ಪಣಂಬೂರು ಬೀಚ್‌ಗೆ ಹೊಸರೂಪ: ಗೋವಾ ಮಾದರಿಯಲ್ಲಿ ಅಭಿವೃದ್ಧಿ ಜಿಲ್ಲಾಡಳಿತದಿಂದ 10 ವರ್ಷ ಖಾಸಗಿ ಸಂಸ್ಥೆಗೆ ಗುತ್ತಿಗೆ

Panambooru beach
Published on

ಶ್ರವಣ್ ಕುಮಾರ್ ನಾಳ, ಮಂಗಳೂರು

ದೇಶದ ಪ್ರಮುಖ ಕಡಲ ತೀರ, ವರ್ಷಂಪ್ರತಿ ದೇಶ, ವಿದೇಶಗಳ ದಾಖಲೆ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುವ ಪಣಂಬೂರು ಬೀಚ್ ಇನ್ನು ಗೋವಾ ಮಾದರಿಯಲ್ಲಿ ಅಭಿವೃದ್ಧಿ ಹೊಂದಲಿದೆ.

ತೌಕ್ತೆ ಚಂಡಮಾರುತ ಪರಿಣಾಮ ಕಡಲ್ಕೊರೆತ ಹಾಗೂ ಕೋವಿಡ್ ಹೊಡೆತದಿಂದ ಪಣಂಬೂರು ಬೀಚ್ ತನ್ನ ಮೂಲ ಸೌಂದರ್ಯವನ್ನು ಕಳೆದುಕೊಂಡು ನಿರ್ವಣೆಯಿಲ್ಲದೆ ಸೊರಗಿತ್ತು. ಕರಾವಳಿಯಲ್ಲಿ ಬೀಚ್ ಟೂರಿಸಂ ಉತ್ತೇಜಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಪಣಂಬೂರು ಬೀಚ್ ನಿರ್ವಹಣೆಗೆ ಟೆಂಡರ್ ಕರೆದಿದ್ದು, ಮಂಗಳೂರಿನ ಭಂಡಾರಿ ಬಿಲ್ಡರ್ಸ್‌ ಗುತ್ತಿಗೆ ಪಡೆದುಕೊಂಡಿದೆ. ಗುತ್ತಿಗೆ ಪಡೆದ ಸಂಸ್ಥೆಯು ತನ್ನ ಸಹಸಂಸ್ಥೆ ಎಲ್‌ಆರ್‌ಎಸ್ ಬೀಚ್‌ಟೂರಿಸಂ ಸಂಸ್ಥೆಯ ಮೂಲಕ 10 ವರ್ಷ ನಿರ್ವಹಣಾ ಕಾರ್ಯ ಕೈಗೊಂಡಿದೆ. ಬೀಚ್ ಅಭಿವೃದ್ಧಿಯಿಂದ ಜಿಲ್ಲಾಡಳಿತಕ್ಕೆ ವಾರ್ಷಿಕ 1.20 ಕೋಟಿ ರೂ. ಆದಾಯ ಬರಲಿದೆ.

ಸಮಾವೇಶ, ಸಮಾರಂಭಗಳಿಗೆ ಸ್ಥಳಾವಕಾಶ: ಬೀಚ್ ವಿಲ್ಲಾ: ಪಣಂಬೂರು ಬೀಚ್ ಅಭಿವೃದ್ಧಿಗಾಗಿ ಗುತ್ತಿಗೆ ಪಡೆದ ಸಂಸ್ಥೆಗೆ 15.5 ಎಕರೆ ವಿಶಾಲ ಕಿನಾರೆಯನ್ನು ಜಿಲ್ಲಾಡಳಿತವು ನೀಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಗುಣಮಟ್ಟದ ಫುಡ್ ಕೋರ್ಟ್ ನಿರ್ಮಾಣವಾಗಲಿದೆ. ಜತೆಗೆ ಗೋವಾ ಮಾದರಿಯ ಬೀಚ್ ವಿಲ್ಲಾಗಳು, ಸಸ್ಯಾಹಾರಿ ಹಾಗೂ ಮಾಂಸಾಹಾರಿ ರೆಸ್ಟೋರೆಂಟ್‌ಗಳು ನಿರ್ಮಾಣಗೊಳ್ಳಲಿವೆ. ಬೃಹತ್ ಸಮಾವೇಶ, ಮದುವೆ ಸಮಾರಂಭ, ನೈಟ್ ಅ್ಯಂಡ್ ಡೇ ಪಾರ್ಟಿ ಕಾರ್ಯಕ್ರಮಗಳಿಗೆ ಪಣಂಬೂರು ಬೀಚ್ ತೆರೆದುಕೊಳ್ಳಲಿದೆ.

ಪ್ಯಾರಾಸೈಲಿಂಗ್ ವಿಶೇಷ ಆಕರ್ಷಣೆ: ಬೀಚ್ ಟೂರಿಸಂ ಉತ್ತೇಜನದಿಂದ ಇಲ್ಲಿ ಜಲಕ್ರೀಡೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು, ವಾಟರ್ ಬೋಟ್ ರೈಡ್, ಸ್ಪೀಡ್ ಬೋಟಿಂಗ್, ಜೆಸ್ಕಿ, ಬನಾನ ರೈಡ್, ಬಂಪರ್ ರೈಡ್, ಸಾಂಪ್ರದಾಯಿಕ ದೂಣಿ ವಿಹಾರ ಆಯೋಜಿಸಲು ಯೋಜನೆ ಹಮ್ಮಿಕೊಂಡಿದೆ. ಗೋವಾ ಹೊರತುಪಡಿಸಿ ದೇಶದ ಪ್ರಮುಖ ಬೀಚ್‌ಗಳಲ್ಲಿ ಕಂಡುಬರುವ ಪ್ಯಾರಾಸೈಲಿಂಗ್, ಜಲಕ್ರೀಡೆಗಳು ಪಣಂಬೂರು ಬೀಚ್‌ನ ಪ್ರಮುಖ ಆಕರ್ಷಣೆಯಾಗಲಿವೆ. ಕರಾವಳಿಯ ಸಾಂಪ್ರದಾಯಿಕ ಶೈಲಿಗೆ ಧಕ್ಕೆಯಾಗದಂತೆ ಪಣಂಬೂರು ಬೀಚ್ ಅಭಿವೃದ್ಧಿಗೆ ಎಲ್‌ಆರ್‌ಎಸ್ ಬೀಚ್ ಟೂರಿಸಂ ಸಂಸ್ಥೆ ಯೋಜನೆ ರೂಪಿಸಿದ್ದು, ಸುಸಜ್ಜಿತ ಆಟೋ ಪಾರ್ಕ್, ವಿಶೇಷ ವೀಕೆಂಡ್ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿವೆ.

ಕರಾವಳಿಯ ಸಾಂಪ್ರದಾಯಿಕ ವ್ಯವಸ್ಥೆಗೆ ಧಕ್ಕೆಯಾಗದಂತೆ ಪಣಂಬೂರು ಬೀಚ್ ಅಭಿವೃದ್ಧಿಗೆ ಮಹತ್ತರ ಯೋಜನೆ ರೂಪಿಸಲಾಗಿದೆ. ಮೊದಲಿಗೆ ಪಣಂಬೂರು ಬೀಚ್‌ನ ಮೂಲ ಸೌಕರ್ಯ ಅಭಿವೃದ್ಧಿಗೊಳಿಸಿ ಪ್ರವಾಸಿಗರನ್ನು ಆಕರ್ಷಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

-ಲಕ್ಷ್ಮೀಶ ಭಂಡಾರಿ, ಪಾಲುದಾರ, ಎಲ್‌ಆರ್‌ಎಸ್ ಬೀಚ್ ಟೂರಿಸಂ ಸಂಸ್ಥೆ

ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರಾವಳಿ ಭಾಗದ 5 ಪ್ರಮುಖ ಬೀಚ್‌ಗಳ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗಿದೆ. ಭವಿಷ್ಯದಲ್ಲಿ ಪಣಂಬೂರು ಬೀಚ್ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿಗರನ್ನು ಆಕರ್ಷಿಸಲು ಬೀಚ್ ಸಂಪರ್ಕಿಸುವ ರಸ್ತೆ, ಪಾರ್ಕಿಂಗ್ ವ್ಯವಸ್ಥೆ, ಸಾರಿಗೆ- ರಕ್ಷಣಾ ವ್ಯವಸ್ಥೆಗೆ ಯೋಜನೆ ರೂಪಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.

-ಆನಂದ್ ಸಿಂಗ್, ಪ್ರವಾಸೋದ್ಯಮ ಸಚಿವ

ಬೀಚ್ ಟೂರಿಸಂ ಉತ್ತೇಜಿಸುವ ನಿಟ್ಟಿನಲ್ಲಿ ಪಣಂಬೂರು ಬೀಚ್ ಅಧುನಿಕ ಶೈಲಿಯಲ್ಲಿ ಅಭಿವೃದ್ಧಿಗೊಳಿಸಲು ತೀರ್ಮಾನಿಸಲಾಗಿದೆ. ವಾಟರ್ ಸ್ಪೋರ್ಟ್ಸ್, ವೀಕೆಂಡ್ ಕಾರ್ಯಕ್ರಮಗಳು, ಬೀಚ್ ವಿಲ್ಲಾ, ರೆಸ್ಟೋರೆಂಟ್, ಫುಡ್ ಕೋರ್ಟ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

-ಡಾ. ರಾಜೇಶ್ ಹುಕ್ಕೇರಿ, ಪಾಲುದಾರರು

ಎಲ್‌ಆರ್‌ಎಸ್ ಬೀಚ್ ಟೂರಿಸಂ ಸಂಸ್ಥೆ, ಪಣಂಬೂರು ಬೀಚ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net