

ತುಮಕೂರು: ಪಾಕಿಸ್ತಾನ ಮೂಲದ ಸಂಘಟನೆಯ ಚಟುವಟಿಕೆಗಳು ತುಮಕೂರಿನಲ್ಲಿ ತಲೆ ಎತ್ತಿದೆ ಎಂಬ ಆತಂಕ ಸೃಷ್ಟಿಯಾಗಿದೆ. ಇಸ್ಲಾಮಿಕ್ ತತ್ವಗಳು, ನಂಬಿಕೆಗೆ ವಿರುದ್ಧವಾದ ಪಾಕ್ ಮೂಲದ ರಿಯಾಜ್ ಅಹ್ಮದ್ ಗೋಹಲ್ ಶಾಹಿ ಗುಂಪಿನ (ಎಂಎಫ್ಐ) ಸಂಟನೆ ವಿರುದ್ಧ ಇದೀಗ ಮುಸ್ಲಿಂ ಧಾರ್ಮಿಕ ಮುಖಂಡರು ತಿರುಗಿಬಿದ್ದಿದ್ದಾರೆ. ಆದರೆ, ಎಂಎ್ಐ ಸಕ್ರಿಯ ಸದಸ್ಯೆ ತುಮಕೂರಿನವರೇ ಆಗಿದ್ದು, ಯಾವುದೇ ಸಂಟನೆ ಇಲ್ಲಿ ಕಾರ್ಯಾಚರಣೆ ಮಾಡುತ್ತಿಲ್ಲ. ಬದಲಿಗೆ ಸಂಟನೆ ಸ್ಥಾಪಕ ಗೋಹಲ್ ಶಾಹಿ ತತ್ವಗಳನ್ನು ಅನುಸರಿಸುತ್ತ ಸರ್ವಧರ್ಮ ಪಾಲನೆಗೆ ನೆರೆಹೊರೆಯವರನ್ನು ಪ್ರೇರೇಪಿಸುತ್ತಿದ್ದಾರೆ ಎಂಬ ಕಳವಳ ಸಮುದಾಯದಲ್ಲಿ ಉಂಟಾಗಿದೆ.
ಮುಸ್ಲಿಮರನ್ನು ತಪ್ಪು ದಾರಿಗೆಳೆಯುವ ಮತ್ತು ಭದ್ರತೆಯ ಆತಂಕ ಸೃಷ್ಟಿಸುವ ಈ ಸಂಘಟನೆ ಬಗ್ಗೆ ಪೊಲೀಸರು ನಿಗಾ ವಹಿಸಿ, ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ತುಮಕೂರಿನಲ್ಲಿ ಸೋಮವಾರ ಮರ್ಕಜಿ ಮಜ್ಲಿಸೆ ಮುಶಾವರತ್ ಸಂಟನೆ ನೇತೃತ್ವದಲ್ಲಿ ದೊಡ್ಡ ಸಂಖ್ಯೆಯಲ್ಲಿ ತುಮಕೂರು ನಗರದ ಮುಸ್ಲಿಮರೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನೂರಾನಿ ಮಸೀದಿ ಅಧ್ಯಕ್ಷರು ಹಾಗೂ ಮರ್ಕಜಿ ಮಜ್ಲಿಸೆ ಮುಶಾವರತ್ ಸದಸ್ಯರಾದ ಜಾಹಿದ್ ಖಾನ್ ಶಿರಾನಿ, ಇಕ್ಬಾಲ್ ಅಹಮದ್, ನಯಾಜ್ ಅಹಮದ್ ನೇತೃತ್ವದ ನಿಯೋಗವು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಗೋಪಾಲ್ ಹಾಗೂ ಪುರುಷೋತ್ತಮ್ಗೆ ಮನವಿ ಸಲ್ಲಿಸಿ ತುಮಕೂರಿನಲ್ಲಿ ತಲೆ ಎತ್ತುತ್ತಿರುವ ಪಾಕಿಸ್ತಾನ ಮೂಲದ ಸಂಘಟನೆ ಬಗ್ಗೆ ತೀವ್ರ ನಿಗಾ ವಹಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡ ಇಕ್ಬಾಲ್ ಅಹ್ಮದ್ ಮಾತನಾಡಿ, ರಿಯಾಜ್ ಅಹ್ಮದ್ ಗೋಹಲ್ ಶಾಹಿ ಗುಂಪು (ಎಂಎಫ್ಐ) ಪಾಕಿಸ್ತಾನದಲ್ಲಿ ಜನ್ಮತಳೆದಿರುವ ಸಂಘಟನೆಯಾಗಿದೆ. ಇದರ ಸ್ಥಾಪಕ ರಿಯಾಜ್ ಅಹ್ಮದ್ ಗೋಹರ್ ಶಾಹಿರನ್ನು ಭಾರತದ ಎಲ್ಲ ಖ್ಯಾತ ಉಲಮಾಗಳು ಇಸ್ಲಾಮ್ ಧರ್ಮದಿಂದ ಹೊರಗಿಟ್ಟಿದ್ದು, ಈ ಸಂಘಟನೆಯ ನಂಬಿಕೆಗಳು ಇಸ್ಲಾಮಿಕ್ ತತ್ವಗಳಿಗೆ ವಿರುದ್ಧವಾಗಿವೆ. ಅಮಾಯಕ ಜನರನ್ನು ಈ ಸಂಟನೆ ತಪ್ಪು ದಾರಿಗೆಳೆಯುತ್ತಿದೆ. ಭಾರತೀಯ ಮುಸ್ಲಿಮರಿಗೆ ಇಂತಹ ಪಾಕಿಸ್ತಾನ ಮೂಲದ ಸಂಘಟನೆಗಳ ಅಗತ್ಯವಿಲ್ಲ. ಇವು ಸಮುದಾಯದ ಶಾಂತಿ, ಏಕತೆ ಮತ್ತು ಸಾಮರಸ್ಯಕ್ಕೆ ಅಪಾಯ ಉಂಟು ಮಾಡುವ ಆತಂಕ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂಘಟನೆಯ ಸದಸ್ಯರಿಗೆ ಇಸ್ಲಾಂ ಅಥವಾ ಮುಸ್ಲಿಂ ಸಮುದಾಯದೊಂದಿಗೆ ಯಾವುದೇ ಧಾರ್ಮಿಕ ಸಂಬಂಧ ಇಲ್ಲ. ಅವರ ಹೆಸರುಗಳು ಮುಸ್ಲಿಂ ಹೆಸರಿನಂತೆ ಕಂಡರೂ ಅವರ ನಂಬಿಕೆಗಳು ಮತ್ತು ಆಚರಣೆಗಳು ಸಂಪೂರ್ಣವಾಗಿ ಧರ್ಮದಿಂದ ಹೊರಗೆ ಇವೆ. ಹಾಗಾಗಿ ನಗರದ ಮುಸ್ಲಿಂ ಸಮುದಾಯವು ಅವರನ್ನು ಗುರುತಿಸುವುದಿಲ್ಲ, ಬೆಂಬಲಿಸುವುದಿಲ್ಲ. ಆ ಸಂಟನೆ ಸದಸ್ಯರು ಅವರು ಯಾವುದೇ ಅಕ್ರಮ ಅಥವಾ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ, ಅದರ ಜವಾಬ್ದಾರಿ ಸಮುದಾಯದ ಮೇಲೆ ಬಾರದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೌಲಾನಾ ಜಿಯಾ ಉರ್ ರೆಹಮಾನ್, ನಸ್ರುಲ್ಲಾ, ಅಬೂಬಕರ್, ಬಿಲಾಲ್, ಅಕ್ರಂ ಉಲ್ಲಾ ಖಾನ್, ಅಹಮದ್, ಜಿಯಾ ಉಲ್ಲಾಖಾನ್, ಬಜರ್, ಬಕಾಶ್, ಇಮ್ರಾನ್ ಪಾಷಾ, ನಯಾಜ್ ಅಹ್ಮದ್ ಸೇರಿದಂತೆ ಮುಸ್ಲಿಂ ಸಮುದಾಯದ ನೂರಾರು ಮಂದಿ ಇದ್ದರು.
ದೇಶೀಯ ಮತ್ತು ಅಂತಾರಾಷ್ಟ್ರೀಯ ಸಂಪರ್ಕಗಳನ್ನು ಹೊಂದಿರುವ ಎಂಎಫ್ಐ ನಂತಹ ಸಂಘಟನೆಗಳ ಬಗ್ಗೆ ಸೂಕ್ತ ತನಿಖೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು. ಈ ಮೂಲಕ ನಗರದ ಶಾಂತಿ, ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಮುಸ್ಲಿಮ್ ಸಮುದಾಯ ಈ ಪಾಕಿಸ್ತಾನ ಮೂಲದ ಸಂಘಟನೆ ಮತ್ತು ಅದರ ಏಜೆಂಟ್ಗಳನ್ನು ಸಂಪೂರ್ಣವಾಗಿ ನಿರಾಕರಿಸುತ್ತದೆ. ಈ ಸಂಘಟನೆಗೆ ನಮ್ಮಿಂದ ಯಾವುದೇ ಸಹಕಾರ ಇರುವುದಿಲ್ಲ. ಕಾನೂನು ಮತ್ತು ಸಾಮರಸ್ಯವನ್ನು ಕಾಪಾಡಲು ತಕ್ಷಣವೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. > ಜಾಹಿದ್ ಖಾನ್ ಶಿರಾನಿ, ನೂರಾನಿ ಮಸೀದಿ ಅಧ್ಯಕ್ಷ
ಗೋಹಲ್ ಶಾಹಿ ಅನುಯಾಯಿ ಇಶ್ರತ್!: ಪಾಕಿಸ್ತಾನ ಮೂಲದ ರಿಯಾಜ್ ಅಹ್ಮದ್ ಗೋಹಲ್ ಶಾಹಿ ಗುಂಪಿನ (ಎಂಎಫ್ಐ) ಸಂಟನೆ ಸ್ಥಾಪಕ ಶಾಹಿ ತಾನೂ ಕಲ್ಕಿ ಅವತಾರದ ಸೂಫಿ ಅಂತ ಹೇಳುತ್ತಿದ್ದು "ಸರ್ವಧರ್ಮ' ಪ್ರೀತಿಸಬೇಕೆಂಬ ಆತನನ್ನು ಮೂಲಭೂತವಾದಿ ಮುಸ್ಲಿಮರು ಪಾಕಿಸ್ತಾನದಿಂದಲೇ ಓಡಿಸಿದ್ದರು ಎನ್ನಲಾಗಿದೆ. ಲಂಡನ್ನಲ್ಲಿ ವಾಸವಿದ್ದ ಗೋಹಲ್ ಶಾಹಿ 6&7 ತಿಂಗಳ ಹಿಂದೆಯೇ ಸಾವನ್ನಪ್ಪಿದ್ದು ಆತನ ಸಂಟನೆ ತುಮಕೂರಿನಲ್ಲಿ ಕಾರ್ಯಾಚರಣೆ ಮಾಡುತ್ತಿಲ್ಲ. ಬದಲಾಗಿ ಆತ ನೀಡುತ್ತಿದ್ದ ಪ್ರವಚನಗಳು, ಬೋಧನೆಗಳನ್ನು "ಇನ್ಸ್ಟ್ರಾಗ್ರಾಮ್'ನಲ್ಲಿ ಕೇಳಿ ಆಕರ್ಷಿತರಾಗಿದ್ದ ತುಮಕೂರಿನ ಇಶ್ರತ್ ಅವರ ಅನುಯಾಯಿಯಾಗಿ ಬದಲಾಗಿದ್ದಾರೆ. ಅಲ್ಲದೆ, ಎಂಎ್ಐ ತತ್ವಗಳನ್ನು ಅನುಸರಿಸುವುದರ ಜತೆಗೆ ನೆರೆ ಹೊರೆಯವರಲ್ಲೂ ಅದರೆಡೆಗೆ ಆಸಕ್ತಿ ಹುಟ್ಟುವಂತೆ ಪ್ರೇರೇಪಿಸಿರುವುದು ಮುಸ್ಲಿಮ್ ಧಾರ್ಮಿಕ ಮುಖಂಡರಲ್ಲಿ ಇಷ್ಟೆಲ್ಲಾ ಕಳವಳಕ್ಕೆ ಕಾರಣವಾಗಿದೆ. ಎರಡೂ ಕಡೆಯವರನ್ನು ಕರೆಸಿ ಈ ಬಗ್ಗೆ ಆತಂಕಗೊಳ್ಳುವ ಅಗತ್ಯವಿಲ್ಲ. ಜನರಲ್ಲಿ ಗೊಂದಲ ಉಂಟು ಮಾಡಿ ಶಾಂತಿ ಕದಡದಂತೆ ತಿಳಿಸಿರುವ ಪೊಲೀಸರು, ಪಾಕ್ ಸಂಟನೆ ತುಮಕೂರಲ್ಲಿ ತಲೆಎತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.