ಭೂಪಟದಿಂದ ಮರೆಯಾಗಲಿದೆ ಪಾಕಿಸ್ತಾನ

HLY TIRANGA YATRE
Published on

ಹಳಿಯಾಳ: ಇತ್ತೀಚೆಗೆ ಪಾಕ್ ನಡುವೆ ನಡೆದ ಯುದ್ಧ ಒಂದು ಟ್ರೖೆಲರ್ ಮಾತ್ರ ಆಗಿದೆ. ಇನ್ಮುಂದೆ ಭಾರತದ ಮೇಲೆ ಪಾಕಿಸ್ತಾನ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದೆ ಆದರೆ, ಭೂಪಟದಲ್ಲಿಯೇ ಅದು ಮರೆಯಾಗುವಂತೆ ಭಾರತೀಯ ಸೈನ್ಯ ತಕ್ಕ ಪಾಠ ಕಲಿಸಲಿದೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಹಾಗೂ ಮಾಜಿ ಶಾಸಕ ಸುನೀಲ ಹೆಗಡೆ ಎಚ್ಚರಿಕೆ ನೀಡಿದರು.

ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದಿಂದ ಹಳಿಯಾಳದಲ್ಲಿ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಅವರು ಮಾತನಾಡಿದರು. ಅಮಾಯಕ ಪ್ರವಾಸಿಗರನ್ನು ಧರ್ಮ ಕೇಳಿ ಕೊಂದ ಉಗ್ರರಿಗೆ ದೇಶದ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ. ಈ ಮೂಲಕ ಪ್ರಪಂಚಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಆಪರೇಷನ್ ಸಿಂಧೂರ ಕಾರ್ಯಾಚರಣೆ ನಂತರ ದೇಶದ ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಈ ತಿರಂಗಾ ಯಾತ್ರೆ ಆಯೋಜಿಸಲಾಗಿದೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಲ್. ಘೊಟ್ನೇಕರ ಮಾತನಾಡಿ, ಭಾರತ ದೇಶ ಸೌಮ್ಯ ಮತ್ತು ಪ್ರೀತಿಯ ದೇಶವಾಗಿದೆ. ನಾವು ಎಲ್ಲರನ್ನೂ ಗೌರವಿಸಿ, ಪ್ರೀತಿಸುತ್ತೇವೆ. ಆದರೆ, ನಮ್ಮ ದೇಶಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ ಎಂಬ ಸಂದೇಶವನ್ನು ಈಗಾಗಲೇ ಸಾರಿದ್ದೇವೆ ಎಂದರು. ದೇಶದ ಆಚೆಗಿನ, ಗಡಿಯಲ್ಲಿನ ಶತ್ರುಗಳಿಗಿಂತ ದೇಶದ ಒಳಗಿನ, ಆಂತರಿಕ ದೇಶದ್ರೋಹಿಗಳನ್ನು ಪತ್ತೆ ಹಚ್ಚಿ ದೇಶದಿಂದ ಹೊರಹಾಕಬೇಕು ಎಂದು ಆಗ್ರಹಿಸಿದರು.

ಪಟ್ಟಣದ ಶ್ರೀ ಮಹಾಗಣಪತಿ ದೇವಸ್ಥಾನದಿಂದ ಆರಂಭಗೊಂಡ ತಿರಂಗಾಯಾತ್ರೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶಿವಾಜಿ ವೃತ್ತದಲ್ಲಿ ಸಮಾರೋಪಗೊಂಡಿತು. ಮಾಜಿ ಸೈನಿಕರಾದ ವಿಠ್ಠಲ ಜುಂಜವಾಡಕರ, ಆರ್​ಎಸ್​ಎಸ್ ಪ್ರಮುಖ ಅರ್ಜುನ ನಾಯಕ, ಪ್ರಮುಖರಾದ ವಿಠ್ಠಲ ಸಿದ್ದಣ್ಣವರ, ಸಂತೋಷ ಘಟಕಾಂಬಳೆ, ಶಿವಾಜಿ ನರಸಾನಿ, ಸುರೇಶ ಪಟ್ಟೇಕರ, ಪೂಜಾ ಧೂಳಿ, ಸಂಗೀತಾ ಜಾಧವ, ರೂಪಾ ಗಿರಿ, ಶಾಂತಾ ಹಿರೇಕರ, ರಾಜೇಶ್ವರಿ ಹಿರೇಮಠ, ಸಂಗೀತಾ ಜಾವಳೆಕರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net