

ಮಂಗಳೂರು/ ಉಡುಪಿ: ಲಾಕ್‌ಡೌನ್ ಹಿನ್ನೆಲೆಯಲಿ ್ಲ ಕ್ರೈಸ್ತರು ಗರಿಗಳ ಭಾನುವಾರ (ಪಾಮ್ ಸಂಡೇ)ವನ್ನು ತಮ್ಮ ಮನೆಗಳಲ್ಲೇ ಸರಳವಾಗಿ ಆಚರಿಸಿದರು.
ಇಗರ್ಜಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮತ್ತು ಬಲಿಪೂಜೆಗಳನ್ನು ರದ್ದುಪಡಿಸಿದ್ದರಿಂದ ಕ್ರೈಸ್ತರು ಮನೆಗಳಲ್ಲೇ ಆನ್‌ಲೈನ್ ಮೂಲಕ ಗರಿಗಳ ಭಾನುವಾರದ ಕಾರ್ಯಕ್ರಮ ವೀಕ್ಷಿಸಿದರು. ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಮಂಗಳೂರಿನ ರೊಸಾರಿಯೊ ಕೆಥಡ್ರಲ್‌ನಲ್ಲಿ ಬಲಿಪೂಜೆ ನೆರವೇರಿಸಿದರು. ಇದನ್ನು ಖಾಸಗಿ ಚಾನೆಲ್ ಮೂಲಕ ನೇರಪ್ರಸಾರ ಮಾಡಲಾಯಿತು. ಕೆಥೆಡ್ರಲ್‌ನ ರೆಕ್ಟರ್ ಜೆ.ಬಿ.ಕ್ರಾಸ್ತಾ ಮತ್ತು ಸಹಾಯಕ ಗುರು ್ಲೇವಿಯನ್ ಲೋಬೊ ಉಪಸ್ಥಿತರಿದ್ದರು.
ಕೆಥೆಡ್ರಲ್ ಮುಖ್ಯದ್ವಾರದ ಬಳಿ ತೆಂಗಿನ ಗರಿಗಳನ್ನು ಬಿಷಪ್ ಆಶೀರ್ವದಿಸಿ ಒಳಗೆ ಪ್ರವೇಶಿಸಿದರು. ಬಲಿಪೂಜೆ ವೇದಿಕೆಯಲ್ಲಿ ಬಿಷಪ್ ಮತ್ತು ಜತೆಗಿದ್ದ ಇಬ್ಬರು ಗುರುಗಳು ಕ್ರೈಸ್ತರ ಪವಿತ್ರ ಗ್ರಂಥ ಬೈಬಲ್ ವಾಚಿಸಿದರು. ್ಲೇವಿಯನ್ ಲೋಬೊ ಪ್ರವಚನ ನೀಡಿದರು.
ಮೂಲ್ಕಿಯ ಡಿವೈನ್ ಕಾಲ್ ಸೆಂಟರ್‌ನಲ್ಲಿ ಅಬ್ರಹಾಂ ಡಿಸೋಜ ಹಾಗೂ ಉಡುಪಿ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೊ ನಡೆಸಿದ ಗರಿಗಳ ಭಾನುವಾರದ ಪ್ರಾರ್ಥನಾ ವಿಧಿ ಮತ್ತು ಬಲಿಪೂಜೆಗಳನ್ನೂ ವಾಹಿನಿ ಮತ್ತು ಯೂಟ್ಯೂಬ್ ಮೂಲಕ ನೇರಪ್ರಸಾರ ಮಾಡಲಾಯಿತು. ಉಡುಪಿ ಜಿಲ್ಲೆಯಲ್ಲೂ ಕ್ರೈಸ್ತರು ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿದರು. ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ಧರ್ಮಗುರುಗಳು ಮಾತ್ರ ಪ್ರಾರ್ಥನಾ ವಿಧಿ ನೆರವೇರಿಸಿದರು. ಪಾಮ್ ಸಂಡೆ ಪ್ರಾರ್ಥನಾ ವಿಧಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಲೈವ್ ಸ್ಟ್ರೀಮಿಂಗ್ ಮಾಡಲಾಗಿತ್ತು. ಪಾಮ್ ಸಂಡೆ ಆಚರಣೆಯೊಂದಿಗೆ ಕ್ರೆಸ್ತರ ಪವಿತ್ರ ಸಪ್ತಾಹ ಆರಂಭಗೊಳ್ಳುತ್ತದೆ. ಪವಿತ್ರ ಸಪ್ತಾಹವು ಕ್ರೆಸ್ತರಿಗೆ ಅತಿ ಮಹತ್ವದಾಗಿದ್ದು, ಗುರುವಾರ ಏಸುಕ್ರಿಸ್ತರ ಕೊನೆಯ ಭೋಜನ ಸ್ಮರಣೆ ಮಾಡಿದರೆ, ಶುಕ್ರವಾರ ಗುಡ್ ಫ್ರೈಡೇ ಆಚರಿಸಿ ಇಡೀ ದಿನ ಉಪವಾಸ, ಧ್ಯಾನದಲ್ಲಿ ಕಳೆಯುತ್ತಾರೆ. ಶನಿವಾರ ಈಸ್ಟರ್ ಜಾಗರಣೆ, ಭಾನುವಾರ ಏಸುಕ್ರಿಸ್ತರ ಪುನರುತ್ಥಾನದ ಪ್ರಯುಕ್ತ ಈಸ್ಟರ್ ಹಬ್ಬ ಆಚರಿಸಲಾಗುತ್ತದೆ. ಈ ಎಲ್ಲ ದಿನಗಳಂದು ಲಾಕ್ ಡೌನ್ ಹಿನ್ನಲೆಯಲ್ಲಿ ಭಕ್ತರು ಮನೆಯಲ್ಲಿಯೇ ಇದ್ದು ಪ್ರಾರ್ಥನೆ ಸಲ್ಲಿಸಲು ಧರ್ಮಾಧ್ಯಕ್ಷರು ಸೂಚನೆ ನೀಡಿದ್ದಾರೆ.
ಜನ ಸಹನೆ ಕಳೆದುಕೊಳ್ಳದಿರಿ: ಕರೊನಾ ರೋಗ ಜಗತ್ತಿನಾದ್ಯಂತ ಹರಡುತ್ತಿರುವ ಈ ಸಂದರ್ಭ ಜನರು ಸಂಕಷ್ಟಗಳಿಗೆ ಒಳಗಾಗಿದ್ದಾರೆ. ಆದರೆ ಸಹನೆ ಕಳೆದುಕೊಳ್ಳದೆ, ದೇವರ ಮೇಲೆ ವಿಶ್ವಾಸ ಮತ್ತಷ್ಟು ಬಲಪಡಿಸಬೇಕು ಎಂದು ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ಹೇಳಿದರು. ಏಸುಕ್ರಿಸ್ತರ ಬದುಕು ಈ ದಿಶೆಯಲ್ಲಿ ಪ್ರೇರಣೆಯಾಗಬೇಕು. ಕರೊನಾ ರೋಗಿಗಳು ಬೇಗ ಗುಣಮುಖರಾಗುವಂತೆ ಹಾಗೂ ರೋಗಿಗಳ ಆರೈಕೆಯಲ್ಲಿ ತೊಡಗಿರುವ ವೈದ್ಯರು, ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸೋಣ. ಕರೊನಾ ಸೋಂಕಿಗೆ ಔಷಧ ಕಂಡುಹಿಡಿಯುವ ವಿಜ್ಞಾನಿಗಳ ಪ್ರಯತ್ನ ಶೀಘ್ರ ಯಶಸ್ವಿಯಾಗಲಿ ಎಂದು ಆಶಿಸಿದರು.