ಪಕ್ಷಾತೀತವಾಗಿ ಸಹಕಾರ ನೀಡಿದಲ್ಲಿ ನಗರದ ಅಭಿವೃದ್ಧಿ ಸಾಧ್ಯ, ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅಭಿಮತ

29 Nela ph 02 Savalathu Vitharane
Published on

ನೆಲಮಂಗಲ: ಚುನಾಯಿತ ಸದಸ್ಯರು ಪಕ್ಷಾತೀತವಾಗಿ ಸಹಕಾರ ನೀಡಿದರೆ ನಗರದ ನಿರೀಕ್ಷಿತ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಲಾನುಭವಿಗಳಿಗೆ ವಿವಿಧ ಸೌಲಭ್ಯ ವಿತರಣೆ ಹಾಗೂ ನಗರಸಭೆ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.

ಪುರಸಭೆ ಸುತ್ತಮುತ್ತಲಿದ್ದ ಗ್ರಾಮ ಪಂಚಾಯಿತಿಗಳನ್ನು ಒಳಪಡಿಸಿಕೊಂಡು ನಗರಸಭೆಯಾಗಿ ಮೇಲ್ದರ್ಜೆಗೇರಿಸಿದ್ದು, ಈಗ ನಗರಸಭೆ ಕಾರ್ಯಾಲಯವನ್ನು ಉದ್ಘಾಟಿಸಲಾಗಿದೆ ಎಂದು ತಿಳಿಸಿದರು.

ಪಟ್ಟಣದಲ್ಲಿ ಒಳಚರಂಡಿ ಸೌಲಭ್ಯ ಒದಗಿಸುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅವಧಿಯಲ್ಲೆ ಯೋಜನೆಯ ವಿಸ್ತೃತವರದಿ ಸಿದ್ಧಪಡಿಸಿ, ಕೊಳಚೆ ನೀರು ಶುದ್ಧೀಕರಣ ಕೇಂದ್ರ ನಿರ್ಮಾಣಕ್ಕೆ ಅಗತ್ಯವಿರುವ ಜಾಗವನ್ನು ಗುರುತಿಸಲಾಗಿತ್ತು. ಆದರೆ ಈ ಹಿಂದೆ ಇದ್ದ ಜಿಲ್ಲಾಧಿಕಾರಿ ಎಡವಟ್ಟಿನಿಂದಾಗಿ ಸರ್ಕಾರದಿಂದ ಅನುಮೋದನೆ ದೊರೆಯಲಿಲ್ಲ. ಈಗ ಮತ್ತೆ ಕಡತ ಸರ್ಕಾರದ ಹಂತದಲ್ಲಿದ್ದು, ಅನುಮೋದನೆ ದೊರೆಯಬೇಕಿದೆ ಎಂದರು.

ನೂತನ ನಗರಸಭೆ ಕಾರ್ಯಾಲಯದ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಅನುದಾನ ತರುವ ಕೆಲಸವಾಗಬೇಕಿದೆ. ಪುರಸಭೆ ಚುನಾವಣೆಯಲ್ಲಿ ಆಯ್ಕೆಯಾಗಿರುವ ಸದಸ್ಯರನ್ನೇ ನಗರಸಭೆ ಸದಸ್ಯರನ್ನಾಗಿ ಪರಿಗಣಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಗ್ರಾಮಾಂತರ ಜಿಲ್ಲೆಯಲ್ಲಿ ಮಾದರಿ ನಗರಸಭೆಯನ್ನಾಗಿಸಲು ಪ್ರತಿಯೊಬ್ಬ ಸದಸ್ಯರು ಕೈಜೋಡಿಸಬೇಕು ಎಂದರು.

ಸದಸ್ಯ ಕೆ.ಎಂ.ಶಿವಕುಮಾರ್ ಮಾತನಾಡಿ, ಸತತ ಮೂರ‌್ನಾಲ್ಕು ವರ್ಷಗಳ ಕಾಲ ಶ್ರಮಿಸಿದ್ದ ಪರಿಣಾಮ ಪುರಸಭೆ ನಗರಸಭೆಯಾಗಿ ಮೇಲ್ದರ್ಜೆಗೇರಿದ್ದು, ಅದರ ಕೀರ್ತಿ ಶಾಸಕರಿಗೆ ಸಲ್ಲಬೇಕು ಎಂದರು.

ನಗರಸಭೆ ವ್ಯಾಪ್ತಿಯಲ್ಲಿ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಜತೆಗೆ ಶೀಘ್ರದಲ್ಲಿ ಒಳಚರಂಡಿ ಸೌಲಭ್ಯ ಕಲ್ಪಿಸಿಕೊಡುವಂತೆ ಸದಸ್ಯ ಎನ್.ಗಣೇಶ್ ಮನವಿ ಮಾಡಿದರು.

ಪೌರಕಾರ್ಮಿಕರ ಮನವಿ: ಹಾಲಿ ನಗರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ವಾಹನಚಾಲಕರು, ನೀರು ಸರಬಾರಾಜು ಸಹಾಯಕರು, ಕಂಪ್ಯೂಟರ್ ಆಪರೇಟರ್ಸ್‌ಗಳನ್ನು ಕಾಯಂಗೊಳಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿ ಮಾಡುವುದು, ಹೊರಗುತ್ತಿಗೆ ಪದ್ಧತಿಯನ್ನು ರದ್ದು ಮಾಡುವಂತೆ ಪೌರಕಾರ್ಮಿಕರು ಶಾಸಕರಿಗೆ ಕಾರ್ಮಿಕರು ಮನವಿ ಸಲ್ಲಿಸಿದರು.

ವಿವಿಧ ಸವಲತ್ತು ವಿತರಣೆ: ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಗರಸಭೆಯ ಶೇ.24.25 ಯೋಜನೆಯಲ್ಲಿ ಪರಿಶಿಷ್ಟ ಜಾತಿ ಪಂಗಡದ 74 ಲಾನುಭವಿಗಳಿಗೆ ಹೊಲಿಗೆಯಂತ್ರ ವಿತರಣೆ, 85 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಚೆಕ್, ನೋಟುಪುಸ್ತಕ ವಿತರಣೆ, 3 ಸರ್ಕಾರಿ ವಿದ್ಯಾರ್ಥಿನಿಲಯಗಳಿಗೆ ಕಂಪ್ಯೂಟರ್ ವಿತರಣೆ, ಅಡುಗೆ ಸಲಕರಣೆ ವಿತರಣೆ ಶೇ.7.25 ಯೋಜನೆಯಲ್ಲಿ ಇತರ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಚೆಕ್, ನೋಟುಪುಸ್ತಕಗಳನ್ನು, ವಿತರಣೆ ಮಾಡಲಾಯಿತು.

ನಗರಸಭೆ ಪ್ರಭಾರ ಪೌರಾಯುಕ್ತ ಜಯಪ್ಪ, ಎಇಇ ಎಂ.ಬಿ.ನಾಗರಾಜು, ತಾಲೂಕು ಜೆಡಿಎಸ್ ಅಧ್ಯಕ್ಷ ಹೇಮಂತ್‌ಕುಮಾರ್, ನಗರಸಭೆ ಸದಸ್ಯ ಲತಾಹೇಮಂತ್‌ಕುಮಾರ್, ರಾಜಮ್ಮ, ಲೋಲಾಕ್ಷಿ, ಎನ್.ಎಸ್.ಪೂರ್ಣಿಮಾ, ಸುಜಾತಾ, ಎನ್.ಆಂಜಿನಪ್ಪ, ಎನ್.ಗಣೇಶ್, ಸುನಿಲ್‌ಮೂಡ್, ಎನ್.ಎಸ್.ಗಂಗಾಧರ್‌ರಾವ್, ನರಸಿಂಹಮೂರ್ತಿ, ಎ.ಪುರುಷೋತ್ತಮ್, ಪದ್ಮನಾಭ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ಎ.ಪಿಳ್ಳಪ್ಪ, ಮುಖಂಡರಾದ ಗಂಗಬೈಲಪ್ಪ, ನಾರಾಯಣರಾವ್, ಕೆ.ಕೆ.ಕೃಷ್ಣಪ್ಪ, ನರಸಿಂಹಮೂರ್ತಿ, ಉಮೇಶ್, ರಾಜಮ್ಮ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net