ಅರಮನೆ ಮಾದರಿಯಲ್ಲಿ ಬಸ್ ನಿಲ್ದಾಣ : ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟನೆ

S A Ramadas
Published on

ಯಾವುದೇ ಜಾತಿ, ಧರ್ಮದ ಆಧಾರ ಮೇಲೆ ನಿರ್ಮಿಸುತ್ತಿಲ್ಲ

ಮೈಸೂರು: ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜು ಬಳಿ ಪಾರಂಪರಿಕವಾಗಿ ಕಾಣುವ ದೃಷ್ಟಿಯಿಂದ ಅರಮನೆ ಮಾದರಿಯಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ ಹೊರತು ಯಾವುದೇ ಧರ್ಮದ ಆಧಾರದ ಮೇಲೆ ನಿರ್ಮಿಸಲಾಗುತ್ತಿಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟಪಡಿಸಿದ್ದಾರೆ.

ನಗರದ ಅನೇಕ ಸ್ಥಳಗಳಲ್ಲಿ ಈಗಾಗಲೇ ಇದೇ ಮಾದರಿಯ ಬಸ್ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಅರಮನೆ ಗೋಪುರ ಮಾದರಿಯಲ್ಲಿ ನಿರ್ಮಿಸುವ ಸಂಬಂಧ ಈಗಾಗಲೇ ನಗರದ ಹಲವಾರು ಕಡೆ ನಿರ್ಮಿಸಿರುವ ಬಸ್ ನಿಲ್ದಾಣದ ಮಾದರಿ ರೀತಿಯೇ ಇಲ್ಲೂ ವಿನ್ಯಾಸ ಮಾಡಲಾಗಿದೆ. ಈ ಸಂಬಂಧ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ತಜ್ಞರ ಸಮಿತಿಗೆ ಒತ್ತಾಯ ಮಾಡಲಾಗಿದೆ. ಸಮಿತಿ ಸದರಿ ಬಸ್ ತಂಗುದಾಣವನ್ನು ಪರಿಶೀಲಿಸಿ ವರದಿ ನೀಡಬೇಕು ಎಂದು ಒತ್ತಾಯ ಮಾಡಲಾಗಿದೆ. ವರದಿಯಲ್ಲಿ ಸದರಿ ವಿನ್ಯಾಸದಿಂದ ವಿವಾದಗಳಾಗಲಿದೆ ಎಂದು ಕಂಡು ಬಂದಲ್ಲಿ ವಿನ್ಯಾಸವನ್ನು ಬದಲಾವಣೆ ಮಾಡಲು ನಮ್ಮದೇನು ಅಭ್ಯಂತರವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರು ಪಾರಂಪರಿಕ ನಗರಿ. ಇದರ ಮಹತ್ವ ಸಾರುವ ದೃಷ್ಟಿಯಿಂದ ಶಾಸಕರ ಅನುದಾನದ 10 ಲಕ್ಷ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ಕಾಮಗಾರಿ ಈಗಾಗಲೇ ಶೇ.60ರಷ್ಟು ಮುಗಿದಿದ್ದು, ಇನ್ನೂ ಅನೇಕ ಕಾಮಗಾರಿ ಪ್ರಗತಿಯಲ್ಲಿದೆ. ಬಸ್ ನಿಲ್ದಾಣದೊಳಗೆ ಎಲ್‌ಇಡಿ ಸ್ಕ್ರೀನ್ ಅಳವಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿ ಪ್ರಕಟಿಸಲಾಗುತ್ತದೆ. ಕೆಲವು ಮಾಧ್ಯಮಗಳಲ್ಲಿ ಸಂಸದರ ಹೇಳಿಕೆ ನಂತರ ರಾತ್ರೋರಾತ್ರಿ ಕಳಶ ಅಳವಡಿಸಲಾಗಿದೆ ಎಂದು ವರದಿಯಾಗಿದೆ. ಆದರೆ, ವಾಸ್ತವಾಂಶ ಕಳೆದ ವಾರವೇ ಕಳಸ ಅಳವಡಿಸಲಾಗಿದೆ.

ಕೆಲವರು ಮಸೀದಿ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ ಹಾಗೂ ಈ ಕಾಮಗಾರಿಯ ಗುತ್ತಿಗೆದಾರ ಒಬ್ಬ ಮುಸ್ಲಿಂ ಎಂದು ತಪ್ಪಾಗಿ ಅರ್ಥೈಸಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸುತ್ತಿದ್ದಾರೆ. ಸದರಿ ಬಸ್ ತಂಗುದಾಣದ ಕಾಮಗಾರಿಯನ್ನು ಗುತ್ತಿಗೆದಾರರಾದ ಮಹದೇವ್ ಅವರು ದಂತಿ ಕನ್ಸ್‌ಟ್ರಕ್ಷನ್ ಎಂಬ ಹೆಸರಿನಲ್ಲಿ ನಿರ್ಮಿಸುತ್ತಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತರಿಗೂ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net