ಬೌದ್ಧ ಧರ್ಮ, ಬುದ್ಧನನ್ನು ಅರಿಯಲು ಪಾಲಿ ಭಾಷೆಯ ಅಧ್ಯಯನ ಅಗತ್ಯ : ಪ್ರೊ.ಜಿ. ಹೇಮಂತ ಕುಮಾರ್

pali language workshdop
Published on

ಮೈಸೂರು: ಬೌದ್ಧ ಧರ್ಮ ಹಾಗೂ ಬುದ್ಧನನ್ನು ಅರ್ಥಮಾಡಿಕೊಳ್ಳಲು ಪಾಲಿ ಭಾಷೆಯ ಅಧ್ಯಯನ ಅತ್ಯಂತ ಅಗತ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಹೇಳಿದರು.

ಕಲಬುರಗಿಯ ಪಾಲಿ ಇನ್ಸಿಟಿಟ್ಯೂಟ್ ಹಾಗೂ ಮೈಸೂರು ವಿಶ್ವ ವಿದ್ಯಾಲಯದ ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗ ವತಿಯಿಂದ ವಿಭಾಗದ ಸಭಾಂಗಣದಲ್ಲಿ ಹಮ್ಮಿಕೊಂಡ ಪಾಲಿ ಭಾಷಾ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಾಲಿ ಭಾಷೆಯು ಭಾರತದ ಅತ್ಯಂತ ಪ್ರಾಚೀನ ಭಾಷೆ. ಸಾಮ್ರಾಟ ಅಶೋಕನ ಶಾಸನಗಳು ಪಾಲಿ ಭಾಷೆಯಲ್ಲಿ ರಚನೆಯಾಗಿವೆ. ಬುದ್ಧನ ಧಮ್ಮಪದ ಪಾಲಿಯಲ್ಲಿದೆ. ಬೌದ್ಧ ಧರ್ಮದ ಕೃತಿಗಳು ಪಾಲಿಭಾಷೆಯಲ್ಲಿವೆ. ಹಾಗಾಗಿ ಬೌದ್ಧ ಧರ್ಮ ಹಾಗೂ ಬುದ್ಧನನ್ನು ಅರ್ಥಮಾಡಿಕೊಳ್ಳಲು ಪಾಲಿಯ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಇಂದು ಜಗತ್ತು ಅಶಾಂತಿ, ಅಹಿಂಸೆಯಲ್ಲಿ ನರಳುತ್ತಿದೆ. ಗದ್ದಲ, ಕೋಲಾಹಲಗಳ ನಡುವೆ ಕಳೆದು ಹೋಗುತ್ತಿದ್ದೇವೆ. ಪ್ರಸ್ತುತ ಗೌಜು ಗದ್ದಲಗಳಿಂದ ಮುಕ್ತಿ ನೀಡುವ ಶಕ್ತಿ ಇರುವುದು ಧ್ಯಾನಕ್ಕೆ ಮಾತ್ರ. ಈ ಧ್ಯಾನ ಮತ್ತು ಮೌನವನ್ನು ಸಾಧಿಸಬೇಕಾದರೆ ಬುದ್ಧನನ್ನು ಅರಿಯಬೇಕು ಮುಖ್ಯ ಎಂದರು.

ಪಾಲಿ, ಪ್ರಾಕೃತ ಮತ್ತು ಸಂಸ್ಕೃತ ಇವು ಮೂರು ಸೋದರ ಭಾಷೆಗಳು. ತುಂಬ ಹಿಂದೆ ಈ ಮೂರೂ ಭಾಷೆಗಳನ್ನು ಅಧ್ಯಯನ ಮಾಡುವ ಕ್ರಮವಿತ್ತು. ಈ ಮೂರು ಭಾಷೆಗಳ ಸಾಹಿತ್ಯವು ಪುರಾತನ ಭಾರತದ ಸಂಸ್ಕೃತಿಯನ್ನು ಅರಿತುಕೊಳ್ಳಲು ಅಗತ್ಯವಾಗಿವೆ. ಇಂದು ಪಾಲಿ ಭಾಷೆ ಭಾರತದ ಕೆಲವೇ ಕೆಲವು ಕಡೆಗಳಲ್ಲಿ ಅಧ್ಯಯನಕ್ಕಿದೆ. ಪಾಲಿಯು ವಿವಿಧ ಬೌದ್ಧ ರಾಷ್ಟ್ರಗಳಲ್ಲಿ ಧರ್ಮ ಗ್ರಂಥಗಳ ಭಾಷೆಯಾಗಿದೆ ಎಂದು ಹೇಳಿದರು.

ಪ್ರಾಕೃತ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿದೆ. ಸಂಸ್ಕೃತವು ಇವುಗಳಿಗಿಂತ ಒಂದು ಹಂತ ಮುಂದಿದೆ. ಈ ಮೂರು ಭಾಷೆಗಳು ಮತ್ತು ಅವುಗಳ ಸಾಹಿತ್ಯದ ಅಧ್ಯಯನದಿಂದ ಭಾರತದ ಸಂಸ್ಕೃತಿಯನ್ನು ಪರಿಪೂರ್ಣವಾಗಿ ಅರಿಯಲು ಸಾಧ್ಯವಾಗುತ್ತದೆ. ಪಾಲಿ ಭಾಷೆ ಕೇವಲ ಗ್ರಾಮ್ಯ ಭಾಷೆಯಾಗಿರದೆ ಪರಿಷ್ಕಾರ ಹೊಂದಿ ಜನರಲ್ಲಿ ರೂಢಿಯಲ್ಲಿತ್ತು ಎಂದು ಹೇಳಿದರು.

ಸಂಸ್ಕೃತ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್, ವಿದ್ವಾಂಸ ಡಾ.ಗುರುಪಾದ ಕೆ. ಹೆಗಡೆ ಕಾರ್ಯಕ್ರಮ ಉದ್ಘಾಟಿಸಿದರು. ಜೈನ ಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ.ವಿಜಯಕುಮಾರಿ ಎಸ್. ಕರಿಕಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net