ತಾಳೆ ಬೇಸಾಯ ಹೆಚ್ಚು ಲಾಭದಾಯಕ

Workshop
Published on

ಬ್ಯಾಡಗಿ: ತಾಳೆ ಬೇಸಾಯವು ಅಲ್ಪ ಖರ್ಚು ಹಾಗೂ ಹೆಚ್ಚು ಲಾಭದಾಯಕವಾಗಿದ್ದು, ಸರ್ಕಾರದ ಎಲ್ಲ ಸೌಲಭ್ಯ ಪಡೆದು ರೈತರು ಆರ್ಥಿಕವಾಗಿ ಮುನ್ನಡೆ ಸಾಧಿಸಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ತಾಲೂಕಿನ ಕಳಗೊಂಡ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ತಾಳೆ ಬೆಳೆ ಬೇಸಾಯ ಕುರಿತು ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತಾಳೆ ಬೆಳೆಯುವುದರಿಂದ ರೈತರಿಗೆ ಕೂಲಿ ಸಮಸ್ಯೆಯಿಲ್ಲ. ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳು ರೈತರಿಗೆ ತೊಂದರೆಯಾಗದಂತೆ ಯೋಜನೆ ಲಾಭ ತಲುಪಿಸಬೇಕು ಎಂದು ಸೂಚಿಸಿದರು.

ತೋಟಗಾರಿಕೆ ಉಪನಿರ್ದೇಶಕ ಪ್ರದೀಪ ಎಲ್., ಮಾತನಾಡಿ, ರೈತರಿಗೆ ಎರಡು ವರ್ಷ ನಿರ್ವಹಣೆ ವೆಚ್ಚ ಹಾಗೂ ಸಸಿ ನಾಟಿಗೆ ಗುಂಡಿ ತೆಗೆಯಲು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನುದಾನ ಲಭ್ಯವಿದೆ. 15 ದಿನಕ್ಕೊಮ್ಮೆ ಕಟಾವು ಬರಲಿದ್ದು, ತಿಂಗಳಿಗೊಮ್ಮೆ ದರ ಪರಿಷ್ಕರಣೆ ಕೂಡ ಲಭ್ಯವಿದೆ. ಇದರಿಂದ ರೈತರು ಹೆಚ್ಚು ಲಾಭ ಪಡೆಯಬಹುದಾಗಿದೆ. 2025ರೊಳಗಾಗಿ ರಾಜ್ಯದಲ್ಲಿ 25 ಸಾವಿರ ಹೆಕ್ಟೇರ್ ಗುರಿ ತಲುಪಬೇಕಿದ್ದು, ಈ ನಿಟ್ಟಿನಲ್ಲಿ ರೈತರ ಸಂಖ್ಯೆ ಹೆಚ್ಚಳವಾಗಿದೆ ಎಂದು ವಿವರಿಸಿದರು.

ತೋಟಗಾರಿಕೆ ಸಹಾಯಕ ನಿರ್ದೇಶಕ ಅಶೋಕ ಕುರುಬರ, ಮೇಲ್ವಿಚಾರಕ ಕಾರ್ತಿಕ ಪಾಟೀಲ, ಕಲ್ಪವೃಕ್ಷ ಆಯಿಲ್ ಪಾಮ್ ಕಂಪನಿ ಯೋಜನಾ ವ್ಯವಸ್ಥಾಪಕ ಕೆ. ಶಿವಣ್ಣ, ಬೆಳೆಗಾರರಾದ ದಯಾನಂದ ಕಲಕೋಟಿ, ಎಮ.ಎಫ. ನದಾಪ್, ಕೃಷ್ಣಪ್ಪ ನಾಯ್ಕರ, ಕುಮಾರ ಎಚ್.ಕೆ, ಯಲ್ಲಪ್ಪ ತಿಮಕಾಪುರ, ಮಹಮದ್ ಕಳಗೊಂಡ, ದಾನಪ್ಪ ಚೂರಿ, ಶಂಭಣ್ಣ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net