

ಹೊನ್ನಾಳಿ: ತಾಲೂಕಿನ ಅರಬಗಟ್ಟೆಯ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿಯ ಜೋಡಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವೈಭವದಿಂದ ನಡೆಯಿತು.
ಗುರುವಾರ ಬೆಳಗ್ಗೆ ಜೋಡಿ ಬಸವಣ್ಣನಿಗೆ ವಿಶೇಷ ಪೂಜಾ ಕೈಂಕರ್ಯ ನಡೆದವು. ಜೋಡಿ ಬಸವೇಶ್ವರ, ಬೀರಲಿಂಗೇಶ್ವರ, ಆಂಜನೇಯಸ್ವಾಮಿ, ಮಾದವನಭಾವಿ ಗ್ರಾಮದ ಬೀರಲಿಂಗೇಶ್ವರ ಹಾಗೂ ರಂಗಪ್ಪ ದೇವರ ಉತ್ಸವಮೂರ್ತಿಗಳು ಪಾಲ್ಗೊಂಡಿದ್ದವು.
ಗ್ರಾಮದ ಬೂದಿಗೌಡ್ರು ಮತ್ತು ಪಲ್ದಾರ್ಗೌಡ್ರು, ಮನೆಯಿಂದ ಬಲೆ ಅನ್ನದ ಅಡುಗೆಯನ್ನು ಮೆರವಣಿಗೆ ಮೂಲಕ ತಂದು ಜೋಡಿ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ರಥಕ್ಕೆ ಬಲೆ ಅನ್ನ ನೈವೇದ್ಯ ಮಾಡಿದರು.
ಬಳಿಕ ಗ್ರಾಮದ ಗುರುಗಳ ಮಂತ್ರಘೊಷದೊಂದಿಗೆ ರಥಕ್ಕೆ ಪೂಜೆ ಮಾಡಿ, ಮಂತ್ರಾಕ್ಷತೆ ಅರ್ಪಿಸಿದರು. ಒಂದು ರಥದಲ್ಲಿ ಜೋಡಿ ಬಸವೇಶ್ವರಮೂರ್ತಿ, ಇನ್ನೊಂದರಲ್ಲಿ ಆಂಜನೇಯಸ್ವಾಮಿಯನ್ನು ಕೂರಿಸಲಾಯಿತು. ನಂತರ ನೆರೆದಿದ್ದ ಭಕ್ತರು ಬಸವೇಶ್ವರ ಸ್ವಾಮಿಗೆ ಜೈಕಾರ ಹಾಕುತ್ತಾ ಗ್ರಾಮದ ಅಗಸೆ ಬಾಗಿಲಿನವರಗೆ ರಥವನ್ನು ಎಳೆದರು.
ರಥೋತ್ಸವ ಮುಂದೆ ಹೋಗುತ್ತಿದ್ದಂತೆ ಭಕ್ತರು ಮಂಡಕ್ಕಿ, ಮೆಣಸಿನ ಕಾಳು, ಬಾಳೆಹಣ್ಣು, ತೇರಿಗೆ ಎಸೆದು ಭಕ್ತಿ ಸಮರ್ಪಿಸಿದರು.
ರಥೋತ್ಸವದ ಹಿನ್ನೆಲೆ ಗ್ರಾಮದಲ್ಲಿರುವ ವಿವಿಧ ದೇವಸ್ಥಾನಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಒಳ- ಹೊರಾಂಗಣವನ್ನು ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ರಾಜ ಬೀದಿಗಳಲ್ಲಿ ಕೊಂಬು, ಕಹಳೆ, ತಮಟೆ, ಬಾಜಾ ಭಜಂತ್ರಿ, ವೀರಗಾಸೆ, ಮಂಗಳ ವಾದ್ಯದೊಂದಿಗೆ ದೇವರ ಉತ್ಸವ ಮೂರ್ತಿ ಗಳನ್ನು ಮೆರವಣಿಗೆ ಮಾಡಲಾಯಿತು.
ಬಸವೇಶ್ವರ ಸ್ವಾಮಿಯ ಜೋಡಿ ರಥೋತ್ಸವ ಅಂಗವಾಗಿ ಮಂಗಳವಾರ ಕಂಕಣಧಾರಣೆ, ಬುಧವಾರ ರಾತ್ರಿ ಆನೆ ಉತ್ಸವ, ರಥಕ್ಕೆ ಕಳಸರೋಹಣ ಹಾಗೂ ವಿವಿಧ ಧಾರ್ವಿುಕ ಪೂಜಾ ಕಾರ್ಯಗಳು ನಡೆದವು. ಗುರುವಾರ ಬೆಳಗ್ಗೆ ಬಸವೇಶ್ವರ ಸ್ವಾಮಿಗೆ ರುದ್ರಾಭೀಷಕ ಮಾಡಲಾಗಿತ್ತು.
ಕಮಿಟಿಯ ಮುಖಂಡರಾದ ಕಲ್ಲಜ್ಜರ ಚಿಕ್ಕಪ್ಪ, ಈರಿ ಮಂಜಪ್ಪ, ಪಾಲಪ್ಪ, ಚನ್ನಪ್ಪ, ಮಂಜಪ್ಪ, ಸಿದ್ದಪ್ಪ, ಎಂ.ಜಿ. ಸುರೇಶಪ್ಪ, ಜಗದೀಶ್, ಸಣ್ಣಚಿಕ್ಕಪ್ಪರ ನಾಗರಾಜಪ್ಪ, ಬೇವಿನಹಳ್ಳಿ ಚಿಕ್ಕಪ್ಪ, ಸಣ್ಣಬಸಪ್ಪ ಇತರರು ಇದ್ದರು.