ಕುಕ್ಕೆ ಸುಬ್ರಹ್ಮಣ್ಯನಿಗೆ ವಿಶೇಷ ಪಾಲಕಿ ಉತ್ಸವ : ಜಾತ್ರೆಗೆ ಹರಿದು ಬಂದ ಭಕ್ತಜನ

New Project (5)
Published on

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಪ್ರಯುಕ್ತ ಮಾರ್ಗಶಿರ ಶುದ್ಧ ಪಂಚಮಿಯ ದಿನವಾದ ಶುಕ್ರವಾರ ಶ್ರೀ ದೇವರ ವಿಶೇಷ ಪಾಲಕಿ ಉತ್ಸವ ನೆರವೇರಿತು. ಸಹಸ್ರಾರು ಭಕ್ತರು ಶ್ರೀ ದೇವರ ಉತ್ಸವ ವೀಕ್ಷಿಸಿದರು.

ರಾತ್ರಿ ಮಹಾಪೂಜೆ ಬಳಿಕ ಹೊರಾಂಗಣ ಉತ್ಸವ ಆರಂಭವಾಯಿತು. ವಿಶೇಷ ಹೂವಿನ ಅಲಂಕಾರದೊಂದಿಗೆ ರಾರಾಜಿಸುತ್ತಿದ್ದ ಪಾಲಕಿಯಲ್ಲಿ ಶ್ರೀ ದೇವರ ಉತ್ಸವ ನೆರವೇರಿತು. ಬಳಿಕ ಶ್ರೀ ದೇವರ ದೀಪಾರಾಧನೆಯುಕ್ತ ಬಂಡಿ ರಥೋತ್ಸವ ಹೊರಾಂಗಣದಲ್ಲಿ ನೆರವೇರಿತು. ಸಂಗೀತ, ಮಂಗಳವಾದ್ಯ, ಸ್ಯಾಕ್ಸೋಪೋನ್, ಬ್ಯಾಂಡ್‌ಗಳ ಸುಮಧುರ ಸುತ್ತುಗಳ ಉತ್ಸವದ ನಂತರ ರಥೋತ್ಸವ ನಡೆಯಿತು.

ಕುಕ್ಕೆ ಸುಬ್ರಹ್ಮಣ್ಯದ ಜಾತ್ರೋತ್ಸವಕ್ಕೆ ಕೇರಳದ ಚೆಂಡೆ ವಾದನ, ಡೋಲು, ಚಕ್ರತಾಳ ಕಲಾವಿದರು ಮತ್ತು ಕಹಳೆ ಕಲಾವಿದರು ತಮ್ಮ ಕಲಾಕೌಶಲ ಪ್ರಸ್ತುತಪಡಿಸಿದರು. ಅದೇ ರೀತಿ ತಮಿಳುನಾಡಿನ ತಂಜಾವೂರಿನ ಹಾಗೂ ಶ್ರೀ ರಂಗಪಟ್ಟಣದ ನಾದಸ್ವರ, ತವಿಲ್, ಸ್ಯಾಕ್ಸೋಪೋನ್ ಕಲಾವಿದರು ಕೂಡಾ ತಮ್ಮ ವಿದ್ವತ್ತನ್ನು ಶ್ರೀ ದೇವರ ಮುಂಭಾಗದಲ್ಲಿ ಸಾದರಪಡಿಸಿದರು.

ಕುಕ್ಕೆ ಸುಬ್ರಹ್ಮಣ್ಯದ ವಾರ್ಷಿಕ ಚಂಪಾಷಷ್ಠಿಯ ಸ್ಕಂಧ ಪಂಚಮಿಯ ದಿನ ಸಂಜೆ ಭಕ್ತ ಜನರು ತಂಡೋಪತಂಡವಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದರು. ಭಕ್ತರೊಂದಿಗೆ ಅವರನ್ನು ಕರೆತಂದ ವಾಹನಗಳ ಸಂಖ್ಯೆಯೂ ಅಧಿಕವಾದುದರಿಂದ ರಸ್ತೆ ಸಂಚಾರ ಸುಗಮಗೊಳಿಸಲು ಪೊಲೀಸ್ ಇಲಾಖೆ ಸೂಕ್ತ ವ್ಯವಸ್ಥೆ ನಿರ್ವಹಿಸಿತು. ಅಲ್ಲದೆ ವಾಹನ ನಿಲ್ದಾಣ ಮತ್ತು ಮಾರ್ಗ ಬದಲಾವಣೆ ಮೂಲಕ ರಸ್ತೆ ಸಂಚಾರಕ್ಕೆ ಅನುಕೂಲಕರ ವಾತಾವರಣ ಇಲಾಖೆ ಮಾಡಿತ್ತು. ಕೆಎಸ್‌ಆರ್‌ಟಿಸಿ ಕೂಡಾ ಕ್ಷೇತ್ರಕ್ಕೆ ಬರಲು ಮತ್ತು ತೆರಳಲು ವಿಶೇಷ ಬಸ್ ವ್ಯವಸ್ಥೆ ಮಾಡಿದ್ದು, ಭಕ್ತರಿಗೆ ಹೆಚ್ಚಿನ ಉಪಯೋಗವಾಗಿತ್ತು. ವಿಶೇಷ ಭದ್ರತೆಗಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ರಥಬೀದಿಯ ಸರ್ಕಲ್ ಬಳಿ ಹಾಗೂ ಸವಾರಿ ಮಂಟಪದ ಪಾರ್ಕಿಂಗ್ ಬಳಿ ಸಿಸಿ ಟಿವಿ ಕ್ಯಾಮರಾ ಇರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net