

ಕುಶಾಲನಗರ: ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ 26ನೇ ವರ್ಷದ ಪಂಪಾ ದೀಪೋತ್ಸವ ಪೂಜಾ ಕಾರ್ಯಕ್ರಮ ಗುರುವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.
ಪೂಜೋತ್ಸವ ಅಂಗವಾಗಿ ದೇವಾಲಯವನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಅರ್ಚಕರಾದ ಕಷ್ಣಮೂರ್ತಿ ಭಟ್, ವಿಷ್ಣು ಭಟ್ ಅವರ ನೇತತ್ವದಲ್ಲಿ ಪೂಜಾ ಕಾರ್ಯಗಳು ಜರುಗಿದವು. ಅಯ್ಯಪ್ಪ ದೇವಾಲಯದ ಪಡಿ ಪೂಜೆಯೊಂದಿಗೆ ಆರಂಭಗೊಂಡ ಪೂಜೋತ್ಸವ ಕಾವೇರಿ ನದಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ದೇವಾಲಯದಲ್ಲಿ ಮಹಾಮಂಗಳಾರತಿಯೊಂದಿಗೆ ಮುಕ್ತಾಯಗೊಂಡಿತು. ಬಳಿಕ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.
ದೇವಾಲಯದ ಆವರಣದಲ್ಲಿ ಭಕ್ತರು ದೀಪಗಳನ್ನು ಬೆಳಗಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಪಟ್ಟಣ ಪಂಚಾಯಿತಿ ಸದಸ್ಯರಾದ ವಿ.ಎಸ್.ಆನಂದಕುಮಾರ್, ಗೆಳೆಯರ ಬಳಗದ ಚಂದ್ರು, ರಾಜೇಶ್, ರಾಕಿ, ವಸಂತ್ ಮತ್ತು ಜಯಪ್ರಕಾಶ್ ಸೇರಿ ಅಯ್ಯಪ್ಪ ಮಾಲಾಧಾರಿಗಳು, ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.