ಮಂಗಳೂರು: ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡುತ್ತಿರುವ ಕೃಷ್ಣ ಜೆ. ಪಾಲೆಮಾರ್ ಅವರ ಸಮರ್ಪಣಾ ಮನೋಭಾವ ಸಮಾಜಕ್ಕೆ ಪ್ರೇರಣೆ ಎಂದು ಆಂಧ್ರ ಪ್ರದೇಶದ ರಾಜ್ಯಪಾಲ ನ್ಯಾ.ಅಬ್ದುಲ್ ನಝೀರ್ ಹೇಳಿದರು.
ಮಂಗಳೂರಿನ ರಿಯಲ್ ಎಸ್ಟೇಟ್ ಸಂಸ್ಥೆ ‘ಲ್ಯಾಂಡ್ ಲಿಂಕ್ಸ್’ ನಗರದ ಪ್ರಮುಖ ಸ್ಥಳಗಳಲ್ಲಿ ನಿರ್ಮಿಸಿದ ನಾಲ್ಕು ಅತ್ಯಾಧುನಿಕ ಸಭಾಭವನಗಳನ್ನು ಮೇರಿಹಿಲ್‌ನಲ್ಲಿರುವ ಪಾಲೆಮಾರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಶನಿವಾರ ಏಕಕಾಲಕ್ಕೆ ಲೋಕಾರ್ಪಣೆಗೈದು ಮಾತನಾಡಿದರು.
ಬಾಲ್ಯದಲ್ಲಿ ಕಡು ಬಡತನವನ್ನು ಅನುಭವಿಸಿ ಹಂತ ಹಂತವಾಗಿ ಬೆಳೆದು ಬಂದಿರುವ ಕೃಷ್ಣ ಜೆ. ಪಾಲೆಮಾರ್ ಅವರು ಆದಾಯದ ಶೇ.75ರಷ್ಟು ಸಮಾಜದ ಅಭ್ಯುದಯಕ್ಕೆ ಕೊಡುಗೆಯಾಗಿ ನೀಡುತ್ತಿರುವುದು ಯುವ ಜನರಿಗೆ ಮಾದರಿ. ಮುಂದಿನ ಜನಾಂಗಕ್ಕೆ ಸ್ಪೂರ್ತಿಯಾಗುವ ಉದ್ದೇಶದಿಂದ ಅವರ ಬಯೋಗ್ರಫಿ ಹೊರ ತರುವ ಕೆಲಸ ಶೀಘ್ರ ನಡೆಯಬೇಕು ಎಂದರು.
ಕೋಟಿಗೊಬ್ಬ ಪಾಲೆಮಾರ್: ವಿ.ಸೋಮಣ್ಣ
ತಳ ಮಟ್ಟದಿಂದ ಬಂದು ಒಬ್ಬಂಟಿಗನಾಗಿ ಉದ್ಯಮ ಪ್ರಾರಂಭಿಸಿ, ಅದರಿಂದ ಬರುವ ಲಾಭವನ್ನು ಸಮಾಜಮುಖಿಯಾಗಿ ಯಾವ ರೀತಿ ವಿನಿಯೋಗಿಸಬಹುದು ಎಂಬುದಕ್ಕೆ ಕೃಷ್ಣ ಜೆ.ಪಾಲೆಮಾರ್ ಮಾದರಿ. ಹಲವು ವರ್ಷಗಳಿಂದ ಸ್ನೇಹಿತರಾಗಿರುವ ಅವರು ಶಾಂತ ರೀತಿಯ ವ್ಯಕ್ತಿತ್ವ ಹೊಂದಿದವರಾಗಿದ್ದು ‘ಕೋಟಿಗೊಬ್ಬ ಪಾಲೆಮಾರ್’ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಬಣ್ಣಿಸಿದರು.
ಸೌಂದರ್ಯದ ಕಿರೀಟ: ಯು.ಟಿ.ಖಾದರ್
ಅಭಿವೃದ್ಧಿಯಲ್ಲಿ ಬೆಂಗಳೂರು ಬಳಿಕ ಮಂಗಳೂರು ರಾಜ್ಯದಲ್ಲಿ ಮುಂಚೂಣಿಯಲ್ಲಿರುವ ನಗರ. ಕೃಷ್ಣ ಜೆ. ಪಾಲೆಮಾರ್ ಅವರು ಸ್ಥಾಪಿಸಿರುವ ನಾಲ್ಕು ಸಭಾಭವನಗಳು ಮಂಗಳೂರಿನ ಸೌಂದರ್ಯಕ್ಕೆ ಕಿರೀಟದಂತೆ ಎದ್ದು ನಿಂತಿವೆ. ಇದು ಇತರ ಜಿಲ್ಲೆಯವರನ್ನು ಇಲ್ಲಿಗೆ ಆಕರ್ಷಿಸಲು ಸಹಾಯವಾಗಲಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಶೈಕ್ಷಣಿಕ ಸಾಧಕರಿಗೆ ಗೌರವ
ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿರುವ ವಿಕಾಸ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ಶೈಕ್ಷಣಿಕ ಸಾಧಕರನ್ನು ಗೌರವಿಸಲಾಯಿತು. ಶಕ್ತಿನಗರ ಸಾನಿಧ್ಯ ವಸತಿಯುತ ಶಾಲಾ ಮಕ್ಕಳನ್ನು, ಎಚ್‌ಐವಿ ಸೋಂಕಿತ ಹೆಣ್ಣು ಮಕ್ಕಳ ಆಶ್ರಯದಾತೆ ತಬಸ್ಸುಂ, ರಾಜ್ಯ ಮಟ್ಟದಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ಮಹಾಲಕ್ಷ್ಮೀ ಪೈ ಹಾಗೂ ಮಹಾಲಕ್ಷ್ಮೀ ಭಾರ್ಗವ್, ಕೈ ಇಲ್ಲದ ಕಲಾವಿದ ಕೌಶಿಕ್ ಆಚಾರ್ಯ, ಸೇವಾಶ್ರಮದ ಗೀತಾ ಶೆಟ್ಟಿ, ಬಾಲಸಂರಕ್ಷಣಾ ಕೇಂದ್ರ ಕುತ್ತಾರ್ ಅವರನ್ನು ಗೌರವಿಸಲಾಯಿತು. ಕೃಷ್ಣ ಜೆ.ಪಾಲೆಮಾರ್ ಅವರಿಗೆ ಪ್ರೇರಕ ಶಕ್ತಿಯಾಗಿರುವ ವಿಕಾಸ್ ಎಜುಕೇಶನ್‌ನ ಟ್ರಸ್ಟಿ ಜೆ.ಕೊರಗಪ್ಪ ಅವರನ್ನು ಸನ್ಮಾನಿಸಲಾಯಿತು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಲ್ಯಾಂಡ್ ಲಿಂಕ್ಸ್ ಸಂಸ್ಥೆಯ ಉಪಾಧ್ಯಕ್ಷ ಪ್ರದೀಪ್ ಪಾಲೆಮಾರ್, ಪ್ರಸನ್ನ ಪಾಲೆಮಾರ್, ಜೆ.ಕೆ.ರಾವ್, ಸಂತೋಷ್ ಪಾಲೆಮಾರ್, ಸೂರಜ್ ಕಲ್ಯ ಮೊದಲಾದವರು ಉಪಸ್ಥಿತರಿದ್ದರು.
ಕದ್ರಿ ನವನೀತ ಶೆಟ್ಟಿ ಸ್ವಾಗತಿಸಿದರು. ನಿತಿನ್ ಸಾಲ್ಯಾನ್ ಹಾಗೂ ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರಿನಲ್ಲಿ ಕಳೆದ 45 ವರ್ಷಗಳ ಹಿಂದೆ ಲ್ಯಾಂಡ್ ಲಿಂಕ್ಸ್ ಸಂಸ್ಥೆ ಸ್ಥಾಪಿಸಿ ಅನೇಕ ಯೋಜನೆಗಳನ್ನು ಜನತೆಗೆ ಒದಗಿಸಿದ್ದೇನೆ. ಜನತೆ ಅವೆಲ್ಲವನ್ನು ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಅವರ ಪ್ರೀತಿಯ ದ್ಯೋತಕವಾಗಿ ನಾಲ್ಕು ಸಭಾಭವನಗಳನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಣೆ ಮಾಡಿದ್ದೇನೆ. ವಿಕಾಸ್ ಎಜುಕೇಶನ್ ಟ್ರಸ್ಟ್ ಮೂಲಕವೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುತ್ತಾ ಬಂದಿದ್ದೇವೆ.