

ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾವೂರು ಗ್ರಾಮದ ಮಲಾರ್‌ನ ಪಳ್ಳಿಯಬ್ಬ ಅವರನ್ನು ಹತ್ಯೆಗೈದ ಐವರು ಅಪರಾಧಿಗಳಿಗೆ ಮಂಗಳೂರಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಮಲಾರ್‌ನ ಮೊಹಮ್ಮದ್ ಹಂಝ (47), ಅಝರುದ್ದೀನ್ ಆಲಿಯಾಸ್ ಅಝರ್ (29), ಸಜಿಪನಡು ಗ್ರಾಮದ ಅಮೀರ್ ಆಲಿಯಾಸ್ ಅಮ್ಮಿ(29), ಮೊಹಮ್ಮದ್ ಅರ್ಫಾಜ್(23) ಮತ್ತು ಅತಾವುಲ್ಲ ಆಲಿಯಾಸ್ ಅಲ್ತಾಫ್(23) ಶಿಕ್ಷೆಗೊಳಗಾದವರು.
ಹಣಕಾಸಿನ ವ್ಯವಹಾರ ನಡೆಸುತ್ತಿದ್ದ ಪಳ್ಳಿಯಬ್ಬ ಅವರು 2020ರ ಅ.29ರಂದು ನಾಪತ್ತೆಯಾಗಿರುವ ಬಗ್ಗೆ ಅವರ ಸಹೋದರ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದಾಗ ಅಝರುದ್ದೀನ್‌ನ ರಿಕ್ಷಾದಲ್ಲಿ ಪಳ್ಳಿಯಬ್ಬ ಅವರು ಹಂಝ, ಅಮೀರ್, ಅರ್ಫಾಜ್ ಮತ್ತು ಅಲ್ತಾಫ್ ಅವರ ಜತೆಯಲ್ಲಿ ಹೋಗಿರುವುದು ಗೊತ್ತಾಗಿತ್ತು. ಪಳ್ಳಿಯಬ್ಬ ಹಣಕಾಸಿನ ವ್ಯವಹಾರ ನಡೆಸುತ್ತಿದ್ದು ಅವರು ಸಂಬಂಧಿ ಮಲಾರ್‌ನ ಹಂಝನಿಗೆ ಕೂಡ 72,000 ರೂ. ಸಾಲ ನೀಡಿದ್ದರು. ಅದನ್ನು ಆಗಾಗ್ಗೆ ವಾಪಸ್ ಕೇಳುತ್ತಿದ್ದರು. ಈ ಬಗ್ಗೆ ಅವರಿಬ್ಬರೊಳಗೆ ತಕರಾರು ಇತ್ತು. ಇದೇ ಕಾರಣಕ್ಕೆ ಹಂಝ ಇತರ ಅಪರಾಧಿಗಳ ಜತೆ ಸೇರಿಕೊಂಡು ಪಳ್ಳಿಯಬ್ಬ ಅವರನ್ನು ಆಟೋರಿಕ್ಷಾದಲ್ಲಿ ಕರೆದುಕೊಂಡು ಅಲ್ಕೀರುಪದವು ಎಂಬಲ್ಲಿರುವ ಗುಡ್ಡದಲ್ಲಿ ಕೊಲೆ ಮಾಡಿ ಹೂತು ಹಾಕಿದ್ದು ಬೆಳಕಿಗೆ ಬಂದಿತ್ತು. ಕೊಣಾಜೆ ಠಾಣಾ ಪೊಲೀಸ್ ನಿರೀಕ್ಷಕ ಮಧುಸೂದನ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಬಿ. ಜಕಾತಿ ಅವರು ಮಾ.3ರಂದು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಅಪರಾಧಿಗಳಿಗೆ ಭಾ.ದಂ.ಸಂ ಕಲಂ 364ರ ಅಡಿಯಲ್ಲಿ ಎಸಗಿದ ಅಪರಾಧಕ್ಕೆ 5 ವರ್ಷಗಳ ಕಠಿನ ಜೈಲು ಶಿಕ್ಷೆ ಮತ್ತು 10,000 ರೂ. ದಂಡ, ದಂಡದ ಹಣ ಪಾವತಿಸಲು ತಪ್ಪಿದರೆ ಹೆಚ್ಚುವರಿ 4 ತಿಂಗಳ ಸಾದಾ ಸಜೆ, ಭಾ.ದಂ.ಸಂ ಕಲಂ 302ರಡಿ ಎಸಗಿದ ಅಪರಾಧಕ್ಕೆ ಜೀವಾವಧಿ ಸಜೆ ಮತ್ತು ತಲಾ 20,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 4 ತಿಂಗಳು ಸಜೆ ವಿಧಿಸಿದ್ದಾರೆ. ಭಾ.ದಂ.ಸಂ ಕಲಂ 201ರಡಿಯಲ್ಲಿ ಎಸಗಿದ ಅಪರಾಧಕ್ಕೆ 3 ವರ್ಷ ಸಜೆ ಮತ್ತು 5,000 ರೂ. ದಂಡ, ದಂಡದ ಹಣ ಪಾವತಿಸಲು ತಪ್ಪಿದರೆ 1 ತಿಂಗಳು ಹೆಚ್ಚುವರಿ ಸಜೆ, ಭಾ.ದಂ.ಸಂ ಕಲಂ 120 (ಬಿ)ರಡಿಯಲ್ಲಿ ಎಸಗಿದ ಅಪರಾಧಕ್ಕೆ ಜೀವಾವಧಿ ಸಜೆ ಮತ್ತು ತಲಾ 20,000 ರೂ. ದಂಡ, ದಂಡದ ಹಣ ತಪ್ಪಿದರೆ 4 ತಿಂಗಳು ಹೆಚ್ಚುವರಿ ಸಜೆ ವಿಧಿಸಿದ್ದಾರೆ. ಅಲ್ಲದೆ ಪಳ್ಳಿಯಬ್ಬ ಅವರ ಪುತ್ರಿಗೆ ದಂಡದ ಹಣದಿಂದ 2.50 ಲ.ರೂ. ಹಾಗೂ ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಪರಿಹಾರ ನೀಡಲು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ನಾರಾಯಣ ಶೇರಿಗಾರ್ ಯು. ಅವರು ವಾದಿಸಿದ್ದರು.
================