

ವಿಶ್ವ ಯೋಗ ದಿನದ ಅಂಗವಾಗಿ ಜೂ. 21ರಂದು ನಗರದ ಅರಮನೆ ಮುಂಭಾಗ ಯೋಗ ಪ್ರದರ್ಶನ ನಡೆಯಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಆಯುಷ್ ಇಲಾಖೆ, ಮೈಸೂರು ಮಹಾನಗರ ಪಾಲಿಕೆ, ಮುಡಾ ಮತ್ತು ಯೋಗ ಫೆಡರೇಷನ್ ಆಫ್ ಮೈಸೂರು ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಬಾರಿ 15 ಸಾವಿರ ಜನರು ಸೇರುವ ನಿರೀಕ್ಷೆಯಿದೆ. ಯೋಗ ಪ್ರದರ್ಶನದಲ್ಲಿ ದಾಖಲೆ ಮಾಡುವ ಕಸರತ್ತು ಈ ಬಾರಿ ಇಲ್ಲ. ಸರಳ ಮತ್ತು ಸಾಂಕೇತಿಕವಾಗಿ ಯೋಗ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಯೋಗ ಪ್ರದರ್ಶನಕ್ಕೆ ಅಂತಿಮ ಹಂತದ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ. ಯೋಗ ದಿನಾಚರಣೆಯ ಯಶಸ್ಸಿಗಾಗಿ ಜಿಲ್ಲಾಡಳಿತ ಯೋಗ ಒಕ್ಕೂಟ ಹಾಗೂ ವಿವಿಧ ಯೋಗ ಸಂಸ್ಥೆಗಳ ಮುಖಂಡರೊಂದಿಗೆ ಮೂರ‌್ನಾಲ್ಕು ಬಾರಿ ಸಭೆ ನಡೆಸಿ, ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ.
ಜಿಲ್ಲಾಡಳಿತದ ಮನವಿ ಮೇರೆಗೆ ವಾರಕ್ಕೂ ಹೆಚ್ಚು ಕಾಲ ವಿವಿಧ ಶಾಲಾ-ಕಾಲೇಜುಗಳಲ್ಲಿ ಯೋಗ ಪ್ರದರ್ಶನದ ತರಬೇತಿ ನೀಡಲಾಗಿದೆ. ಯೋಗ ದಿನಾಚರಣೆಯ ಶಿಷ್ಟಾಚಾರದಂತೆ ಸಾರ್ವಜನಿಕರು, ಯೋಗಪಟುಗಳಿಗೆ ಯೋಗ ತರಬೇತಿ ಜತೆಗೆ ಯೋಗಾಸನದ ಬಗ್ಗೆ ಮಾಹಿತಿ ನೀಡಲಾಗಿದೆ.
ಒಂದೂಕಾಲು ಗಂಟೆಯಲ್ಲಿ ಇಡೀ ಕಾರ್ಯಕ್ರಮ ಪೂರ್ಣಗೊಳ್ಳಲಿದೆ. ಸಭಾ ಕಾರ್ಯಕ್ರಮಕ್ಕೆ 30 ನಿಮಿಷ ಮತ್ತು ಯೋಗ ಪ್ರದರ್ಶನಕ್ಕೆ 45 ನಿಮಿಷ ಸಮಯ ನಿಗದಿ ಮಾಡಲಾಗಿದೆ. ಬೆಳಗ್ಗೆ 6.30ರಿಂದ 8 ರವರೆಗೆ ಯೋಗ ದಿನದ ಸಭಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕರಾದ ತನ್ವೀರ್‌ಸೇಠ್, ಜಿ.ಟಿ.ದೇವೇಗೌಡ, ಕೆ.ಹರೀಶ್‌ಗೌಡ, ಟಿ.ಎಸ್. ಶ್ರೀವತ್ಸ, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.
ಶಂಖನಾದದೊಂದಿಗೆ ಪ್ರಾರಂಭಗೊಳ್ಳುವ ಯೋಗ ಪ್ರದರ್ಶನ ಧ್ಯಾನದೊಂದಿಗೆ ಅಂತ್ಯಗೊಳ್ಳಲಿದೆ. ಅರಮನೆ ಅಂಗಳದಲ್ಲಿ ಮೊದಲಿಗೆ ಶಂಖನಾದದಿಂದ ಯೋಗ ಆರಂಭವಾಗಲಿದೆ. ನಂತರ ಪ್ರಾರ್ಥನೆ ನಡೆಯಲಿದೆ. ಬಳಿಕ ದೇಹವನ್ನು ಸಡಿಲ ಮಾಡುವ ಅಭ್ಯಾಸ, ತದನಂತರ 19 ಆಸನಗಳ ಅಭ್ಯಾಸ ನಡೆಯಲಿದೆ. ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ-1, ಪಾದ ಹಸ್ತಾಸನ-2, ಅರ್ಧ ಚಕ್ರಾಸನ, ತ್ರಿಕೋನಾಸನ, ಸಮ ದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧ ಹಲಾಸನ, ಪವನಮುಕ್ತಾಸನ, ಶವಾಸನದ ಪ್ರದರ್ಶನ ನಡೆಯಲಿವೆ. ಬಳಿಕ ಕಪಾಲಭಾತಿ, ನಾಡಿಶೋಧನ ಪ್ರಾಣಾಯಾಮ, ಶೀತಲೀ ಪ್ರಾಣಾಯಾಮ, ಭ್ರಾಮರೀ ಪ್ರಾಣಾಯಾಮ, ಧ್ಯಾನ ಮತ್ತು ಸಂಕಲ್ಪ ನಡೆಯಲಿವೆ.
ಅರಮನೆ ಅಂಗಳದಲ್ಲಿ ನಡೆಯುವ ಯೋಗ ಕಾರ್ಯಕ್ರಮಕ್ಕೆ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಆಕರ್ಷಿಸಲು ಕ್ರಮ ವಹಿಸಲಾಗಿದೆ. ಅದಕ್ಕಾಗಿ ವಿದ್ಯಾರ್ಥಿಗಳನ್ನು ಕಳುಹಿಸಿಕೊಡುವಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಈ ಸಂಬಂಧ ನಗರದ ಎಲ್ಲ ಶಾಲಾ-ಕಾಲೇಜಿಗೆ ಸೂಚನಾ ಪತ್ರ ರವಾನಿಸಲಾಗಿದ್ದು, ಶಾಲಾ ಕಾಲೇಜಿನ ಯೋಗಾಭ್ಯಾಸ ಮಾಡುವ ವಿದ್ಯಾರ್ಥಿಗಳು ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಜೂ.21ರಂದು ಬೆಳಗ್ಗೆ 6 ಗಂಟೆಯೊಳಗೆ ಅರಮನೆ ಆವರಣಕ್ಕೆ ಆಗಮಿಸಬೇಕು. 6.30ರಿಂದ 8 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. ಬರುವಾಗ ಕುಡಿಯುವ ನೀರು, ಯೋಗ ಮ್ಯಾಟ್ ಹಾಗೂ ಯೋಗಕ್ಕೆ ಸೂಕ್ತವಾದ ಉಡುಪು ಧರಿಸಿ ಬರಬೇಕು. ವರಾಹ ದ್ವಾರ, ಬಲರಾಮ ದ್ವಾರ, ಕರಿಕಲ್ಲಿನ ತೊಟ್ಟಿ ದ್ವಾರ ಹಾಗೂ ಜಯರಾಮ ದ್ವಾರಗಳ ಮೂಲಕ ಪ್ರವೇಶಿಸಬಹುದಾಗಿದೆ. ಈ ಬಾರಿ ಸುಮಾರು 15 ಸಾವಿರ ಯೋಗ ಪಟುಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಯಾವುದೇ ದಾಖಲೆಗೆ ಪ್ರಯತ್ನಿಸುತ್ತಿಲ್ಲ. ಮುಂದಿನ ಬಾರಿ ಪ್ರಯತ್ನಿಸಲಾಗುವುದು.ಡಾ.ಪಿ.ಎನ್.ಗಣೇಶ್‌ಕುಮಾರ್, ಕಾರ್ಯದರ್ಶಿ, ಯೋಗ ಫೆಡರೇಷನ್ ಆಫ್ ಮೈಸೂರು