

ಮಂಡ್ಯ: ವಿಶ್ವ ಪರಿಸರ ದಿನದ ಅಂಗವಾಗಿ ಕನ್ನಡದ ನಂಬರ್ ಒನ್ ದಿನಪತ್ರಿಕೆ ‘ವಿಜಯವಾಣಿ’ ಸಹಯೋಗದಲ್ಲಿ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ಅರ್ಥಪೂರ್ಣವಾಗಿ ನಡೆಯಿತು.
ಅನನ್ಯ ಹಾರ್ಟ್ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಅರಣ್ಯ ಇಲಾಖೆ, ಕರ್ನಾಟಕ ಪಬ್ಲಿಕ್ ಶಾಲೆಯ ಸಹಯೋಗದಲ್ಲಿ ಇಲ್ಲಿನ ಅರ್ಕೇಶ್ವರನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ವಿವಿಧೆಡೆಯಿಂದ ಆಗಮಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳು ಚಿತ್ರಕಲೆ ಮೂಲಕ ಪರಿಸರ ಜಾಗೃತಿ ಮೂಡಿಸಿದರು.
ಸ್ಪರ್ಧೆಗೆ ಚಾಲನೆ ನೀಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್, ಪರಿಸರ ದಿನ ಒಂದು ದಿನಕ್ಕೆ ಸೀಮಿತವಾಗಬಾರದು. ಬದಲಿಗೆ ನಿರಂತರ ಪ್ರಕ್ರಿಯೆಯಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಪರಿಸರ ಕಾಳಜಿ ಬೆಳೆಸಬೇಕು. ಮಾತ್ರವಲ್ಲದೆ ಇದು ನಮ್ಮೆಲ್ಲರ ಹೊಣೆ ಎಂದರು.
ದೇಶದಲ್ಲಿ ಪ್ರಾಕೃತಿಕ ಸಂಪತ್ತು ಹೆಚ್ಚಾಗಿದೆ. ಆದರೆ ಅದನ್ನು ಉಳಿಸಿಕೊಂಡು ಹೋಗುವಲ್ಲಿ ವಿಲರಾಗುತ್ತಿದ್ದೇವೆ. ಅಭಿವೃದ್ಧಿ ದೃಷ್ಟಿಯಿಂದ ನೋಡಿದಾಗ ಮರ ಕಟಾವು ಮಾಡುವುದು ಸರಿ. ಹಾಗೆಂದ ಮಾತ್ರಕ್ಕೆ ಪರಿಸರ ನಾಶ ಮಾಡಬಾರದು. ಒಂದು ಮರ ಕಟಾವು ಮಾಡಿದರೆ ಅದಕ್ಕೆ ಪ್ರತಿಯಾಗಿ ಹತ್ತು ಗಿಡವನ್ನು ನೆಟ್ಟು ೆಷಣೆ ಮಾಡಬೇಕು. ಇಲ್ಲದಿದ್ದರೆ ಸಮಸ್ಯೆ ಖಂಡಿತ. ಈಗಾಗಲೇ ಪ್ರಾದೇಶಿಕ ಅಸಮತೋಲನ ಎದುರಿಸುವಂತಾಗಿದೆ. ಅಂದರೆ ಜಿಲ್ಲೆಯಲ್ಲಿಯೇ ಒಂದು ಕಡೆ ಮಳೆ ಬರುತ್ತಿದ್ದರೆ, ಇನ್ನೊಂದು ಕಡೆ ಬರುವುದಿಲ್ಲ. ಇದಕ್ಕೆ ಕಾರಣ ಮರ, ಗಿಡ ಕಡಿಮೆಯಾಗಿರುವುದು ಎಂದು ವಿವರಿಸಿದರು.
ಹಿಂದೆ ಕೋವಿಡ್ ಎದುರಾದಾಗ ಮನುಷ್ಯನಿಗೆ ಆಕ್ಸಿಜನ್ ಎಷ್ಟು ಮುಖ್ಯ ಎನ್ನುವುದು ಎಲ್ಲರಿಗೂ ಗೊತ್ತಾಯಿತು. ಆದರೆ ಕೋವಿಡ್ ಹೋದ ನಂತರ ಮತ್ತೆ ಪರಿಸರ ಉಳಿಸುವ ಕೆಲಸ ಮಾಡುತ್ತಿಲ್ಲ. ಮರ, ಗಿಡ ಎಷ್ಟು ಮುಖ್ಯ ಎನ್ನುವುದು ಗೊತ್ತಿದ್ದರೂ ತಪ್ಪು ಮಾಡುತ್ತಿದ್ದೇವೆ. ಇನ್ನಾದರೂ ಬದಲಾಗೋಣ. ಖಾಲಿ ಜಾಗದಲ್ಲಿ ಗಿಡ ನೆಟ್ಟು ಪೋಷಣೆ ಮಾಡೋಣ. ಹೊಂಗೆ ಮರ ನೆಟ್ಟು ಪೋಷಣೆ ಮಾಡಿ ಬಿಸಿಲಿನ ಕಾಲದಲ್ಲಿ ಆ ಮರದ ಕೆಳಗೆ ಕುಳಿತರೆ ಎಷ್ಟು ಖುಷಿಯಾಗುತ್ತದೆ. ಅರಣ್ಯ ಸಂಪತ್ತನ್ನು ಉಳಿಸಿಕೊಳ್ಳೋಣ. ಹೆಚ್ಚು ಗಿಡ ನೆಡೋಣ ಎಂದು ಹೇಳಿದರು.
ಪರಿಸರ ಉಳಿಸುವ ನಿಟ್ಟಿನಲ್ಲಿ ಸಂಕಲ್ಪ ಮಾಡಲಾಗಿದೆ. ಈ ನಿಟ್ಟಿನಲ್ಲಿ ಪ್ರತಿ ತಾಲೂಕಿನಲ್ಲಿ 10 ಸಾವಿರ ಗಿಡ ನೆಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ಅರಣ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಮುಂದಿನ ಜನಾಂಗಕ್ಕಾಗಿ ಪರಿಸರ ಸಂರಕ್ಷಣೆ ನಿರಂತರವಾಗಿ ನಡೆಯಬೇಕು. ಈ ವರ್ಷದ ಧ್ಯೇಯ ‘ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ’ವಾಗಿದೆ. ಪ್ಲಾಸ್ಟಿಕ್‌ನಿಂದ ಕ್ಯಾನ್ಸರ್ ರೋಗ ಹರಡುತ್ತಿದೆ. ಈ ಬಗ್ಗೆ ಹೆಚ್ಚೆಚ್ಚು ಜಾಗೃತಿ ಮೂಡಿಸಬೇಕು. ಪ್ಲಾಸ್ಟಿಕ್‌ಗೆ ಪರ್ಯಾಯ ವಸ್ತುಗಳನ್ನು ಬಳಕೆ ಮಾಡೋಣ. ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಮುಕ್ತಗೊಳಿಸುವುದರ ಜತೆಗೆ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಅರ್ಕೇಶ್ವರನಗರದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಶಿವರಾಮ ಅಧ್ಯಕ್ಷತೆ ವಹಿಸಿದ್ದರು. ಪ್ರೊಬೆಷನರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವ್ಯಶ್ರೀ, ಉಪ ಪ್ರಾಂಶುಪಾಲ ಅಸ್ಮತ್, ತಾಳಶಾಸನ ಮೋಹನ್ ಇತರರಿದ್ದರು.
ಸ್ಪರ್ಧೆ ವಿಜೇತರು ಚಿತ್ರಕಲಾ ಸ್ಪರ್ಧೆಗೆ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಪೈಕಿ ಉತ್ತಮ ಚಿತ್ರ ಬಿಡಿಸಿದ ಕೆಪಿಎಸ್ ಶಾಲೆಯ ಪಿರ್ದೋಷ್(ಪ್ರ), ತಡಗವಾದಿ ಸರ್ಕಾರಿ ಪ್ರೌಢಶಾಲೆಯ ಯಶಸ್(ದ್ವಿ) ಹಾಗೂ ಕೆಪಿಎಸ್ ಶಾಲೆಯ ಥೆರಿನ್(ತೃ) ಬಹುಮಾನ ಪಡೆದುಕೊಂಡರು. ವಿಜೇತರಿಗೆ ನಗದು, ಪ್ರಮಾಣಪತ್ರ ಹಾಗೂ ನೆನಪಿನ ಕಾಣಿಕೆ ವಿತರಿಸಲಾಯಿತು. ಅಂತೆಯೇ ಭಾಗವಹಿಸಿದ್ದ ಎಲ್ಲ ಮಕ್ಕಳಿಗೆ ಪ್ರಶಂಸೆ ಪತ್ರ ನೀಡಲಾಯಿತು.
ಪರಿಸರ ಜಾಗೃತಿ ಅಥವಾ ಸಂರಕ್ಷಣೆ ನಿರಂತರವಾಗಿ ನಡೆಯಲಿ. ನಾವು ಪರಿಸರವನ್ನು ಕಾಪಾಡಿದರೆ, ಮುಂದೆ ಅದೇ ಪರಿಸರ ನಮ್ಮನ್ನು ಕಷ್ಟದಿಂದ ಕಾಪಾಡುತ್ತದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಪರಿಸರದ ಬಗ್ಗೆ ಕಾಳಜಿ ಬೆಳೆಸಿಕೊಳ್ಳಬೇಕು. ಬಿ.ಎಸ್.ಅನುಪಮಾ ಅನನ್ಯ ಹಾರ್ಟ್ ಸಂಸ್ಥೆ ಅಧ್ಯಕ್ಷೆ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ