

ಮೈಸೂರು: ನಗರದ ಬೋಗಾದಿ ರಸ್ತೆಯಲ್ಲಿ ಹಾಕಿದ್ದ ಅವೈಜ್ಞಾನಿಕ ರಸ್ತೆ ಉಬ್ಬಿಗೆ ಮೂವರು ಮೃತಪಟ್ಟ ಪ್ರಕರಣದ ಬಳಿಕ ಮೈಸೂರು ನಗರಪಾಲಿಕೆ ಎಚ್ಚೆತ್ತುಕೊಂಡಿದೆ. ನಗರದ ವಿವಿಧ ರಸ್ತೆಯಲ್ಲಿರುವ ಉಬ್ಬುಗಳಿಗೆ ಬಣ್ಣ ಬಳಿಯಲು ಮುಂದಾಗಿದೆ.
ಬೋಗಾದಿ ರಸ್ತೆಯಲ್ಲಿ ಮಾನಸಗಂಗೋತ್ರಿಯಿಂದ ಆಯಿಷ್ ಜಂಕ್ಷನ್‌ವರೆಗೆ ರಾತ್ರೋರಾತ್ರಿ ಉಬ್ಬು ಹಾಕಿದ್ದರಿಂದ 30ಕ್ಕೂ ಹೆಚ್ಚು ಅಪಘಾತ ಸಂಭವಿಸಿ, ಮೂವರು ಸವಾರರು ಮೃತಪಟ್ಟಿದ್ದರು. ಈ ಘಟನೆ ಬಳಿಕ ಅವೈಜ್ಞಾನಿಕ ರಸ್ತೆ ಉಬ್ಬು ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. ಉಬ್ಬು ಅಳವಡಿಕೆ ಮಾಡಿದ ಪಾಲಿಕೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದರು.
ಇದೀಗ ಎಚ್ಚೆತ್ತುಕೊಂಡಿರುವ ಪಾಲಿಕೆ, ತನ್ನ ವ್ಯಾಪ್ತಿಯೊಳಗಿರುವ ರಸ್ತೆಯಲ್ಲಿರುವ ಉಬ್ಬುಗಳಿಗೆ ಬಣ್ಣ ಬಳಿಯಲು ಕ್ರಮ ಕೈಗೊಂಡಿದೆ. ವಲಯ ಕಚೇರಿವಾರು ರಸ್ತೆಗಳಲ್ಲಿ ಕಾರ್ಯ ಆರಂಭಿಸಲಾಗಿದೆ.
ಬೋಗಾದಿ ರಸ್ತೆ, ಕುಕ್ಕರಹಳ್ಳಿ ಕೆರೆ ಬಳಿ ರಸ್ತೆ ಗೇಟ್ ಸಮೀಪ ಇದ್ದ ಎರಡು ಉಬ್ಬುಗಳಿಗೆ ಬಿಳಿ ಬಣ್ಣ ಬಳಿಯಲಾಯಿತು. ಅಲ್ಲದೆ, ವಲಯ ಕಚೇರಿ-3ರ ವ್ಯಾಪ್ತಿಗೆ ಸರಸ್ವತಿಪುರಂ, ಕುವೆಂಪುನಗರ ಸೇರಿದಂತೆ ಇನ್ನಿತರ ಬಡಾವಣೆಗಳ ರಸ್ತೆಯಲ್ಲಿದ್ದ ಉಬ್ಬುಗಳಿಗೂ ಬಣ್ಣ ಲೇಪನ ಲಭಿಸಿತು. ಹೆಚ್ಚು ವಾಹನ ಸಂಚರಿಸುವ ರಸ್ತೆಗಳಲ್ಲಿ ಆದ್ಯತೆ ಮೇರೆಗೆ ಉಬ್ಬುಗಳಿಗೆ ಬಣ್ಣ ಬಳಿಯಲು ಕ್ರಮ ತೆಗೆದುಕೊಂಡಿದೆ.