ಪಣಂಬೂರು ಬೀಚ್ ಪರಿಸರ ಗಲೀಜು ಮೊದಲ ಮಳೆಗೆ ರಸ್ತೆಯಲ್ಲಿ ತ್ಯಾಜ್ಯ ನೀರಿನ ಸಂಗ್ರಹ ವಾಹನ ಸಂಚಾರಕ್ಕೂ ಸಮಸ್ಯೆ

mng--21 may panamboor beach
Published on


ಹರೀಶ್ ಮೋಟುಕಾನ ಮಂಗಳೂರು


ಸಾವಿರಾರು ಪ್ರವಾಸಿಗರು ಭೇಟಿ ನೀಡುವ ಪಣಂಬೂರು ಬೀಚ್ ಪರಿಸರ ಮೊದಲ ಮಳೆಗೆ ಕೆಸರುಗದ್ದೆಯಂತಾಗಿದೆ. ಮಳೆ ನೀರು ಹರಿದು ಹೋಗದೆ ಪ್ರವೇಶ ದ್ವಾರದಲ್ಲೇ ನಿಂತಿದೆ. ಇದರಿಂದ ಬೀಚ್ ಪ್ರವೇಶಿಸುವವರು ತೊಂದರೆ ಅನುಭವಿಸುವಂತಾಗಿದೆ.


ಪ್ರತಿ ದಿನ ಬೆಳಗ್ಗೆಯಿಂದ ಸಂಜೆ ತನಕ ರಾಜ್ಯ, ಹೊರ ರಾಜ್ಯದ ಸಾವಿರಾರು ಪ್ರವಾಸಿಗರು ಬೀಚ್‌ಗೆ ಬರುತ್ತಾರೆ. ಇಲ್ಲಿ ಬರುತ್ತಿದ್ದಂತೆ ಪರಿಸರ ವೀಕ್ಷಿಸಿದ ಮೇಲೆ ಅವರ ಉತ್ಸಾಹವೇ ಕರಗಿ ಹೋಗುವ ಸ್ಥಿತಿ ಇದೆ. ಪಾರ್ಕಿಂಗ್ ಸ್ಥಳದ ಎದುರು ಭಾಗದಲ್ಲೂ ಭಾರಿ ಪ್ರಮಾಣದಲ್ಲಿ ರಸ್ತೆಯಲ್ಲೇ ನೀರು ನಿಂತಿದೆ.
ಕಾಂಕ್ರೀಟ್ ರಸ್ತೆಯಿಂದ ಹರಿದು ಬರುವ ಸಿಮೆಂಟ್, ಕಲ್ಲಿದ್ದಲು ಮಿಶ್ರಿತ ನೀರು ಕಪ್ಪಾಗಿ ಬೀಚ್ ಪ್ರವೇಶ ದ್ವಾರದ ಎದುರು ಸಂಗ್ರಹಗೊಂಡಿದೆ. ಇಲ್ಲಿ ಬರುವ ಪ್ರವಾಸಿಗರಿಗೆ ನಡೆದಾಡಲು ಸಾಧ್ಯವಿಲ್ಲದ ಸ್ಥಿತಿ ಇದೆ. ನೀರು ಹರಿದು ಹೋಗುವಲ್ಲಿ ಬ್ಲಾಕ್ ಆದ ಪರಿಣಾಮ ಮಳೆ ನೀರು ಇಲ್ಲಿಯೇ ಸಂಗ್ರಹಗೊಂಡಿದೆ. ನಿರಂತರ ಮಳೆಯಾದರೆ ರಸ್ತೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ವಾಹನ ಪ್ರವೇಶಿಸಲು ಸಾಧ್ಯವಾಗದ ಸ್ಥಿತಿ ಎದುರಾಗುವ ಸಾಧ್ಯತೆ ಇದೆ.


ಎಲ್ಲೆಂದರಲ್ಲಿ ತ್ಯಾಜ್ಯ
ಪಣಂಬೂರು ಬೀಚ್ ಪರಿಸರದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಚೀಲ, ಬಾಟಲಿ ಮೊದಲಾದ ತ್ಯಾಜ್ಯ ಎಲ್ಲೆಂದರಲ್ಲಿ ಬಿದ್ದುಕೊಂಡಿವೆ. ಕಡಲ ತೀರದಲ್ಲೂ ಭಾರೀ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಾಟಲಿ ಮತ್ತಿತರ ತ್ಯಾಜ್ಯ ಹರಡಿಕೊಂಡಿವೆ. ಸಮುದ್ರಕ್ಕೆ ಎಸೆಯಲಾದ ಎಲ್ಲ ತ್ಯಾಜ್ಯಗಳು ಕಿನಾರೆಯಲ್ಲಿ ತುಂಬಿಕೊಂಡಿದೆ. ಇಲ್ಲಿರುವ ಅಂಗಡಿ ಪರಿಸರದಲ್ಲಿ ಪ್ರತಿ ದಿನ ಶುಚಿಗೊಳಿಸದೆ ಇರುವುದರಿಂದ ಇಷ್ಟೊಂದು ಪ್ರಮಾಣದಲ್ಲಿ ಕಸ ರಾಶಿ ಬೀಳಲು ಕಾರಣವಾಗುತ್ತಿದೆ. ಕೆಲವೊಮ್ಮೆ ಸಂಘ ಸಂಸ್ಥೆಯವರು ಬೀಚ್ ಕ್ಲೀನ್ ಮಾಡುವುದನ್ನು ಬಿಟ್ಟರೆ ಇನ್ಯಾರೂ ಶುಚಿತ್ವ ಕಡೆಗೆ ಗಮನ ನೀಡದೆ ಇರುವುದು ಗಮನಕ್ಕೆ ಬಂದಿದೆ.

ಅಪಾಯದ ಅರಿವಿರಲಿ
ಪಣಂಬೂರು ಕಡಲತೀರ ಅತ್ಯಂತ ಅಪಾಯಕಾರಿ. ಮಕ್ಕಳು, ಯುವಕರು ಸಮುದ್ರಕ್ಕಿಳಿದು ದೂರದ ತನಕ ಹೋಗುತ್ತಿರುವುದು ಕಂಡು ಬರುತ್ತಿದೆ. ಇಲ್ಲಿನ ಸುರಕ್ಷತಾ ಸಿಬ್ಬಂದಿ ಎಚ್ಚರಿಕೆ ನೀಡಿದರೂ ಅದನ್ನು ಪಾಲಿಸದೆ ಅಪಾಯ ತಂದುಕೊಳ್ಳುವುದರ ಕಡೆಗೆ ಎಚ್ಚರ ವಹಿಸಬೇಕಾಗಿದೆ. ಮಳೆಗಾಲದಲ್ಲಿ ಕಡಲಿನ ಅಬ್ಬರ ಹೆಚ್ಚಾಗಿರುವುದರಿಂದ ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕಾಗಿದೆ. ಇಲ್ಲಿ ಎಚ್ಚರಿಕೆ ನಾಮಫಲಕ ಅಳವಡಿಸಬೇಕಾಗಿದೆ.

ಪಣಂಬೂರು ಕಡಲ ತೀರದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಿಲ್ಲ. ಹೊರ ಜಿಲ್ಲೆ, ರಾಜ್ಯದಿಂದ ಪ್ರವಾಸಿಗರು ಬರುವಾಗ ಪರಿಸರ ಶುಚಿತ್ವದ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಇಲ್ಲದಿದ್ದರೆ ಮಂಗಳೂರಿಗರ ಮರ್ಯಾದೆ ಹೋಗುತ್ತದೆ. ಮಳೆ ನೀರು ನಿಲ್ಲದಂತೆ ಕ್ರಮ ವಹಿಸಬೇಕಾಗಿದೆ.
ಉದಯ ಕಿರಣ್
ಖಾಸಗಿ ಉದ್ಯೋಗಿ ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net