

ಪುತ್ತೂರು: ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಪಾಣಾಜೆಯಲ್ಲಿ ದಾಸ್ತಾನಿರಿಸಿದ್ದ ಸುಲಿದ ಅಡಿಕೆಯನ್ನು ಮನೆಯ ಗೋದಾಮು ಬೀಗ ಮುರಿದು ಕದ್ದೊಯಿದಿದ್ದಾರೆ.
ಪುತ್ತೂರು ತಾಲೂಕು ಪಾಣಾಜೆ ಗ್ರಾಮ ನಿವಾಸಿ ಅಬ್ದುಲ್ ಬುರುಹಾನ್ (47) ಎಂಬವರಿಗೆ ಸರಿದ ಗೋದಾಮಾಗಿದೆ.
ಅಬ್ದುಲ್ ಬುರುಹಾನ್ ಅವರು ನ.22 ರಂದು ಸುಲಿದ ಅಡಕೆಯನ್ನು ಗೋಣಿ ಚೀಲಗಳಲ್ಲಿ ತುಂಬಿಸಿ ಗೋದಾಮಿನಲ್ಲಿ ಇಟ್ಟಿದ್ದರು. ರಾತ್ರಿ ಬಾಗಿಲು ಹಾಕಿ ಹೋಗಿದ್ದು, ನ.23 ರ ಬೆಳಗ್ಗೆ ನೋಡಿದಾಗ ಬೀಗವನ್ನು ಯಾವುದೋ ಆಯುಧದಿಂದ ಮುರಿದಿರುವುದು ಕಂಡು ಬಂದಿದೆ. ಒಳಗಡೆ ಪರಿಶೀಲಿಸಿದಾಗ, ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ ಸುಲಿದ ಅಡಿಕೆ ಕಳವು ಆಗಿರುವುದು ತಿಳಿದಿದೆ.
ಸುಮಾರು 90 ಸಾವಿರ ಮೌಲ್ಯದ 02 ಕ್ವಿಂಟಾಲ್ 90 ಕೆಜಿ ಅಡಿಕೆಯನ್ನು ಗೊಡೌನ್ ಬೀಗ ಮುರಿದು ಕಳವು ಮಾಡಿರುವುದಾಗಿ ಪುತ್ತೂರು ಗ್ರಾಮಾಂತರ ಠಾಣೆಗೆ ಅಬ್ದುಲ್ ಬುರುಹಾನ್ ದೂರು ನೀಡಿದ್ದರು.
ಕಳೆದ ಕೆಲವು ತಿಂಗಳಿಂದ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ, ದರೋಡೆ ಪ್ರಕರಣಗಳಲ್ಲಿ ಹೆಚ್ಚಳವಾಗಿರುವ ಬಗ್ಗೆಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ರಾತ್ರಿ ಸಮರ್ಪಕ ಗಸ್ತು ವ್ಯವಸ್ಥೆ ಇಲ್ಲದಿರುವುದು, ಗಡಿ ಪ್ರದೇಶದ ಚೆಕ್ ಪೋಸ್ಟ್ ಗಳಲ್ಲಿ ಕಾವಲು ವ್ಯವಸ್ಥೆ ದುರ್ಬಲವಾಗಿರುವುದು ಇಂತಹ ಚಟುವಟಿಕೆಗೆ ಕಾರಣ ಎನ್ನಲಾಗಿದೆ.