

ಮಡಿಕೇರಿ:
ಶಾಲೆಯಲ್ಲಿ ಕೊಡುವ ಶಿಕ್ಷಣ ಯಶಸ್ವಿ ಆಗಬೇಕಾದರೆ ಮಕ್ಕಳಲ್ಲಿ ಕಲ್ಪನಾ ಶಕ್ತಿ ಹೆಚ್ಚಿಸುವಂಥ ಪಠ್ಯಗಳು ಇರುವುದು ಅಗತ್ಯ ಎಂದು ಸಾಹಿತಿ ಅರವಿಂದ ಚೊಕ್ಕಾಡಿ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಮತ್ತು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇಲ್ಲಿನ ಜೂನಿಯರ್ ಕಾಲೇಜು ಆವರಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದರು.
ಈ ಮೊದಲೆಲ್ಲಾ ಪಠ್ಯರಚನಾ ಸಮಿತಿಗಳು ಇಲ್ಲದಿದ್ದಂಥ ಸಮಯದಲ್ಲಿ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಮಕ್ಕಳನ್ನು ತಲುಪುವ ರೀತಿಯ ಪಠ್ಯ ರಚಿಸುವುದು ಸಾಧ್ಯವಿತ್ತು. ಸುಲಭದ ಪದಗಳ ಬಳಕೆ ಮೂಲಕ ವಿದ್ಯಾರ್ಥಿಗಳಿಗೆ ಪಾಠಗಳನ್ನು ಅರ್ಥ ಮಾಡಿಸುವುದು ಕಠಿಣ ಆಗುತ್ತಿರಲಿಲ್ಲ. ಆದರೆ ಇಂದಿನ ಪಠ್ಯಗಳಲ್ಲಿ ಮಕ್ಕಳಿಗೆ ಅರ್ಥವೇ ಆಗದಂತಹ ಕನ್ನಡ ಪದಗಳನ್ನು ತುರುಕುವ ಮೂಲಕ ಶೈಕ್ಷಣಿಕ ಪ್ರಕ್ರಿಯೆಗಳನ್ನು ಜಟಿಲ ಮಾಡಲಾಗುತ್ತಿದೆ. ಅಂಕಗಳಿಸುವುದಕ್ಕಷ್ಟೇ ಅಭ್ಯಾಸ ಮಾಡಿಸುವುದು ಇಂದಿನ ಶಿಕ್ಷಕರ ಹಣೆಬರಹ ಆದಂತಾಗಿದೆ. ಆದರೆ ಅಂದಿನ ದಿನಗಳಲ್ಲೇ ವಿಶ್ವಾಸದ ಮೂಲಕ ಶಿಕ್ಷಣ ರೂಪಿಸಬಹುದು ಎಂಬುದನ್ನು ಪಂಜೆ ಅವರು ಕಟ್ಟಿಕೊಟ್ಟಿದ್ದರು.
ದಲಿತರ ಬಗ್ಗೆ ಮೊದಲು ಕವನ ಬರೆದಿದ್ದು ಪಂಜೆ ಮಂಗೇಶರಾಯರು. ದಲಿತರ ಮಕ್ಕಳಿಗೆ ಶುಲ್ಕ ತೆಗೆದುಕೊಳ್ಳದೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದ್ದರು. ಶಾಲೆಗಳಲ್ಲಿ ದಲಿತ ಮಕ್ಕಳ ಜತೆ ಇತರ ಮಕ್ಕಳಿಗೆ ಸಹಭೋಜನವನ್ನೂ ಮಾಡಿಸುತ್ತಿದ್ದರು. ಕನ್ನಡದ ಮೊದಲ ಸಣ್ಣ ಕತೆಗಾರರೂ ಆದ ಪಂಜೆ ಅವರು ತುಳುನಾಡಿನ ವೀರರಾದ ಕೋಟಿ-ಚೆನ್ನಯ್ಯ ಅವರ ಸಾಹಸಗಾತೆಗಳಿಗೆ ಜನಪದೀಯ ಹಿನ್ನೆಲೆಯಲ್ಲಿ ಐತಿಹಾಸಿಕ ರೂಪ ಕೊಡುವ ಕೆಲಸ ಮಾಡಿದ್ದರು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ಜಿಲ್ಲೆ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ, ಕೊಡಗು ಒಂದು ಪುಟ್ಟ ಭಾರತ. ಇಂಥ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದ ಪಂಜೆ ಮಂಗೇಶ ರಾಯರು 63 ವರ್ಷ ಮಾತ್ರ ಬದುಕಿದ್ದರು. ಅವರು ಇನ್ನಷ್ಟು ವರ್ಷ ಇದ್ದಿದ್ದರೆ ಸಾಹಿತ್ಯಕ್ಕೆ ಮತ್ತಷ್ಟು ಕೊಡುಗೆ ಸಿಗುತ್ತಿತ್ತು. ಕುವೆಂಪು ಅವರ ಮಕ್ಕಳ ಸಾಹಿತ್ಯ ರಚನೆಗೆ ಪಂಜೆ ಅವರೇ ಪ್ರೇರಣೆ. ಪಂಜೆ ಅವರ ಸಾಹಿತ್ಯ ಭಾಷಾಂತರ ಆಗುತ್ತಿದೆ ಎಂದರು.
ಸಾಹಿತಿ ಜಲಜಾ ಶೇಖರ್ ಅವರ 'ಅಗ್ನಿಕುಂಡ' ಕೃತಿ ಬಿಡುಗಡೆ ಮಾಡಿದ ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಮಲ್ಲೇಶ್ ಗೌಡ ಮಾತನಾಡಿ, ಪಂಜೆ ಅವರ ಸಾಹಿತ್ಯದ ಒಟ್ಟು ಆಶಯವೇ ಮಕ್ಕಳು. ಸಾಹಿತ್ಯ ಮೂಲಕ ಮಕ್ಕಳನ್ನು ತಿದ್ದಬಹುದು ಎನ್ನುವುದನ್ನು ಶಿಕ್ಷಕರಾಗಿ ಅರಿತಿದ್ದರು. ಅವರ ಕವನಗಳು ಸಾಹಿತ್ಯದ ದಿಕ್ಸೂಚಿ ರೀತಿ ಇತ್ತು. ಜೋಗದ ಸಿರಿ ಕಟ್ಟಿ ಕೊಟ್ಟ ನಿಸಾರ್ ಅಹಮ್ಮದ್ ಅವರ ರೀತಿಯಲ್ಲಿ ಕೊಡಗಿನ ಸಿರಿ ಕಟ್ಟಿ ಕೊಟ್ಟವರು ಪಂಜೆ ಮಂಗೇಶರಾಯರು. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಕೃತಿಗಳು ಹೊರಬರುತ್ತಿರುವ ಭಾಷೆಗಳ ಪಟ್ಟಿಯಲ್ಲಿ ಕನ್ನಡ ಮೊದಲ ಸ್ಥಾನದಲ್ಲಿ ಇದ್ದರೂ ಮಹತ್ವದ ಕೃತಿಗಳನ್ನು ಓದುವ ವ್ಯವಧಾನ ಇಂದು ಯಾರಲ್ಲೂ ಇಲ್ಲವಾಗಿದೆ. ಮಕ್ಕಳು ಕೂಡ ಪಠ್ಯದಲ್ಲಿ ಇರುವ ಕೃತಿಗಳನ್ನೇ ಓದುವುದು ಕಷ್ಟವಾಗಿದೆ. ಮಕ್ಕಳು ಹೆಚ್ಚು ಓದುವುದರಿಂದ ಬದುಕು ಗಟ್ಟಿಗೊಳ್ಳುತ್ತದೆ. ವರ್ಷಕ್ಕೆ ಕನಿಷ್ಠ ಒಂದು ಕೃತಿ ಓದಬೇಕು. ಕಥಾ ಪ್ರಕಾರ ಜೀವನಕ್ಕೆ ಅತ್ಯಂತ ಅಪ್ಯಾಯಮಾನವಾಗಿದ್ದು. ಬದುಕನ್ನು ಜೀವಂತ ಆಗಿಟ್ಟಿರುವುದೇ ಕತೆಗಳು ಎಂದು ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಜಿಲ್ಲಾ ವಾರ್ತಾಧಿಕಾರಿ ಚಿನ್ನಸ್ವಾಮಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ವೆಂಕಟೇಶ್ವರ ಪ್ರಸನ್ನ, ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷೆ ಕಡ್ಲೇರ ತುಳಸಿಮೋಹನ್, ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ವಿಜೇತ್, ವಿರಾಜಪೇಟೆ ತಾಲೂಕು ಕಸಾಪ ಅಧ್ಯಕ್ಷ ರಾಜೇಶ್ ಪದ್ಮನಾಭ, ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್. ನಾಗೇಶ್, ಕಸಾಪ ಪ್ರಧಾನ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್, ಖಜಾಂಚಿ ಎಸ್.ಎಸ್. ಸಂಪತ್ ಕುಮಾರ್, ಗೌರವ ಕಾರ್ಯದರ್ಶಿ ಮುನೀರ್ ಅಹಮ್ಮದ್ ಮತ್ತಿತರರು ಇದ್ದರು.