ಮಾನಸಿಕ ಬೆಳವಣಿಗೆಗೆ ಚಿತ್ರಕಲೆ ಸಹಕಾರಿ

1 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳಿಗೆ ಮೊದಲು ಇಷ್ಟವಾಗುವುದು ನಿಸರ್ಗ ಚಿತ್ರಣ. ಬೆಟ್ಟ, ನದಿ, ಸೂರ್ಯ, ಗಿಡ ನಂತರ ಚಿಕ್ಕದಾದ ಗುಡಿಸಲು ಪ್ರತಿ ಮಗುವಿನ ಚಿತ್ರ ಬಿಡಿಸುವಿಕೆಯಲ್ಲಿ ಎದ್ದು ಕಾಣುತ್ತದೆ. ಹೀಗಾಗಿಯೇ ಮಗು ನಿಸರ್ಗದ ಕೂಸು ಎನ್ನಲಾಗುತ್ತದ ಎಂದು ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಪಾಟೀಲ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಮಕ್ಕಳ ಮನೆ ದತ್ತಿ ನಿಮಿತ್ತ ಗುರುವಾರ ಮಕ್ಕಳಿಗೆ ಏರ್ಪಡಿಸಿದ್ದ ಚಿತ್ರಕಲೆ ಹಾಗೂ ಶುದ್ಧಬರಹ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಮಕ್ಕಳ ಭಾವನೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಅವರು ಚಿತ್ರ ಬಿಡಿಸುವುದಕ್ಕೆ ಅವಕಾಶ ಕಲ್ಪಿಸಬೇಕು. ಇದರಿಂದ ಮಗು ಏನನ್ನು ಬಯಸುತ್ತದೆ ಮತ್ತು ಏನನ್ನು ಇಷ್ಟಪಡುತ್ತದೆ ಎಂದು ತಿಳಿಯಬಹುದು. ಮಗುವಿನ ಮಾನಸಿಕ ಬೆಳವಣಿಗೆಗೆ ಚಿತ್ರಕಲೆ ಸಹಕಾರಿ ಎಂದರು.
ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶುದ್ಧಬರಹ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 1ನೇ ತರಗತಿಯಿಂದ 10ನೇ ತರಗತಿವರೆಗೆ ಚಿತ್ರಕಲೆಯಲ್ಲಿ ಪ್ರತೀ ತರಗತಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನದೊಂದಿಗೆ ಎಲ್ಲ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಸ್ಪರ್ಧೆ ನಿರ್ಣಾಯಕರಾಗಿ ಬಿ. ಮಾರುತಿ, ಎಸ್.ಕೆ. ಪತ್ತಾರ, ಬಿ.ಎಚ್. ಕುರಿಯವರ ಆಗಮಿಸಿದ್ದರು. ಶಂಕರ ಹಲಗತ್ತಿ, ಶಂಕರ ಕುಂಬಿ, ಕೆ.ಎಚ್. ನಾಯಕ, ಸತೀಶ ತುರಮರಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net