

ವಿಜಯಪುರ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಡಗಗಳ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಈ ಬಾರಿ ಬಜೆಟ್‌ನಲ್ಲಿ ಸುಮಾರು 500 ಕೋಟಿ ರೂ. ಅನುದಾನ ಮೀಸಲಿಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ತಿಳಿಸಿದರು.
ನಿಗಮ ಸ್ಥಾಪನೆಯಾಗಿ ಎರಡು ವರ್ಷ ಕಳೆದಿದೆ. ಈವರೆಗೆ ಸಲ್ಲಿಕೆಯಾದ ಅರ್ಜಿಗಳನ್ನು ಪರಿಗಣಿಸಿದರೆ 600 ಕೋಟಿ ರೂ.ಗಳ ಅನುದಾನ ಅಗತ್ಯವಿದೆ. ನಾನು ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಕಳೆದ ಬಜೆಟ್‌ನಲ್ಲಿ 70 ಕೋಟಿ ರೂ. ಅನುದಾನ ಲಭ್ಯವಾಗಿತ್ತು. ಈ ಬಾರಿ ಪರಿಶಿಷ್ಟ ಜಾತಿ ಅಲೆಮಾರಿ ಸಮುದಾಯಗಳಿಗೆ 260 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡ ಅಲೆಮಾರಿ ಸಮುದಾಯಗಳಿಗೆ 250 ಕೋಟಿ ರೂ.ಗಳ ಅನುದಾನಕ್ಕೆ ಮನವಿ ಸಲ್ಲಿಸಿದ್ದೇನೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಅಲೆಮಾರಿಗಳ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಆಯೋಗ ರಚನೆಯೂ ಅಗತ್ಯವಾಗಿದೆ. ಈ ಬಗ್ಗೆ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸಿದ್ದೇನೆ. ಜಿಲ್ಲೆಯಲ್ಲಿ 2011ರ ಜನಗಣಿತ ಪ್ರಕಾರ 25,960 ಅಲೆಮಾರಿ ಜನಾಂಗದವರು ಇದ್ದು, ವಸತಿ ಸಹಿತ ಹಾಗೂ ವಸತಿ ರಹಿತರ ನಿಖರ ಸಂಖ್ಯೆಯನ್ನು 15 ದಿನದಲ್ಲಿ ನಿಗಮಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.