ ಬಂದಿದ್ದರು. ಸಂಜೆ ವೇಳೆ ಯುವಕರು ನೀರಿನಲ್ಲಿ ಆಟವಾಡುತ್ತಿದ್ದಾಗ ಬೃಹತ್ ಗಾತ್ರದ ಅಲೆ ಬಂದು ಬಡಿದಿದೆ. ಈ ಸಂದರ್ಭ ನೀರಿನಲ್ಲಿ ಕೊಚ್ಚಿ ಹೋದ ಪರಿಣಾಮ ಮೂವರು ಕೂಡ ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ.
ಸಂಜೆಯ ವೇಳೆ ಬೃಹತ್ ಅಲೆಗಳು ಬಡಿಯುತ್ತಿದ್ದುದರಿಂದ ನೀರಿನಿಂದ ಮೇಲೆ ಬರುವಂತೆ ಅಲ್ಲಿ ಕರ್ತವ್ಯದಲ್ಲಿದ್ದ ಲೈಫ್ ಗಾರ್ಡ್‌ಗಳು ಸೂಚನೆ ನೀಡಿದ್ದರು. ಆದರೂ ಅದನ್ನು ಅವರು ಲೆಕ್ಕಿಸದೆ ಮುಂದುವರಿದಿದ್ದರು. ಭಾನುವಾರವಾದ ಕಾರಣ ಬೀಚ್‌ನಲ್ಲಿ ಹೆಚ್ಚಿನ ಪ್ರವಾಸಿಗರು ಇದ್ದರು. ನಾಪತ್ತೆಯಾದವರನ್ನು ರಾತ್ರಿಯ ತನಕ ಹುಡುಕಾಟ ನಡೆಸಲಾಯಿತಾದರೂ ಅವರು ಪತ್ತೆಯಾಗಿಲ್ಲ. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ
.ಫೆ.27ರಂದು ಹಳೆಯಂಗಡಿ ಸಮೀಪ ಸುರತ್ಕಲ್ ವಿದ್ಯಾದಾಯಿನಿ ಪ್ರೌಢಶಾಲೆಯ ನಾಲ್ವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ನಂದಿನಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಇನ್ನೊಂದು ದುರಂತ ಸಂಭವಿಸಿದ್ದು, ಎಳೆಯ ಪ್ರಾಯದ ಯುವಕರು ನೀರುಪಾಲಾಗಿರುವುದು ಜನರಲ್ಲಿ ಆಘಾತ ಉಂಟು ಮಾಡಿದೆ.