ಆದಿ ಕವಿ ಹೆಸರಿನ ಉದ್ಯಾನ ಸ್ಥಿತಿ ಶೋಚನೀಯ

banavasi
Published on

ಶಿರಸಿ: ಬನವಾಸಿಯ ಸೊರಬ ರಸ್ತೆಯಲ್ಲಿರುವ ಪಂಪವನ ಜೀರ್ಣಾವಸ್ಥೆ ತಲುಪಿದೆ. ಒಂದು ಕಾಲದಲ್ಲಿ ಪ್ರವಾಸಿಗರಿಗೆ ವಿಹಾರ ಮತ್ತು ವಿಶ್ರಾಂತಿ ತಾಣವಾಗಿದ್ದ ವನವೀಗ ಸ್ಥಳೀಯರ ದನ ಮೇಯಿಸುವ ಜಾಗವಾಗಿ ಪರಿವರ್ತನೆಯಾಗಿದೆ!

ಆದಿ ಕವಿ ಪಂಪನ ನಾಡು ಬನವಾಸಿ. ಮರು ಜನ್ಮವಿದ್ದರೆ ಬನವಾಸಿಯಲ್ಲಿ ಮರಿ ದುಂಬಿಯಾಗಿಯಾದರೂ ಜನ್ಮ ತಾಳುತ್ತೇನೆ ಎಂದು ಬನವಾಸಿಯ ಬಗ್ಗೆ ಪಂಪ ಮಹಾಕವಿ ಹಾಡಿ ಹೊಗಳಿದ್ದಾನೆ. ಆತನ ಹೆಸರಿನಲ್ಲಿರುವ ಈ ವನದ ಸ್ಥಿತಿ ಈಗ ಶೋಚನೀಯ.

ಬನವಾಸಿ ಕದಂಬರ ಕಾಲದ ರಾಜವೈಭವ, ಮಧುಕೇಶ್ವರ ದೇವಾಲಯದ ಕೆತ್ತನೆಗೆ ಪ್ರಸಿದ್ಧ. ರಾಜ್ಯದ ಮೂಲೆ ಮೂಲೆಯಿಂದಲೂ ಪ್ರವಾಸಿಗರು ಬನವಾಸಿಗೆ ಬರುತ್ತಾರೆ. ಬಂದವರು ಸ್ವಲ್ಪ ಹೊತ್ತು ವಿರಮಿಸಲು ಅನುವಾಗಲಿ ಎಂಬ ಉದ್ದೇಶದಿಂದ ಅರಣ್ಯ ಇಲಾಖೆ ಮತ್ತು ಬನವಾಸಿ ದೇವಾಲಯದ ವತಿಯಿಂದ 20 ವರ್ಷಗಳ ಹಿಂದೆ ಇಲ್ಲಿಯ ಆದಿ ಮಧುಕೇಶ್ವರ ದೇವಾಲಯದ ಸುತ್ತಲಿನ ಸ್ಥಳವನ್ನು ಪಂಪ ವನವಾಗಿ ನಿರ್ವಿುಸಲಾಗಿದೆ.

ಆದಿ ಮಧುಕೇಶ್ವರ ದೇವಾಲಯ, ಎದುರಿನ ಪುಷ್ಕರಣಿಯನ್ನೂ ಒಳಗೊಂಡಂತೆ 9 ಎಕರೆ ವಿಸ್ತೀರ್ಣದಲ್ಲಿ ಪಂಪವನ ನಿರ್ವಿುಸಲಾಗಿದೆ. ಪಂಪ ವನದ ಒಳಗಡೆ ಮಕ್ಕಳಿಗೆ ಮನೋರಂಜನಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲಲ್ಲಿ ಕುಟೀರಗಳನ್ನೂ ನಿರ್ವಿುಸಲಾಗಿತ್ತು. ಅರಣ್ಯ ಇಲಾಖೆ ಮತ್ತು ಬನವಾಸಿ ದೇವಾಲಯದ ಆಡಳಿತ ಮಂಡಳಿ ಜಂಟಿಯಾಗಿ ಪಂಪವನದ ನಿರ್ವಹಣೆ ಮಾಡುತ್ತಿತ್ತು.

ಆದರೆ, ಕಳೆದ ನಾಲ್ಕು ವರ್ಷಗಳಿಂದ ಪಂಪವನ ಯಾರಿಗೂ ಬೇಡವಾಗಿದೆ. ಅರಣ್ಯ ಇಲಾಖೆ ಈ ವನದ ನಿರ್ವಹಣೆಯಿಂದ ಜಾರಿಕೊಂಡಿದೆ. ಇಲ್ಲಿಯ ದಾಸನಕೊಪ್ಪ ರಸ್ತೆಯಲ್ಲಿ ಸಾಲುಮರದ ತಿಮ್ಮಕ್ಕ ಉದ್ಯಾನ ನಿರ್ವಣವಾದ ಬಳಿಕ ಅರಣ್ಯ ಇಲಾಖೆಯ ಲಕ್ಷ್ಯ ಆ ಉದ್ಯಾನಕ್ಕೆ ಮಾತ್ರ ಸೀಮಿತವಾಗಿದೆ. ಬನವಾಸಿ ದೇವಾಲಯದಿಂದ ನಿರ್ವಹಣೆ ಸಾಧ್ಯವಾಗದೇ ವನದ ತುಂಬೆಲ್ಲ ಹುಲ್ಲು , ಗಿಡಗಂಟಿಗಳು ಬೆಳೆದು ನಿಂತಿವೆ. ವನದೊಳಗಿರುವ ಕುಟೀರಗಳು ಮುರಿದುಬಿದ್ದಿವೆ. ಲಕ್ಷಾಂತರ ರೂ. ಖರ್ಚು ಮಾಡಿ ನಿರ್ವಿುಸಿದ್ದ ಕುಡಿಯುವ ನೀರಿನ ವ್ಯವಸ್ಥೆ ಪಾಳು ಬಿದ್ದಿದೆ. ಇಲ್ಲಿಯ ವಾಕ್​ಪಾತ್​ಗಳಲ್ಲಿ ಹುಲ್ಲು ಬೆಳೆದು ನಡೆದಾಡಲು ಭಯ ಮೂಡಿಸುತ್ತಿವೆ. ಬನವಾಸಿ ಸುತ್ತಮುತ್ತಲಿನ ಜನ ಇಲ್ಲಿ ನಿತ್ಯ ದನ ಕರುಗಳನ್ನು ಮೇಯಿಸಿಕೊಂಡು ಹೋಗುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ಮದ್ಯಪಾನ ಮಾಡುವವರ ನೆಚ್ಚಿನ ಸ್ಥಳವಾಗಿ, ಅನಧಿಕೃತ ಜೋಡಿಗಳ ಅನೈತಿಕ ಚಟುವಟಿಕೆ ಸ್ಥಳವಾಗಿ ಪಂಪವ ವನ ಈಗ ಬದಲಾಗಿದೆ.

ಪಂಪ ವನದ ಸುತ್ತ ರಕ್ಷಣಾ ಬೇಲಿಯ ಅಗತ್ಯವಿದೆ. ವನದ ಮುಖ್ಯದ್ವಾರ ಮುಚ್ಚಿದ್ದರೂ ಅದರ ಅಗತ್ಯವೇ ಇರದಂತೆ ಸುತ್ತೆಲ್ಲ ಮಾರ್ಗಗಳು ನಿರ್ವಣವಾಗಿವೆ. ಮಧುಕೇಶ್ವರ ದೇವಾಲಯದ ಆಡಳಿತ ಮಂಡಳಿ ಅವಧಿ ಕಳೆದ ಮಾರ್ಚ್ ತಿಂಗಳಿಗೆ ಮುಕ್ತಾಯಗೊಂಡಿದೆ. ತಹಸೀಲ್ದಾರರು ದೇವಾಲಯದ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪಂಪವನದ ಕಡೆ ಈಗ ದೇವಾಲಯದಿಂದಲೂ ಲಕ್ಷ್ಯ ಹಾಕದಂತಾಗಿದೆ.

ಪಂಪವನದ ಸುತ್ತ ಬೇಲಿ ಮತ್ತು ಕುಟೀರಗಳ ಮರು ನಿರ್ಮಾಣ ಸೇರಿದಂತೆ ಅಭಿವೃದ್ಧಿಗಾಗಿ ಎರಡು ವರ್ಷಗಳ ಹಿಂದೆ 50 ಲಕ್ಷ ರೂ. ಮಂಜೂರಾಗಿತ್ತು. ಆದರೆ, ಬನವಾಸಿಯ ವಿವಿಧ ಕಾಮಗಾರಿಗಳಿಗೆ ಅನುದಾನವನ್ನು ಬಳಸಿಕೊಂಡಿದ್ದರಿಂದ ಪಂಪವನ ಪಾಳು ಸ್ಥಿತಿಯಲ್ಲಿಯೇ ಇದೆ. ತಕ್ಷಣ ಬೇಲಿ ನಿರ್ವಿುಸಿ, ಅಕ್ರಮ ಚಟುವಟಿಕೆ ತಡೆಯುವ ಅಗತ್ಯವಿದೆ. - ರಾಜಶೇಖರ ಒಡೆಯರ್, ನಿಕಟಪೂರ್ವ ಅಧ್ಯಕ್ಷ, ಬನವಾಸಿ ಮಧುಕೇಶ್ವರ ದೇವಾಲಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net