

ಹುಬ್ಬಳ್ಳಿ: ಪಾಕಿಸ್ತಾನದಿಂದ ಡಿಎಂಜಿ ಕರೆ ಮಾಡಿ ಕದನ ವಿರಾಮ ತಿಳಿಸಿದರು. ನಂತರವೂ ಉಲ್ಲಂಘನೆ ಮುಂದುವರಿದಿದೆ. ಪಾಕಿಸ್ತಾನದಲ್ಲಿ ಮಿಲಿಟರಿ ಚುನಾಯಿತ ಸರ್ಕಾರದ್ದೇ ಮಾತು ನಡೆಯುವುದಿಲ್ಲ. ಪಾಕಿಸ್ತಾನ ಭಯೋತ್ಪಾದನೆ ಪೋಷಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಯೋಧರಿಗೆ ಮುಕ್ತ ಸ್ವಾತಂತ್ರೃವನ್ನು ಮೊದಲ ಬಾರಿಗೆ ನೀಡಲಾಗಿದೆ. ದೇಶದಲ್ಲಿ ಕಳೆದ 40 ವರ್ಷದಿಂದ ಭಯೋತ್ಪಾದನೆ ನಡೆದುಕೊಂಡು ಬಂದಿದೆ. ಪಹಲ್ಗಾಮ್‌ಗಿಂತಲೂ ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದನೆ ಚಟುವಟಿಕೆಗಳು ನಡೆದಿವೆ. ಇದಕ್ಕೆ ಪ್ರತೀಕಾರ ನೀಡಲಾಗಿದೆ.
ಪಾಕಿಸ್ತಾನ ಮಾಧ್ಯಮಗಳ ವರದಿ ಪ್ರಕಾರ ಭಾರತಕ್ಕೆ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಕುಟುಂಬಗಳು ಹತವಾಗಿವೆ. ಲಾಂಚಿಂಗ್ ಪ್ಯಾಡ್, ಅಡಗು ತಾಣ ಧ್ವಂಸಗೊಳಿಸಲು ಮಿಲಿಟರಿಗೆ ಸಾಧ್ಯವಾಗಿದೆ. ಯುದ್ಧ ವಿರಾಮದ ಘೋಷಣೆಗಿಂತ ಮುನ್ನ ನಮ್ಮ ಯೋಧರು ಅತ್ಯಂತ ಕಠಿಣ ನಿಲುವು ತೆಗೆದುಕೊಂಡಿದ್ದಾರೆ. ಭಯೋತ್ಪಾದನೆಯನ್ನು ಯುದ್ಧವೆಂದು ಪರಿಗಣಿಸುತ್ತೇವೆ ಎನ್ನುವ ನಿಲುವು ಕೈಗೊಂಡಿದ್ದಾರೆ. ಇನ್ಮುಂದೆ ಭಯೋತ್ಪಾದನೆಯಾದರೆ ಅದನ್ನು ಯುದ್ಧವೆಂದು ಪರಿಗಣಿಸಲಾಗುತ್ತದೆ. ಪಾಕಿಸ್ತಾನ ಇನ್ನು ಮುಂದಾದರೂ ಬುದ್ದಿ ಕಲಿಯಬೇಕು. ನಾವು ಭಾರತೀಯರು ಶಾಂತಿ ಪ್ರಿಯರು. ಆದರೆ, ನಮ್ಮ ಮೇಲೆ ಬಂದರೆ ಬಿಡುವುದಿಲ್ಲ ಎನ್ನುವುದನ್ನು ಈಗಾಗಲೇ ಪಾಕಿಸ್ತಾನಕ್ಕೆ ಸ್ಪಷ್ಟಪಡಿಸಿದ್ದೇವೆ ಎಂದರು.
ಇಂಡಿ ನಾಯಕರ ಸಂತಸ: ಇಂಡಿ ಒಕ್ಕೂಟದವರು ಯಾಕೆ ಖುಷಿ ಪಟ್ಟರು? ಏನು ಟ್ವೀಟ್ ಮಾಡಿದರು? ಅದರ ಬಗ್ಗೆ ನಾನು ಹೇಳುವುದಿಲ್ಲ. ಭಾರತಕ್ಕೆ ಅದರದ್ದೇ ಆದ ಶಕ್ತಿ ಇದೆ. ಈ ಮೊದಲು ಇದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಭಯೋತ್ಪಾದನೆ ನಡೆದರೂ ಸೌಮ್ಯವಾಗಿ ನಡೆದುಕೊಳ್ಳುತ್ತಿದ್ದೆವು. ಈ ಬಾರಿ ಮೊದಲ ದಿನವೇ 9ಕ್ಕೂ ಹೆಚ್ಚಿನ ಲಾಂಚಿಂಗ್ ಪ್ಯಾಡ್ ಮೇಲೆ ನಮ್ಮವರು ದಾಳಿ ಮಾಡಿದ್ದಾರೆ. ಭಯೋತ್ಪಾದಕರ ಅಡಗು ತಾಣಗಳನ್ನು ನಾಶಗೊಳಿಸಲಾಗಿದೆ. ಸಂತಸ, ಟೀಕೆ ಮಾಡುವವರ ಬಗ್ಗೆ ಹೇಳುವುದಿಲ್ಲ. ನರೇಂದ್ರ ಮೋದಿ ಬಂದ ನಂತರವೇ ದೇಶದಲ್ಲಿ ನಡೆಯುವ ಭಯೋತ್ಪಾದನೆ ಚುಟುವಟಿಕೆ ನಿಂತು ಬಾರ್ಡರ್‌ಗೆ ಸೀಮಿತವಾಗಿದೆ. ಭಾರತ ಸರ್ಕಾರ, ಮಿಲಿಟರಿಗೆ ಅದರದ್ದೇ ಆದ ತಂತ್ರಗಳು ಇರುತ್ತವೆ. ಮುಂದಿನ ದಿನಗಳಲ್ಲಿ ಇದಕ್ಕೆ ಸಂಬಂಧಪಟ್ಟ ಎಲ್ಲ ವಿಷಯಗಳನ್ನು ವಿದೇಶಾಂಗ ವಕ್ತಾರರು ತಿಳಿಸುತ್ತಾರೆ ಎಂದರು.
ಟ್ರಂಪ್ ಮಧ್ಯಸ್ಥಿಕೆ: ಪಾಕಿಸ್ತಾನದ ಡಿಜಿಎಂ ನೇರವಾಗಿ ಭಾರತಕ್ಕೆ ಮಾತನಾಡಿದ್ದಾರೆ ಎನ್ನುವ ವರದಿ ಬಂದಿದೆ. ಮುಂದಿನ ವಿಷಯ ಸಂಬಂಧ ಪಟ್ಟವರು ತಿಳಿಸುತ್ತಾರೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ವಿದೇಶಾಂಗ ಮಂತ್ರಿಗಳು ಈ ಬಗ್ಗೆ ಮಾಹಿತಿ ಕೊಡುತ್ತಾರೆ ಎಂದು ಸಚಿವರು ತಿಳಿಸಿದರು.