

ಮಂಗಳೂರು: ಪಣಂಬೂರು ಬಳಿ ಶುಕ್ರವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಯುವತಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.
ಉಡುಪಿ ಉಪ್ಪಿನಕುದ್ರು ನಿವಾಸಿ ಪೂರ್ಣಿಮಾ (29) ಮೃತಪಟ್ಟವರು. ಉರ್ವ ದೇವಸ್ಥಾನಕ್ಕೆಂದು ಸಹೋದರಿ ಮಾನಸ ಉಡುಪ ಜತೆ ಹೊನ್ನಕಟ್ಟೆ ಕುಳಾಯಿಯ ಮನೆಯಿಂದ ಸ್ಕೂಟರ್‌ನಲ್ಲಿ ಹೊರಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಿದ್ದಾಗ ಪಣಂಬೂರು ಪೊಲೀಸ್ ಠಾಣೆ ಕ್ರಾಸ್‌ಗಿಂತ ಸ್ವಲ್ಪ ಮುಂದೆ ಗೇಲ್ ಗ್ಯಾಸ್ ಪಂಪ್ ಬಳಿ ತಲುಪಿದಾಗ ಸ್ಕೂಟರಿನ ಬಲಭಾಗದಿಂದ ಚಾಲಕ ದೀಪಕ್ ಸುನಾರ್ ಎಂಬಾತ ಅತಿ ವೇಗ ಮತ್ತು ನಿರ್ಲಕ್ಷೃದಿಂದ ಚಲಾಯಿಸಿಕೊಂಡು ಬಂದ ಸಿಮೆಂಟ್ ಮಿಕ್ಸರ್ ಲಾರಿಯನ್ನು ಏಕಾಏಕಿ ಎಡಕ್ಕೆ ತಿರುಗಿಸಿದಾಗ ಅದರ ಬಾಡಿ ಸ್ಕೂಟರ್‌ನ ಹ್ಯಾಂಡಲ್‌ಗೆ ತಾಗಿದೆ. ಪರಿಣಾಮ ಪೂರ್ಣಿಮಾ ಅವರು ಬಲಕ್ಕೆ ರಸ್ತೆಗೆ ಬಿದ್ದಿದ್ದಾರೆ. ಈ ಸಂದರ್ಭ ಲಾರಿಯ ಹಿಂಭಾಗದ ಚಕ್ರ ಅವರ ಹೊಟ್ಟೆ ಮತ್ತು ಎಡ ಕೈ ಮೇಲೆ ಹಾದು ಹೋಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮಾನಸ ಅವರು ಎಡಭಾಗಕ್ಕೆ ಬಿದ್ದು, ಕೈಗೆ ತರಚಿದ ಗಾಯವಾಗಿದೆ. ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.