

ಶಿವಮೊಗ್ಗ: ಭಯೋತ್ಪಾದಕರ ದಾಳಿಯಲ್ಲಿ 26 ಮಂದಿ ಮೃತಪಟ್ಟ ಬಳಿಕ ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಕ್ರಮ ಕೈಗೊಂಡಿತ್ತು. ಈಗ ನೇರವಾಗಿ ತಕ್ಕ ಉತ್ತರ ನೀಡಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಸೂಕ್ತ ಸಮಯದಲ್ಲಿ ತಕ್ಕ ಉತ್ತರ ನೀಡಲಾಗುವುದೆಂದು ಪ್ರಧಾನಿ ನರೇಂದ್ರ ಮೋದಿ ಪದೇಪದೆ ಹೇಳುತ್ತಿದ್ದರು. ಈಗ ಉತ್ತರ ನೀಡಲು ಆರಂಭಿಸಿದ್ದಾರೆ. ಇದರಲ್ಲಿ ಭಾರತೀಯ ಸೇನೆ ಯಶಸ್ವಿಯಾಗುತ್ತದೆಂಬ ನಂಬಿಕೆಯಿದೆ ಎಂದರು.
ಈ ಹಿಂದೆಯೂ ದೇಶದಲ್ಲಿ ಬಹಳಷ್ಟು ಬಾರಿ ಉಗ್ರರಿಂದ ದಾಳಿ ನಡೆದಿತ್ತು. ಈ ಬಾರಿ ಮೊದಲ ಏಟಿನಲ್ಲಿ ಉಗ್ರರ 9 ಅಡಗುತಾಣಗಳ ಮೇಲೆ ದಾಳಿ ನಡೆದಿದೆ. ಪ್ರತಿ ಬಾರಿಯೂ ಶಾಂತಿ ಮಂತ್ರ ಪಠಿಸಲು ಸಾಧ್ಯವಿಲ್ಲ. ಭಾರತದ ಸಿಂದೂರ ಎನಿಸಿಕೊಂಡಿರುವ ಪಾಕ್ ಆಕ್ರಮಿತ ಕಾಶ್ಮೀರವವನ್ನು ವಶಪಡಿಸಿಕೊಳ್ಳಲು ಇದು ಸೂಕ್ತ ಸಮಯ ಎಂದು ಅಭಿಪ್ರಾಯಪಟ್ಟರು.