ಚಿತ್ರಕಲೆ ಸಂಸ್ಕೃತಿಯ ಪ್ರತೀಕ

19 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಚಿತ್ರಕಲೆ ನಮ್ಮ ಸಂಸ್ಕೃತಿಯ ಪ್ರತೀಕ. ಅದು ಸರ್ವಕಾಲಕ್ಕೂ ಸಲ್ಲುವ ಕಲೆಯಾಗಿದೆ ಎಂದು ಹಿರಿಯ ಚಿತ್ರಕಲಾವಿದ ಡಿ.ಎಂ. ಬಡಿಗೇರ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿರುವ ಚಿತ್ರಕಲಾವಿದ ಮಹಾದೇವ ಜಗತಾಪ ಇವರ ಮೂರು ದಿನಗಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಮಹಾದೇವ ಜಗತಾಪ ಶ್ರೇಷ್ಠ ಕಲಾವಿದರು. ಅವರು ರಚಿಸಿದ ವೈವಿಧ್ಯಮಯ ಚಿತ್ರಗಳು ನಾಡಿನಾದ್ಯಂತ ಪ್ರದರ್ಶನಗೊಂಡಿದ್ದು, ಭವಿಷ್ಯದಲ್ಲಿ ಬೃಹತ್ ನಗರಗಳಲ್ಲೂ ಪ್ರದರ್ಶನವಾಗುವಂತಾಗಬೇಕು. ಸಂಘವು ಲಲಿತಕಲೆ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುತ್ತಿರುವುದು ಅಭಿನಂದನೀಯ ಎಂದರು.
ಚಿತ್ರಕಲಾವಿದ ಮಹಾದೇವ ಜಗತಾಪ ಮಾತನಾಡಿ, ನಾನೊಬ್ಬ ಚಿತ್ರಕಲಾವಿದನಾಗಿ ರೂಪಗೊಳ್ಳಲು ಅನೇಕ ರಸಋಷಿಗಳ, ಕವಿಗಳ, ಪ್ರಭಾವವಿದೆ. ನನ್ನ ಸಾಧನೆಗೆ ಅನೇಕ ಸಂಘ ಸಂಸ್ಥೆಗಳು ನೀಡಿದ ಪ್ರೋತ್ಸಾಹ ಅನನ್ಯವಾದದ್ದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಜೀವನ ಪ್ರೀತಿಗಾಗಿ ಕಲೆ ಅತ್ಯಗತ್ಯ. ಚಿತ್ರಕಲೆ ಲಲಿತಕಲೆಗಳ ಒಂದು ಅವಿಭಾಜ್ಯ ಅಂಗ. ಆದಿಮಾನವನು ತಾನು ವಾಸಿಸುತ್ತಿದ್ದ ಗುಹೆಗಳಲ್ಲಿ ವಿಶ್ರಾಂತಿ ಸಿಕ್ಕಾಗಲೆಲ್ಲ ಗೋಡೆಗಳ ಮೇಲೆ ಬೇಟೆಯಾಡುವ ಚಿತ್ರಗಳನ್ನು ಬಿಡಿಸಿದ್ದು, ಇದು ಜಗತ್ತಿನ ಮೊಟ್ಟ ಮೊದಲ ಕಲೆಯಾಗಿದೆ. ಬಾಲ್ಯದಿಂದಲೇ ಮಕ್ಕಳಿಗೆ ಚಿತ್ರಬಿಡಿಸುವ ಹವ್ಯಾಸ ಅಗತ್ಯ. ಚಿತ್ರಕಲೆ ಮಕ್ಕಳ ಮನಸ್ಸನ್ನು ಅರಳಿಸಿ ಭಾವನೆಗಳನ್ನು ತಟ್ಟುವಂತಿರಬೇಕು. ಅಂದಾಗ ಮಾತ್ರ ಚಿತ್ರಕಲೆ ಮಕ್ಕಳ ವ್ಯಕ್ತಿತ್ವದ ವಿಕಾಸಕ್ಕೆ ಪೂರಕವಾಗಲು ಸಾಧ್ಯ. ಇಂದು ಚಿತ್ರಕಲಾವಿದರ ಚಿತ್ರಪ್ರದರ್ಶನಕ್ಕೆ ಸಿಗಬೇಕಾದಷ್ಟು ಮುಕ್ತ ಅವಕಾಶಗಳು ಸಿಗದ ಕಾರಣಕ್ಕೆ ಚಿತ್ರಕಲೆ ನೇಪಥ್ಯಕ್ಕೆ ಸರಿದಂತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಚಂದ್ರಕಾAತ ಬೆಲ್ಲದ, ಬಸವಪ್ರಭು ಹೊಸಕೇರಿ, ಡಾ. ಪಾರ್ವತಿ ಹಾಲಭಾವಿ, ಸುರೇಶ ಹಾಲಭಾವಿ, ಮಹಾಂತೇಶ ನರೇಗಲ್, ಎಂ.ಟಿ. ದಳವಾಯಿ, ದೇಸಾಯಿಗೌಡ ಪಾಟೀಲ, ಎಂ.ಬಿ. ಹೆಗ್ಗಾರ, ಇತರರು ಇದ್ದರು.
ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net