

ಚಾಮರಾಜನಗರ: ಪ್ರಕೃತಿಯ ಅಳಿವು-ಉಳಿವು, ಮಾನವನ ದುರಾಸೆಯಿಂದ ಪರಿಸರದ ಮೇಲಾಗುತ್ತಿರುವ ಹಾನಿಯನ್ನು ವಿದ್ಯಾರ್ಥಿಗಳು ಚಿತ್ರಿಸಿದರು. ಪರಿಸರದ ಸಂರಕ್ಷಣೆ ಹಾಗೂ ಸಾಮಾಜಿಕ ಕಾಳಜಿಯ ಸಂದೇಶ ರವಾನೆಯಾಯಿತು.
ನಗರದ ಜೆಎಸ್‌ಎಸ್ ಬಾಲಕರ ಪ್ರೌಢಶಾಲೆಯಲ್ಲಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ, ತೇಜಸ್ ಸೇವಾ ಸಂಸ್ಥೆ, ಪವನ್ ಸೇವಾ ಟ್ರಸ್ಟ್ ಹಾಗೂ ಐಸೆಟ್ ಸಂಸ್ಥೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು 80 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಪರಿಸರದ ಮೇಲಿನ ಜವಬ್ದಾರಿಯನ್ನು ಚಿತ್ರಗಳ ಮೂಲಕ ಅನಾವರಣಗೊಳಿಸಿದರು. ಉತ್ತಮ ಪರಿಸರದಿಂದಾಗುವ ಅನುಕೂಲ, ಪರಿಸರ ಮಾಲಿನ್ಯದಿಂದಾಗುವ ದುಷ್ಪರಿಣಾಮಗಳನ್ನು ಕಲೆಯ ಮೂಲಕ ಅಭಿವ್ಯಕ್ತಗೊಳಿಸಿದರು. ಸುಪ್ತವಾಗಿ ಅಡಗಿದ್ದ ಪ್ರತಿಭೆಯನ್ನು ಹೊರ ಚಾಚಿದ ಮೂವರು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ವಿಜೇತರಾದರು.
ಬಹುಮಾನ ವಿತರಣಾ ಕಾರ್ಯಕ್ರಮದ ಸಾನಿಧ್ಯವಹಿಸಿ ಶ್ರೀ ಸಿದ್ಧಮಲ್ಲೇಶ್ವರ ವಿರಕ್ತ ಮಠದ ಪೀಠಾಧಿಪತಿ ಶ್ರೀ ಚನ್ನಬಸವ ಸ್ವಾಮೀಜಿ ಮಾತನಾಡಿ, ಪ್ರಸ್ತುತ ವೈಜ್ಞಾನಿಕ ಯುಗದಲ್ಲಿ ಪರಿಸರದ ಬಗ್ಗೆ ಕಾಳಜಿಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಜಿ, ಸಾಮಾಜಿಕ ಕಳಕಳಿಯನ್ನು ಉಂಟು ಮಾಡುವುದರಿಂದ ಉತ್ತಮ ಸಮಾಜ ರೂಪಿಸಲು ಸಾಧ್ಯವಾಗುತ್ತದೆ. ಈ ಮೂಲಕ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ತರಬಹುದಾಗಿದೆ. ಯಾವುದೋ ಕಾರಣಗಳಿಗೆ ಸಾಕಷ್ಟು ಹಣವನ್ನು ವೆಚ್ಚ ಮಾಡುವ ಬದಲು, ಒಂದು ಗಿಡ ನೆಟ್ಟು ಪೋಷಿಸುವ ಕೆಲಸ ಮಾಡಬೇಕು. ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ನಗರಸಭಾ ಸದಸ್ಯೆ ಕುಮುದಾ ಕೇಶವಮೂರ್ತಿ ಮಾತನಾಡಿ, ಮನುಷ್ಯ ದಿನನಿತ್ಯ ಬಳಸುವ ಪ್ಲಾಸ್ಟಿಕ್ ಮತ್ತು ವಿಷಪೂರಿತ ರಾಸಾಯನಿಕಗಳಿಂದ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಪರಿಸರವನ್ನು ಉತ್ತಮ ರೀತಿಯಲ್ಲಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮನುಷ್ಯ ಮತ್ತು ಪ್ರಕೃತಿಯ ನಡುವೆ ಅವಿನಾಭಾವ ಸಂಬಂಧವಿದೆ, ಅದನ್ನು ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬರ ಆರೋಗ್ಯ ಉತ್ತಮವಾಗಿರಬೇಕಾದರೆ ನಮ್ಮ ಸುತ್ತಮುತ್ತಲಿನ ಪರಿಸರ ಉತ್ತಮವಾಗಿರಬೇಕು. ವಿದ್ಯಾರ್ಥಿಗಳು ಗಿಡ ನೆಟ್ಟು ಪೋಷಿಸುವ ಅಭ್ಯಾಸವನ್ನು ರೂಪಿಸಿಕೊಳ್ಳಬೇಕು ಎಂದರು.
ಬೈಯನಪುರ ಗ್ರಾ.ಪಂ ಅಧ್ಯಕ್ಷ ಆರ್.ಸತೀಶ್ ಮಾತನಾಡಿ, ಪರಿಸರ ನಮಗೆ ಎಲ್ಲವನ್ನೂ ಕೊಟ್ಟಿದೆ. ಆ ಪರಿಸರವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಸಾಲು ಮರದ ತಿಮ್ಮಕ್ಕನಿಗೆ ಯಾರು ಪ್ರೇರಣೆ ಮಾಡಲಿಲ್ಲ. ಆದರೆ ಪರಿಸರದ ಬಗ್ಗೆ ಅವರಿಗೆ ಇದ್ದ ಕಾಳಜಿ ವಿದ್ಯಾವಂತರಲ್ಲೂ ಇಲ್ಲ. ಮಕ್ಕಳು ತಮ್ಮ ಜನ್ಮ ದಿನ ಆಚರಣೆ ವೇಳೆ ಒಂದೊಂದು ಗಿಡ ನೆಟ್ಟು ಪೋಷಿಸುವ ಕೆಲಸ ಮಾಡಬೇಕು. ಪ್ರಕೃತಿ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಪ್ಲಾಸ್ಟಿಕ್ ಬಳಕೆಯಿಂದ ಸಾಕಷ್ಟು ಪ್ರಾಣಿ, ಪಕ್ಷಿಗಳಿಗೆ ಅಪಾಯ ಉಂಟಾಗುತ್ತಿದೆ ಈ ಕುರಿತು ಎಚ್ಚರ ವಹಿಸಬೇಕು ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ಬಿ.ಎಂ.ಸಿದ್ದಪ್ಪ, ಜೆಡಿಎಸ್ ಮುಖಂಡ ಆಲೂರು ಮಲ್ಲು, ಆನಂದ್ ಭಗೀರಥ, ನಾಗವಳ್ಳಿ ಗ್ರಾ.ಪಂ ಸದಸ್ಯ ಪ್ರಶಾಂತ್, ಚಿತ್ರಕಲಾವಿದ ಮಧುಸೂದನ್, ಮಂಜೇಶ್, ರವಿತೇಜ್, ಅನಿಲ್ ಕುಮಾರ್, ಲೋಕೇಶ್ ಉಪಸ್ಥಿತರಿದ್ದರು.
ವಿಜಯವಾಣಿ ಕಾರ್ಯಕ್ಕೆ ಮೆಚ್ಚುಗೆ:
ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಜೆಡಿಎಸ್ ಮುಖಂಡ ಆಲೂರು ಮಲ್ಲು ಮಾತನಾಡಿ, ಸದಾ ಕಾಲವೂ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ವಿಜಯವಾಣಿ ಪತ್ರಿಕೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಲೆ, ಸಾಹಿತ್ಯ ಮತ್ತು ಕ್ರೀಡೆಯಲ್ಲಿ ಮುಂದಿರುವ ವಿದ್ಯಾರ್ಥಿಗಳನ್ನು ಮತ್ತಷ್ಟು ಪ್ರೋತ್ಸಾಹಿಸುವಲ್ಲಿ ಪತ್ರಿಕೆಯು ಉತ್ತಮ ವೇದಿಕೆಯನ್ನು ಸೃಷ್ಟಿಸುತ್ತಿದೆ ಎಂದು ತಿಳಿಸಿದರು.
ಸ್ಥಳದಲ್ಲೇ ಚಿತ್ರ ಬರೆದ ಕಲಾವಿದ:
ಕಾರ್ಯಕ್ರಮದಲ್ಲಿ ಕೇವಲ 10 ನಿಮಿಷದಲ್ಲಿ ಜೆಎಸ್‌ಎಸ್ ಪ್ರೌಢಶಾಲೆಯ ಚಿತ್ರವನ್ನು ಬರೆಯುವ ಮೂಲಕ ಕಲಾವಿದ ಮಧುಸೂಧನ್ ಎಲ್ಲರ ಗಮನಸೆಳೆದರು. ಜೆಎಸ್‌ಎಸ್ ಪ್ರೌಢಶಾಲೆಯ ಕಟ್ಟಡ ಹಾಗೂ ಪ್ರಕೃತಿಯ ಸೌಂದರ್ಯವನ್ನು ಕ್ಷಣ ಮಾತ್ರದಲ್ಲಿ ಕುಂಚದಲ್ಲಿ ಸೆರೆ ಹಿಡಿಯುವ ಮೂಲಕ ಅತಿಥಿ ಗಣ್ಯರು ಹಾಗೂ ಮಕ್ಕಳ ಮೆಚ್ಚುಗೆ ಗಳಿಸಿದರು.
ವಿಜೇತ ವಿದ್ಯಾರ್ಥಿಗಳು:
ಸ್ಪರ್ಧೆಯಲ್ಲಿ ಸುಮಾರು 80ಕ್ಕಿಂತಲೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು, ಇದರಲ್ಲಿ ಉತ್ತಮವಾಗಿ ಚಿತ್ರ ರಚಿಸಿದ 9ನೇ ತರಗತಿ ಬಿ ವಿಭಾಗದ ವಿದ್ಯಾರ್ಥಿ ಆರ್.ಮಲ್ಲೇಶ್ ಪ್ರಥಮ ಸ್ಥಾನ ಪಡೆದುಕೊಂಡರು. ಅದೇ ತರಗತಿಯ ಎನ್.ರಾಜು ದ್ವಿತೀಯ ಸ್ಥಾನ ಹಾಗೂ 8ನೇ ತರಗತಿ ಬಿ ವಿಭಾಗದ ಎಂ.ಪ್ರಜ್ವಲ್ ನಾಯಕ್ ತೃತೀಯ ಸ್ಥಾನ ಗಳಿಸಿದರು.