

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಇತ್ತೀಚೆಗೆ ನದಿ ತುಂಬಿ ಹರಿದಾಗ ಅಪಾಯದ ಸನ್ನಿವೇಶ ಸೃಷ್ಟಿಸಿದ್ದ ಪಜಿರಡ್ಕ ಕಿಂಡಿ ಅಣೆಕಟ್ಟಿನ ಹಲಗೆಗಳನ್ನು ತೆರವುಗೊಳಿಸಿ ನೀರಿನ ಸರಾಗ ಹರಿವಿಗೆ ಅನುವು ಮಾಡಿಕೊಡಲಾಗಿದೆ.
ಮೇ ಕೊನೆಯ ವಾರದಲ್ಲಿ ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದ ಇಲ್ಲಿ ನದಿ ತುಂಬಿ ಹರಿದಿತ್ತು. ಕಿಂಡಿ ಅಣೆಕಟ್ಟಿನ ಹಲಗೆ ತೆರವುಗೊಳ್ಳದ ಕಾರಣ ನದಿಯ ಎತ್ತರ ಪ್ರದೇಶಗಳಾದ ಕುಡೆಂಚಿ, ಕಾಯರ್ತೋಡಿ, ಹುಣಿಪಾಜೆ, ಆನಂಗಳ್ಳಿ ಮೊದಲಾದ ಭಾಗಗಳ ತೋಟದ ನದಿ ನೀರು ಸರಾಗವಾಗಿ ಹರಿಯದೆ ಸಾಮಾನ್ಯ ಪ್ರವಾಹ ಸ್ಥಿತಿಯಿಂದ ಜಲಾವೃತಗೊಂಡಿದ್ದವು. ಇದರಿಂದ ನದಿ ತೀರದಲ್ಲಿ ವಾಸ್ತವ್ಯ ಇರುವ ಮಂದಿ ಭಯಪಡುವಂತಾಗಿತ್ತು. ಹಲಗೆ ತೆರವುಗೊಳ್ಳದೆ ತ್ಯಾಜ್ಯ, ಮರಮಟ್ಟು ತುಂಬಿದ್ದು ಇದಕ್ಕೆ ಕಾರಣವಾಗಿತ್ತು. ತೋಟಗಳಿಗೆ ನುಗ್ಗಿದ ನೀರು ಅಡಕೆ ಗಿಡಗಳ ಹೊಂಡದಲ್ಲಿ ಸಂಗ್ರಹಗೊಂಡು ಕೆಲವೆಡೆ ಅಡಕೆ ಗಿಡಗಳು ನಾಶವಾಗಿವೆ.
ನಾಲ್ಕು ವರ್ಷಗಳ ಹಿಂದೆ ಕಲ್ಮಂಜ ಗ್ರಾಮದ ಪಜಿರಡ್ಕ ಎಂಬಲ್ಲಿ ಮೃತ್ಯುಂಜಯ- ನೇತ್ರಾವತಿ ನದಿಗಳ ಸಂಗಮ ಸ್ಥಳದ ಸಮೀಪ ಪಜಿರಡ್ಕ ಕಿಂಡಿ ಅಣೆಕಟ್ಟು ಸಹಿತ ಸೇತುವೆ ನಿರ್ಮಾಣಗೊಂಡಿದೆ. ಈ ಕಿಂಡಿ ಅಣೆಕಟ್ಟಿಗೆ ಬೇಸಿಗೆಯಲ್ಲಿ ಹಲಗೆ ಇಳಿಸಿ ನೀರು ಸಂಗ್ರಹಿಸಲಾಗುತ್ತದೆ. ಇದು ಇಲ್ಲಿರುವ ದೇವರ ಮೀನು, ಸುತ್ತಲ ಪರಿಸರದ ಅಂತರ್ಜಲ ವೃದ್ಧಿಗೆ ಸಹಕಾರಿ. ಕಿಂಡಿ ಅಣೆಕಟ್ಟಿನ ಸೇತುವೆ ಕಲ್ಮಂಜ ಗ್ರಾಮದ ಪರಾರಿ, ಆನಂಗಳ್ಳಿ, ಮುಂಡಾಜೆ, ಸೋಮಂತಡ್ಕ, ಕನ್ಯಾಡಿ, ಸ್ನಾನಘಟ್ಟ, ಧರ್ಮಸ್ಥಳ ಮೊದಲಾದ ಕಡೆಗಳಿಗೆ ಹತ್ತಿರದ ಸಂಪರ್ಕವಾಗಿದೆ.
ಕೆಲವೊಂದು ಕಿಂಡಿ ಅಣೆಕಟ್ಟುಗಳಲ್ಲಿ ತುಂಬಿದ ತ್ಯಾಜ್ಯ ತೆರವುಗೊಂಡಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ನದಿ ತುಂಬಿ ಹರಿದಾಗ ತ್ಯಾಜ್ಯ, ಮರಮಟ್ಟು ಸಂಗ್ರಹಗೊಳ್ಳುವ ಸಾಧ್ಯತೆ ಇದ್ದು, ಇದರ ಬಗ್ಗೆ ಮುಂಜಾಗ್ರತೆ ವಹಿಸುವುದು ಅಗತ್ಯ.
ಈ ಬಾರಿ ಬೇಗನೆ ಸುರಿದ ಬೇಸಿಗೆ ಮಳೆ, ಮೇ ತಿಂಗಳಲ್ಲಿ ಸುರಿದ ವಿಪರೀತ ಮಳೆಯಿಂದ ಕಿಂಡಿ ಅಣೆಕಟ್ಟುಗಳ ಹಲಗೆ ತೆರವುಗೊಳಿಸಲು ಅವಕಾಶ ಸಿಗದ ಕಾರಣ ಅಲ್ಲಲ್ಲಿ ಇಂತಹ ಕೃತಕ ನೆರೆ ಅವಾಂತರ ಸೃಷ್ಟಿಯಾಗಿದೆ. ಕಳೆದ ಒಂದು ವಾರದಿಂದ ಮಳೆ ಪ್ರಮಾಣ ಇಳಿಕೆಯಾಗಿ ನದಿ, ಹೊಳೆಗಳು ಯಥಾಸ್ಥಿತಿಯನ್ನು ತಲುಪಿವೆ. ತಾಲೂಕಿನ ಹೆಚ್ಚಿನ ಎಲ್ಲ ಕಿಂಡಿ ಅಣೆಕಟ್ಟುಗಳ ಹಲಗೆ ತೆರವುಗೊಳಿಸಲಾಗಿದೆ. ರಾಕೇಶ್, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್