ಪಂಪ ಕವಿ ಕನ್ನಡಾಭಿಮಾನ ಎಲ್ಲರಿಗೂ ಸ್ಫೂರ್ತಿ

Published on

ಅಖಿಲ ಭಾರತ ಸಾಹಿತ್ಯ ಪರಿಷದ್‌ನ ತಾಲೂಕು ಅಧ್ಯಕ್ಷ ಅಶ್ವತ್ಥ್ ಹೇಳಿಕೆ | ಕಸಾಪದಿಂದ ಮನೆಗೊಂದು ಕವಿಗೋಷ್ಠಿ

ವಿಜಯವಾಣಿ ಸುದ್ದಿಜಾಲ ಚಿಂತಾಮಣಿ

ಕನ್ನಡ ಭಾಷೆ ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ಭಾಷೆ. ನಮ್ಮಭಾಷೆಗೆ ಶಾಸೀಯ ಸ್ಥಾನಮಾನ ಸಿಕ್ಕಿರುವುದು ಹೆಗ್ಗಳಿಕೆಯೇ ಸರಿ ಎಂದು ಅಖಿಲ ಭಾರತ ಸಾಹಿತ್ಯ ಪರಿಷದ್‌ನ ತಾಲೂಕು ಅಧ್ಯಕ್ಷ ಅಶ್ವತ್ಥ್ ಹೇಳಿದರು.

ನಗರದ ಅಂಜನಿ ಬಡಾವಣೆಯ ಬಿ.ಕೆ.ಪದ್ಮಾವತಮ್ಮ ಮತ್ತು ಪರಮೇಶ್ವರ ಗುಪ್ತ ಅವರ ನಿವಾಸದಲ್ಲಿ ತಾಲೂಕು ಕಸಾಪ ವತಿಯಿಂದ ಹಮ್ಮಿಕೊಂಡಿದ್ದ ಮನೆಗೊಂದು ಕವಿಗೋಷ್ಠಿಯಲ್ಲಿ ಮಾತನಾಡಿದರು.

ಆದಿಕವಿ ಪಂಪನ ಕನ್ನಡ ಅಭಿಮಾನ ಎಲ್ಲರಿಗೂ ಸ್ಫೂರ್ತಿಯಾಗಬೇಕು ಎಂಬ ಮಾತು ನಾಡಿನ ಮೇಲಿರುವ ಕನ್ನಡ ಅಭಿಮಾನವನ್ನು ವ್ಯಕ್ತಪಡಿಸುತ್ತದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಕುವೆಂಪುರವರ ಮಾತಿನಂತೆ ಚಿಂತಾಮಣಿ ತಾಲೂಕು ಕಸಾಪ ಮನೆ ಮನೆಗಳಲ್ಲಿ ಕವಿಗೋಷ್ಠಿಗಳ ಮೂಲಕ ಸಾಹಿತ್ಯದ ದೀಪ ಹಚ್ಚುತ್ತಿದೆ ಎಂದರು.

ಭಿನ್ನ ಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಗಡಿ ಭಾಗದ ಕಿರಿಯ, ಹಿರಿಯ ಮತ್ತು ಉದಯೋನ್ಮುಖ ಕವಿಗಳನ್ನು ಗುರುತಿಸುವುದರ ಜತೆಗೆ ಕನ್ನಡದ ಕಂಪನ್ನು ಪ್ರತಿಯೊಬ್ಬರಲ್ಲೂ ಪಸರಿಸುವ ಗುರುತರವಾದ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಸಾಪ ಅಧ್ಯಕ್ಷ ಎನ್.ವಿ.ಶ್ರೀನಿವಾಸನ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರತಿ ತಿಂಗಳು ಮನೆಗೊಂದು ಕವಿಗೋಷ್ಠಿ, ಶಾಲಾ ಅಂಗಳದಲ್ಲಿ ಕವಿ-ಕಾವ್ಯ ಪರಿಚಯ, ಹುಣ್ಣಿಮೆಯಂದು ಸಾಧಕರ ಸ್ಮರಣೆ ಹೀಗೆ ನಾನಾ ರೀತಿಯ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಇಂಥ ಕಾರ್ಯಕ್ರಮಗಳಿಂದ ಉತ್ತಮ ಸ್ಪಂದನೆ ಸಿಗುತ್ತಿದೆ ಎಂದರು.

ಹಿರಿಯ ಸಾಹಿತಿ ಕಾಗತಿ ವಿ.ವೆಂಕಟರತ್ನಂ ಅವರು ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಕ್ಷಕ ಎಸ್‌ಎಫ್‌ಎಸ್ ಸುರೇಶ್, ಎಸ್.ಸಿ.ಶ್ರೀನಿವಾಸ ರೆಡ್ಡಿ, ಇರಗಂಪಲ್ಲಿ ವೆಂಕಟರಮಣಪ್ಪ, ಬಿ.ಕೆ.ಪದ್ಮಾವತಿ ಕನ್ನಡ ಗೀತೆಗಳನ್ನು ಹಾಡಿ ಎಲ್ಲರ ಮನ ರಂಜಿಸಿದರು. ಕುಮಾರಿ ಯೋಶೀತ, ಶಶಾಂತ, ಶ್ರೀದೇವಿ ದೇವರ ಭಜನಾಗೀತೆಗಳನ್ನು ಹಾಡಿದರು.

ಇದೇ ವೇಳೆ ಕವಿಗೋಷ್ಠಿಯ ಪ್ರಾಯೋಜಕರಾದ ಬಿ.ಕೆ.ಪದ್ಮಾವತಮ್ಮ ಮತ್ತು ಪರಮೇಶ್ವರ ಗುಪ್ತ ದಂಪತಿಯನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಟಿ.ಸಿ.ಲಕ್ಷ್ಮೀಪತಿ, ಕುಂಟಿಗಡ್ಡೆ ಎಂ ಲಕ್ಷ್ಮಣ್, ಎಸ್.ಎನ್.ರಂಗನಾಥ, ಹಾಸ್ಯ ಸಾಹಿತಿ ಗುರುಪ್ರಸನ್ನ, ಶಿ.ಮ.ಮಂಜುನಾಥ್, ವಿ.ರಮೇಶ್, ಸುರೇಶ್, ಎಸ್.ಸಿ .ಶ್ರೀನಿವಾಸರೆಡ್ಡಿ, ಎನ್.ಶ್ರೀನಿವಾಸಪ್ಪ, ಶ್ರೀಹರಿ, ಕರವೇ ನಾಗರಾಜು,ಡಿ.ವಿ.ಶಂಕರರೆಡ್ಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net