ಒತ್ತಡಕ್ಕೆ ಮಣಿದು ಗೇಟ್ ತೆರೆದ ಆಯುಕ್ತೆ ; ಪಾಲಿಕೆಯಲ್ಲಿ ಮೂಲಸೌಕರ್ಯ ಕಲ್ಪಿಸಲು ಪಟ್ಟು

27Tmk_Palike_Protest_01
Published on

ತುಮಕೂರು : ಮಹಾನಗರ ಪಾಲಿಕೆ ಪೂರ್ವ ದಿಕ್ಕಿನಲ್ಲಿರುವ ಮುಖ್ಯದ್ವಾರದ ಗೇಟ್ ತೆರೆಯುವಂತೆ ಹಾಗೂ ಪಾಲಿಕೆ ಆವರಣದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಆಡಳಿತ ಬಿಜೆಪಿ ಸದಸ್ಯೆ ಪತಿ ನೇತೃತ್ವದಲ್ಲಿ ವಿವಿಧ ಕನ್ನಡಪರ, ದಲಿತ ಸಂಘಟನೆಗಳು ತಮಟೆ ಚಳವಳಿ ನಡೆಸಿದವು. ಹೀಗಾಗಿ ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಪಾಲಿಕೆ ಆಯುಕ್ತರೇ ಗೇಟ್ ತೆರೆದು ಸಾರ್ವಜನಿಕ ಓಡಾಟಕ್ಕೆ ಮುಕ್ತಗೊಳಿಸಿದರು.

ಪಾಲಿಕೆ ಪೂರ್ವಭಾಗದಲ್ಲಿ ರೈಲ್ವೆ ನಿಲ್ದಾಣ ರಸ್ತೆ ಕಡೆಯಿಂದ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಸೋಮವಾರ ಬಿಜೆಪಿ ಕಾರ್ಪೋರೇಟರ್ ವಿ.ಎಸ್.ಗಿರಿಜಾ ಪತಿ ಕನ್ನಡಸೇನೆ ಅಧ್ಯಕ್ಷ ಧನಿಯಾಕುಮಾರ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ತಮಟೆ ಚಳವಳಿ ನಡೆಸಿ, 2 ವರ್ಷಗಳಿಗೂ ಹೆಚ್ಚು ಕಾಲದಿಂದ ಮುಚ್ಚಿರುವ ಗೇಟ್ ತೆರೆದು ಮಹಿಳೆಯರು, ವೃದ್ಧರ ಸುಗಮ ಓಡಾಟಕ್ಕೆ ಅನುವು ಮಾಡಿಕೊಡುವಂತೆ ಒತ್ತಾಯಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಧನಿಯಕುಮಾರ್, ಪಾಲಿಕೆ ಆವರಣಕ್ಕೆ ಬರುವ ಹಿರಿಯ ನಾಗರಿಕರು ಅಗತ್ಯ ಸೇವೆ ಪಡೆದುಕೊಳ್ಳಲು ಸುತ್ತಾಡಿಕೊಂಡು ಬರಬೇಕಿದೆ. ಇನ್ನೂ ಪಾಲಿಕೆ ಆವರಣದಲ್ಲಿ ಕುಡಿಯುವ ನೀರು ಸಹ ಇಲ್ಲ. ಸಾರ್ವಜನಿಕ ಶೌಚಗೃಹ, ಪಾಲಿಕೆ ಜನರ ಪಾಲಿಗೆ ಸತ್ತು ಹೋಗಿದೆ. 2 ಸಾವಿರಕ್ಕೂ ಹೆಚ್ಚು ಕಡತಗಳು ವಿಲೇವಾರಿ ಆಗದೇ ಉಳಿದುಕೊಂಡಿದ್ದು, ಸಾರ್ವಜನಿಕರು ನಿತ್ಯ ಕಚೇರಿಗೆ ಅಲೆಯುವಂತಾಗಿದೆ ಎಂದು ಆರೋಪಿಸಿದರು.

ತಮಟೆ ಚಳವಳಿಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಕರ್ನಾಟಕ ಸಾಂಸ್ಕೃತಿಕ ಸಂರಕ್ಷಣಾ ವೇದಿಕೆಯ ಹೊಸಕೋಟೆ ನಟರಾಜು, ರೈತ ಸಂಘ ಮತ್ತು ಮಾನವ ಹಕ್ಕುಗಳ ಹೋರಾಟಗಾರರ ಪರಶುರಾಮ್, ಕರವೇಯ ಟಿ.ಇ.ರಘುರಾಮ್, ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಉಮೇಶ್, ಕಾಂಗ್ರೆಸ್ ಮುಖಂಡ ಚಂದ್ರಶೇಖರಗೌಡ, ಹಿರಿಯ ನಾಗರಿಕರಾದ ರವೀಶ್, ಪೆಟ್ಟಿರಾಜು, ವಕೀಲರಾದ ವೆಂಕಟಾಚಲ ಪಾಲ್ಗೊಂಡಿದ್ದರು.

ಸಬೂಬು ಹೇಳಿದ ರೇಣುಕಾ! : ಗಣ್ಯರು ಓಡಾಡುವ ರಸ್ತೆಯಾಗಿದ್ದರಿಂದ ಪೊಲೀಸ್ ಇಲಾಖೆ ಎನ್‌ಒಸಿ ಪಡೆಯಬೇಕಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಆಯುಕ್ತೆ ರೇಣುಕಾ ಸಬೂಬು ಹೇಳಿದರು. ರೈಲ್ವೆ ನಿಲ್ದಾಣಕ್ಕೆ ದಿನವಹಿ ಸಾವಿರಾರು ಜನ ಹೋಗಿ ಬರುತ್ತಿದ್ದಾರೆ. ಅವರಿಗಿಲ್ಲದ ನಿರ್ಬಂಧ ಪಾಲಿಕೆಗೆ ಬರಲು ಏಕೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರಲ್ಲದೆ, ವಿಐಪಿ ಸಂಸ್ಕೃತಿ ಬೇಡ ಎಂದು ಘೋಷಣೆ ಕೂಗಿದರರು. ಗೇಟ್ ತೆರೆಯುವಂತೆ ಪಟ್ಟು ಹಿಡಿದು ಕುಳಿತರು. ಕೊನೆಗೆ ಮಣಿದ ಆಯುಕ್ತರೇ ಖುದ್ದು ಪೂರ್ವ ಭಾಗದ ಗೇಟ್ ತೆರೆಯುವ ಮೂಲಕ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net