ಶ್ರೀಶಿವಶಕ್ತಿ ಧಾಮದಲ್ಲಿ ಶಿವರಾತ್ರಿ ಸಂಭ್ರಮ, ದೇವರ ದರ್ಶನ ಪಡೆದ ಭಕ್ತರು

IMG-20240308-WA0020.jpg
Published on

ಹುಬ್ಬಳ್ಳಿ: ತಾಲೂಕಿನ ಪಾಲಿಕೊಪ್ಪದ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಾಣಗೊಂಡಿರುವ ಶ್ರೀಶಿವಶಕ್ತಿ ಧಾಮದಲ್ಲಿ ಶುಕ್ರವಾರ ಮಹಾಶಿವರಾತ್ರಿ ನಿಮಿತ್ತ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದವು.

ಬೆಳಗ್ಗೆಯಿಂದಲೇ ಭಕ್ತರ ದಂಡು ಹರಿದು ಬಂದಿತು. ನೂರಾರು ಜನರು ಸರದಿಯಲ್ಲಿ ನಿಂತು ಭಕ್ತಿಭಾವದಿಂದ ದೇವರ ದರ್ಶನ ಪಡೆದರು.

ನಗರದ ಹೊರ ವಲಯದ ಸುಂದರ ಪರಿಸರದಲ್ಲಿ ತಲೆ ಎತ್ತಿ ನಿಂತಿರುವ ಶ್ರೀಶಿವಶಕ್ತಿ ಧಾಮದಲ್ಲಿ ಪ್ರತಿಷ್ಠಾಪನೆಗೊಂಡಿರುವ ವಿವಿಧ ದೇವರುಗಳಿಗೆ ಬೆಳಗ್ಗೆ ವಿಶೇಷ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು.

ಶ್ರೀಶಿವಶಕ್ತಿ ಧಾಮದ ಶ್ರೀವಿಜಯಗಣಪತಿ ದೇವರಿಗೆ ಮೊದಲ ಪೂಜೆ ಸಲ್ಲಿಸಲಾಯಿತು. ನಂತರದಲ್ಲಿ ಶ್ರೀ ಶನೈಶ್ಚರ ದೇವರು, ಶ್ರೀಆನಂದೇಶ್ವರ ದೇವರು, ಶ್ರೀನವಗ್ರಹ, ಶ್ರೀಕಾಲಭೈರವ ಹಾಗೂ ಶ್ರೀಜ್ಞಾನಾಂಬಿಕಾದೇವಿಗೆ ಪೂಜೆ ಸಲ್ಲಿಸಲಾಯಿತು. ಶೃಂಗೇರಿ ಶಾರದಾಪೀಠದ ಆಚಾರ್ಯರು ವಿವಿಧ ಪೂಜೆ ಹಾಗೂ ಧಾಮಿರ್ಕ ಕಾರ್ಯಕ್ರಮಗಳನ್ನು ನೆರವೇರಿಸಿದರು.

ಬೆಳಗ್ಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಎಲ್ಲ ದೇವರಿಗೆ ಅರ್ಚನೆಗಳು ನಡೆದವು. ನಂತರ ಮಹಾಮಂಗಳಾರತಿ ನೆರವೇರಿತು. ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.

ವಿವಿಧೆಡೆಯಿಂದ ಆಗಮಿಸಿದ್ದ ಅನೇಕ ಭಕ್ತರು ಸರದಿಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು.

ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಶ್ರೀಮತಿ ಲಲಿತಾ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ, ವಾಣಿ ಸಂಕೇಶ್ವರ ದಂಪತಿ ಹಾಗೂ ಕುಟುಂಬದವರು ಬೆಳಗಿನ ಪೂಜೆಯಲ್ಲಿ ಪಾಲ್ಗೊಂಡು ದೇವರಿಗೆ ಫಲ ಸಮರ್ಪಣೆ ಮಾಡಿದರು.

ಡಾ. ವಿಜಯ ಸಂಕೇಶ್ವರ ಹಾಗೂ ಡಾ. ಆನಂದ ಸಂಕೇಶ್ವರ ಅವರು ಲೋಕಕಲ್ಯಾಣಾರ್ಥವಾಗಿ ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಗುರು ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net