ವಿದ್ಯಾರ್ಥಿಗಳಲ್ಲಿ ಕುತೂಹಲ ಹೆಚ್ಚಿಸಲು ಚಿತ್ರಕಲೆ ಸಹಕಾರಿ: ಡಾ.ಆರ್.ಎಸ್.ಉಮಾಕಾಂತ್

6
Published on

ಮೈಸೂರು: ದೇಶ, ವಿದೇಶಗಳ ವಿಜ್ಞಾನಿಗಳ ಚಿತ್ರಕಲೆ ವೈವಿಧ್ಯತೆಯಿಂದ ಕೂಡಿದ್ದು ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮತ್ತು ಕುತೂಹಲವನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ರೇಷ್ಮೆ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಆರ್.ಎಸ್.ಉಮಾಕಾಂತ್ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಮೈಸೂರು ಸೈನ್ಸ್ ಫೌಂಡೇಷನ್ಸ್‌ನಿಂದ ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಭಾನುವಾರ ಆಯೋಜಿಸಿದ್ದ ಯು.ಜಿ.ಮೋಹನ್‌ಕುಮಾರ್ ಆರಾಧ್ಯ ರಚಿಸಿರುವ ವಿಶ್ವವಿಖ್ಯಾತ ವಿಜ್ಞಾನಿಗಳ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಿತ್ರಕಲೆ ಬಹುಬೇಗ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. ಆದ್ದರಿಂದ ವಿಜ್ಞಾನಿಗಳ ಸಾಧನೆಯನ್ನು ಚಿತ್ರಗಳ ಮೂಲಕ ಕಟ್ಟಿಕೊಡುವುದರಿಂದ ವಿಜ್ಞಾನದ ಪ್ರತಿಯೊಂದು ಅಂಶವೂ ವಿದ್ಯಾರ್ಥಿಗಳಿಗೆ ಅರ್ಥವಾಗುತ್ತದೆ. ವಿಜ್ಞಾನಿಗಳ ಸಾಧನೆಯನ್ನು ನೋಡಿ ತಾವೂ ವಿಜ್ಞಾನಿಯಾಗುವ ಆಸೆ ಚಿಗುರೊಡೆಯುವಂತೆ ಮಾಡುತ್ತದೆ. ಈ ಬೆಳವಣಿಗೆ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡುತ್ತವೆ ಎಂದರು.

ಮೈಸೂರು ಸೈನ್ಸ್ ಫೌಂಡೇಷನ್‌ನ ಅಧ್ಯಕ್ಷ ಸಿ.ಕೃಷ್ಣೇಗೌಡ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಹಣ ಸಂಪಾದಿಸುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಆದರೆ ಯು.ಜಿ.ಮೋಹನ್‌ಕುಮಾರ್ ಆರಾಧ್ಯ ಅವರು ಕಲೆಯ ಮಾರ್ಗವನ್ನು ಅನುಸರಿಸುವ ಮುಖಾಂತರ ಬದುಕನ್ನು ಸಾರ್ಥಕ ಪಡಿಸಿಕೊಂಡಿದ್ದಾರೆ. ತಾಳ್ಮೆ, ಶ್ರದ್ಧೆ ಮತ್ತು ಶ್ರಮದಿಂದ ಚಿತ್ರಕಲೆಯ ಕಾಯಕವನ್ನು ಮುಂದುವರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರು ಸೈನ್ಸ್ ಫೌಂಡೇಷನ್ ಕೋಶಾಧ್ಯಕ್ಷ ಎಂ.ಜಿ.ಎನ್.ಪ್ರಸಾದ್ ಮಾತನಾಡಿ, ಸಾವಿರಾರು ಚಿತ್ರಗಳನ್ನು ಪೆನ್ನಿನ ಮೂಲಕವೇ ಚಿತ್ರಿಸಿರುವುದು ಒಂದು ಶ್ರೇಷ್ಠ ಸಾಧನೆಯಾಗಿದೆ. ವಿಜ್ಞಾನದ ಬಗ್ಗೆಗಿನ ಚಿತ್ರಕಲೆಯೂ ವಿದ್ಯಾರ್ಥಿಗಳು ಮತ್ತು ಜನಸಮುದಾಯಗಳಿಗೆ ಉಪಯುಕ್ತ ಮಾಹಿತಿ ನೀಡುತ್ತದೆ ಎಂದು ತಿಳಿಸಿದರು.

ಮೈಸೂರು ಸೈನ್ಸ್ ಫೌಂಡೇಷನ್ ಸದಸ್ಯ ಪುರಂದರ್ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನಿಗಳ ಸಾಧನೆಯ ಬಗ್ಗೆ ಪುಸ್ತಕದಲ್ಲಿ ಓದಿ ತಿಳಿದುಕೊಂಡಿರುತ್ತಾರೆ. ಆದರೆ ಎಲ್ಲ ವಿಜ್ಞಾನಿಗಳ ಭಾವಚಿತ್ರವನ್ನು ಅವರು ನೋಡಿರುವುದಿಲ್ಲ. ಆದ್ದರಿಂದ ವಿಜ್ಞಾನಿಗಳ ಸಾಧನೆಯನ್ನು ಭಾವಚಿತ್ರದ ಮೂಲಕ ತಿಳಿಸುವ ಪ್ರಯತ್ನಗಳು ಯತೇಚ್ಛವಾಗಿ ನಡೆದಾಗ ವಿದ್ಯಾರ್ಥಿಗಳು ವಿಜ್ಞಾನದ ಬಗೆಗಿನ ತಮ್ಮ ಕನಸುಗಳನ್ನು ಹೊರ ಹಾಕಲು ಸಾಧ್ಯವಾಗುತ್ತದೆ. ಪ್ರತಿಯೊಂದು ಮಗುವಿನಲ್ಲಿಯೂ ವಿಜ್ಞಾನದ ಬಗ್ಗೆ ಅರಿವು ಉಂಟಾಗುತ್ತದೆ ಎಂದು ವಿವರಿಸಿದರು.

ಮೈಸೂರು ಸೈನ್ಸ್ ಫೌಂಡೇಷನ್‌ನ ಕಾರ್ಯದರ್ಶಿ ಜಿ.ಬಿ.ಸಂತೋಷ್‌ಕುಮಾರ್, ಚಿತ್ರ ಕಲಾವಿದ ಯು.ಜಿ. ಮೋಹನ್‌ಕುಮಾರ್ ಆರಾಧ್ಯ ಇತರರಿದ್ದರು.

ವಿಶ್ವವಿಖ್ಯಾತ ವಿಜ್ಞಾನಿಗಳ 76 ಚಿತ್ರಗಳನ್ನು ಪ್ರದರ್ಶಿಸಲಾಯಿತು. ಪ್ರತಿಯೊಂದು ವಿಜ್ಞಾನಿಗಳ ಚಿತ್ರವನ್ನೂ ಯಾವುದೇ ಬಣ್ಣವನ್ನು ಬಳಸದೆ ಪೆನ್ನಿನಿಂದಲೇ ಬಿಡಿಸಿರುವುದು ಚಿತ್ರಗಳ ವಿಶೇಷತೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net