

ಆನೇಕಲ್: ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಭಾರತಕ್ಕೆ ಅಕ್ರಮವಾಗಿ ಬಂದು ನೆಲೆಸಿರುವ ಬಂಧಿತ ನಾಲ್ವರು ಪಾಕ್ ಪ್ರಜೆಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ನಡುವೆ ಬಂಧಿತ ಪಾಕ್ ಪ್ರಜೆಗಳ ಸಂಪರ್ಕದಲ್ಲಿರುವ ಮತ್ತಷ್ಟು ಮಂದಿ ಮುಂಬೈ, ದೆಹಲಿಯಲ್ಲಿ ನೆಲೆಸಿರುವ ಸುಳಿವಿನ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ಪೊಲೀಸ್ ತಂಡಗಳು ಅಲ್ಲಿಗೆ ತೆರಳಿವೆ. ಒಂದೆರಡು ದಿನದಲ್ಲಿ ಎಲ್ಲರನ್ನೂ ಬಂಧಿಸಿ ಕರೆತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜಿಗಣಿ ಠಾಣೆಗೆ ಮಂಗಳವಾರ ಆಗಮಿಸಿದ ಲಾ ಆ್ಯಂಡ್ ಆರ್ಡರ್ ಎಡಿಜಿಪಿ ಆರ್.ಹಿತೇಂದ್ರ ಹಾಗೂ ಕೇಂದ್ರ ವಲಯ ಐಜಿ ಲಾಬುರಾವ್, ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿ.ಕೆ.ಬಾಬಾ ಹಾಗೂ ಅಡಿಷನಲ್ ಎಸ್ಪಿ ನಾಗರಾಜ್ ಸಮ್ಮುಖದಲ್ಲಿ ಸಭೆ ನಡೆಸಿದರು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳ ಬಂಧನ ಹಾಗೂ ಎರಡು ದಿನದಲ್ಲಿ ನಡೆದಿರುವ ತನಿಖೆ ಮಾಹಿತಿ ಪಡೆದಿದ್ದಾರೆ.
ತಡರಾತ್ರಿವರೆಗೆ ವಿಚಾರಣೆ: ಜಿಗಣಿ ಪೊಲೀಸರ ವಶದಲ್ಲಿರುವ ರಶೀದ್ ಅಲಿ ಸಿದ್ಧಿಕಿ ಹಾಗೂ ಆತನ ಪತ್ನಿ ಆಯೇಷಾ ಳನ್ನು ಜಿಗಣಿ ಠಾಣೆಯಲ್ಲಿ ವಿಚಾರಣೆ ಮಾಡಲಾಗಿದೆ. ಸೋಮವಾರ ತಡರಾತ್ರಿಯವರೆಗೆ ಇಬ್ಬರನ್ನೂ ಐಬಿ ಮತ್ತು ಎನ್‌ಐಎ ಅಧಿಕಾರಿಗಳ ತಂಡ ವಿಚಾರಣೆ ಮಾಡಿವೆ. ಆರೋಪಿಗಳ ಮೂಲ ಹಾಗೂ ಜಿಗಣಿಯಲ್ಲಿ ಬಂದು ನೆಲೆಸಿರುವ ಮಾಹಿತಿ ಕಲೆಹಾಕಲಾಗಿದೆ ಎಂದು ತಿಳಿದುಬಂದಿದೆ.
ದಾಖಲೆಗಳೆಲ್ಲ ನಕಲಿ
ರಶೀದ್ ಅಲಿ ಸಿದ್ಧಿಕಿ ಮತ್ತು ಆತನ ಕುಟುಂಬ ದೆಹಲಿಯ ಪರ್ವೇಜ್ ಮೂಲಕ ನಕಲಿ ಆಧಾರ್, ಪಾನ್ ಕಾರ್ಡ್, ಪಾಸ್‌ಪೋರ್ಟ್ ದಾಖಲೆಗಳನ್ನು ಸೃಷ್ಟಿಸಿಕೊಂಡಿರುವುದು ತನಿಖೆ ವೇಳೆ ಬಯಲಾಗಿದೆ. ನಂತರ 2018ರಲ್ಲಿ ಭಾರತಕ್ಕೆ ಬಂದಿದ್ದ ಸಿದ್ಧಿಕಿ ಬೆಂಗಳೂರಿಗೆ ಬಂದು ಬಳಿಕ ಜಿಗಣಿಯ ರಾಜಾಪುರದ ಅಪ್ನಾ ಆಂಗನ್ ಬಡಾವಣೆಯಲ್ಲಿ ಮನೆ ಬಾಡಿಗೆಗೆ ಪಡೆದು ವಾಸವಿದ್ದ, ಮನೆಯಲ್ಲಿ ಈತನ ಪತ್ನಿ, ಅತ್ತೆ, ಮಾವ ವಾಸವಿದ್ದರು.
ಪಾಕ್ ನೆಟ್‌ವರ್ಕ್‌ನಲ್ಲಿ ಬಂಧಿತರು?
ಬಾಂಗ್ಲಾ ದಂಗೆಯಲ್ಲಿ ಅಲ್ಲಿನ ಕೇಂದ್ರ ಕಾರಾಗೃಹ ಧ್ವಂಸ ಆಗಿತ್ತು, ಆಗ ಉಗ್ರರು ಸೇರಿ ಕುಖ್ಯಾತ ಕೈದಿಗಳು ಪರಾರಿಯಾಗಿದ್ದರು. ಅವರ ಜತೆ ಬಂಧಿತ ಪಾಕ್ ಪ್ರಜೆಗಳ ಲಿಂಕ್ ಇರಬಹುದು ಎಂಬ ಅನುಮಾನದ ಮೇಲೆ ಫೋಟೋಗಳನ್ನು ತೋರಿಸಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನದ ಉಗ್ರ ಸಂಘಟನೆಗಳ ಜತೆಗೆ ಸಂಪರ್ಕ ಇರಬಹುದೇ ಎನ್ನುವ ನಿಟ್ಟಿನಲ್ಲಿ ಈತ ಬಳಸುತ್ತಿದ್ದ ಲ್ಯಾಪ್ ಟಾಪ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಭಾರತಕ್ಕೆ ಅಕ್ರಮವಾಗಿ ನುಸುಳಿದ್ದು ಹೇಗೆ ? ನಕಲಿ ಆಧಾರ್, ಪಾಸ್‌ಪೋರ್ಟ್ ದಾಖಲೆಗಳನ್ನು ಯಾರಿಂದ ಪಡೆಯಲಾಗಿತ್ತು? ನೆರವು ನೀಡಿದವರು ಯಾರು ಎನ್ನುವ ನಿಟ್ಟಿನಲ್ಲಿ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಧರ್ಮಗುರು ಮೂಲಕ ಪ್ರಚಾರ ಮಾಡುವ ಬಗ್ಗೆ ಬಂಧಿತ ಹೇಳಿಕೆ ನೀಡಿದ್ದು, ಪಾಕಿಸ್ತಾನದಲ್ಲಿ ಈತನ ಜತೆ ಎಷ್ಟು ಮಂದಿ ಇದ್ದಾರೆ ಎಂಬ ಮಾಹಿತಿಯನ್ನೂ ಕಲೆ ಹಾಕಲಾಗಿದೆ.
ಮಹಿಳಾ ಸಾಂತ್ವನ ಕೇಂದ್ರಕ್ಕೆ ಶ್‌ಟಿ
ಸೋಮವಾರ ರಾತ್ರಿಯವರೆಗೆ ವಿಚಾರಣೆ ನಡೆಸಿದ ಬಳಿಕ ಆರೋಪಿಯ ಪತ್ನಿ ಆಯೇಷಾಳನ್ನು ಮಹಿಳಾ ಪೊಲೀಸ್ ಸಿಬ್ಬಂದಿ ಬೆಂಗಳೂರಿನ ಡೈರಿ ಸರ್ಕಲ್ ಬಳಿ ಇರುವ ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಿಟ್ಟಿದ್ದು, ತನಿಖೆ ಮುಂದುವರಿದಿದೆ.
ಬಂಧಿತರು ಕರಾಚಿಯವರು!
ಬಂಧಿತರು ಕರಾಚಿಯವರು ಎನ್ನುವ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಇಂಜಿನ್ ಆಯಿಲ್ ಹಾಗೂ ಬಿರಿಯಾನಿ ವ್ಯಾಪಾರ ಮಾಡಿಕೊಂಡಿದ್ದರು. 2014ರಲ್ಲಿ ಭಾರತಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿ ಗೊತ್ತಾಗಿದೆ. ಅ.9ರವರೆಗೆ ಪೊಲೀಸ್ ಕಸ್ಟಡಿಗೆ ಪಡೆದಿದ್ದೇವೆ. ಪಾಸ್‌ಪೋರ್ಟ್ ಹಾಗೂ ಪಾನ್‌ಕಾರ್ಡ್‌ಗೆ ಸಂಬಂಧಪಟ್ಟಂತೆ ಮಾಹಿತಿ ಪಡೆಯಬೇಕಾಗಿದೆ. ಮನೆಯಲ್ಲಿ ಲ್ಯಾಪ್‌ಟಾಪ್ ಸೇರಿ ಹಲವು ಎಲೆಕ್ಟ್ರಾನಿಕ್ ವಸ್ತುಗಳು ಸಿಕ್ಕಿದ್ದು, ಎ್ಎಸ್‌ಎಲ್ ವರದಿಗೆ ಕಳುಹಿಸಿದ್ದೇವೆ ಎಂದು ಎಡಿಜಿಪಿ ಹಿತೇಂದ್ರ ತಿಳಿಸಿದರು. ಆರೋಪಿಗಳ ಬಂಧನಕ್ಕೆ ಮೂಲ ಸಿಕ್ಕಿದ್ದು ಚೆನ್ನೈನಲ್ಲಿ. ಆರೋಪಿ ಕಡೆಯವರು ಚೆನ್ನೈನಲ್ಲಿ ಬಂಧನ ಆಗಿದ್ದರು. ಅಲ್ತ್ಾ ಎಂಬಾತನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಆ ಮೂಲದ ಮಾಹಿತಿ ಪ್ರಕಾರ ಮಾಹಿತಿ ವಿನಿಮಯ ಆಗಿರುವುದು ಗೊತ್ತಾಗಿತ್ತು. ಅದಾದ ಬಳಿಕ ಜಿಗಣಿ ಪೊಲೀಸರು ರಾಜಾಪುರದಲ್ಲಿ ಬಂಧನ ಮಾಡಿದ್ದಾರೆ. ಒಟ್ಟು ನಾಲ್ವರು ಬಂಧಿತರಾಗಿದ್ದಾರೆ ಎಂದರು.
ಮಾಧ್ಯಮದವರಿಗೂ ನಿರ್ಬಂಧ
ಪಾಕ್ ಪ್ರಜೆಗಳ ಬಂಧನ ಪ್ರಕರಣದಲ್ಲಿ ಪೊಲೀಸರು ಯಾವುದೇ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಬಾರದು ಎಂದು ಹಿರಿಯ ಅಧಿಕಾರಿಗಳು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಜಿಗಣಿಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಯುವಾಗಲೂ ಮಾಧ್ಯಮದವರಿಗೆ ಠಾಣೆ ಬಳಿ ನಿರ್ಬಂಧ ಹೇರಲಾಗಿತ್ತು. ಬಳಿಕ ಎಡಿಜಿಪಿ ಆಗಮನದ ನಂತರ ಸುದ್ದಿಗೋಷ್ಠಿಗೆ ಆಹ್ವಾನ ಮಾಡಲಾಗಿತ್ತು.
ಎರಡನೇ ದಿನವೂ ಡ್ರಿಲ್
ರಶೀದ್ ಅಲಿ ಹಾಗೂ ಆತನ ಪತ್ನಿಯನ್ನು ಸೋಮವಾರ ತನಿಖೆ ಮಾಡಿ ಹೋಗಿದ್ದ ಎನ್‌ಐಎ ಅಧಿಕಾರಿಗಳು ಮಂಗಳವಾರ ಸಂಜೆ ಮತ್ತೆ ಆಗಮಿಸಿದ್ದು, ಮನೆಯಲ್ಲಿ ದೊರೆತ ಲ್ಯಾಪ್‌ಟಾಪ್ ಹಾಗೂ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರತ್ಯೇಕ ಸಭೆ ಮಾಡಿದ ಎಸ್‌ಪಿ
ಜಿಗಣಿ ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ್ ಪ್ರಕರಣದ ತನಿಖೆ ನಡೆಸುತ್ತಿದ್ದು, ಎಡಿಜಿಪಿ ಜಿಗಣಿ ಠಾಣೆಗೆ ಬಂದು ಹೋದ ನಂತರ ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿ.ಕೆ.ಬಾಬಾ ಆನೇಕಲ್ ಉಪವಿಭಾಗದ ಪೊಲೀಸ್ ಅಧಿಕಾರಿಗಳ ಜತೆ ಪ್ರತ್ಯೇಕ ಸಭೆ ಮಾಡಿ ತನಿಖೆ ಯಾವ ರೀತಿ ಮಾಡಬೇಕೆಂದು ಸೂಚನೆಗಳನ್ನು ನೀಡಿದ್ದಾರೆ.