

ಬೇಲೂರು: ವಿದ್ಯಾರ್ಥಿಗಳಿಗೆ ಬರವಣಿಗೆ ಹಾಗೂ ಸಂವಹನ ಕೌಶಲಗಳನ್ನು ಸುಧಾರಿಸಲು ಮತ್ತು ವಿಷಯಗಳ ಬಗ್ಗೆ ಆಳವಾದ ತಿಳಿವಳಿಕೆಯನ್ನು ಬೆಳೆಸಲು ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಗಳು ಸಹಕಾರಿಯಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಹೇಳಿದರು.
ಪತ್ರಿಕಾ ದಿನಾಚರಣೆ ಅಂಗವಾಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪಟ್ಟಣದ ಬಸ್ ನಿಲ್ದಾಣ ಮುಂಭಾಗದ ಡಾ.ಅಂಬೇಡ್ಕರ್ ಭವನದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಸ್ಪರ್ಧೆಗಳು ಮಕ್ಕಳಲ್ಲಿರುವ ಆಸಕ್ತಿ ಮತ್ತು ಪ್ರತಿಭೆಗಳನ್ನು ಅನ್ವೇಷಿಸಲು ಮತ್ತು ತಮ್ಮ ವೃತ್ತಿ ಜೀವನವನ್ನು ರೂಪಿಸಲು ಸಹಾಯ ಮಾಡುತ್ತದೆ. ಅವರಲ್ಲಿರುವ ಆಲೋಚನಾ ಶಕ್ತಿಯನ್ನು ಬಲಪಡಿಸುವುದಲ್ಲದೆ, ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಲು ಹಾಗೂ ಅವರಲ್ಲಿರುವ ಬೌದ್ಧಿಕ ಮಟ್ಟವನ್ನು ಗುರುತಿಸಲು ಸಾಧ್ಯವಾಗಲಿದೆ ಎಂದರು.
ಈ ನಿಟ್ಟಿನಲ್ಲಿ ತಾಲೂಕು ಪತ್ರಕರ್ತರ ಸಂಘ ವಿದ್ಯಾರ್ಥಿಗಳಿಗಾಗಿ ಇಂತಹ ಸ್ಪರ್ಧೆ ಹಮ್ಮಿಕೊಂಡು ಮಕ್ಕಳನ್ನು ಪ್ರೋತ್ಸಾಹಿಸುತ್ತಿರುವುದು ಸ್ವಾಗತಾರ್ಹವಾಗಿದೆ. ಈ ಮೂಲಕ ವಿದ್ಯಾರ್ಥಿಗಳು ಡಾಕ್ಟರ್, ಇಂಜಿನಿಯರ್, ಸೈನಿಕನಾಗುವ ಕನಸನ್ನು ಕಾಣಬೇಕು. ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಗಳನ್ನು ಗಳಿಸಿದ ಸಂದರ್ಭದಲ್ಲಿ ಶಿಕ್ಷಣದೊಂದಿಗೆ ಮಾರ್ಗದರ್ಶನ ನೀಡಿದ ಶಿಕ್ಷಕರು ಮತ್ತು ಪಾಲಕರ ಮೇಲಿನ ಪ್ರೀತಿಯನ್ನು ಎಂದೂ ಮರೆಯಬಾರದು ಎಂದರು.
ಕಸಾಪ ಮಾಜಿ ಅಧ್ಯಕ್ಷ ರಾಜೇಗೌಡ, ಪತ್ರಕರ್ತರ ಸಂಘದ ಅಧ್ಯಕ್ಷ ರಘುನಾಥ್, ಕಾರ್ಯದರ್ಶಿ ಬಿ.ಬಿ.ಶಿವರಾಜ್, ಖಜಾಂಚಿ ಎನ್. ಅನಂತು, ಉಪಾಧ್ಯಕ್ಷ ಜಗದೀಶ್, ಮಾಜಿ ಅಧ್ಯಕ್ಷ ರಾಘವೇಂದ್ರ ಹೊಳ್ಳ, ಮಾಜಿ ಕಾರ್ಯದರ್ಶಿ ವೆಂಕಟೇಶ್, ನಿರ್ದೇಶಕ ಬಿ.ಎಲ್.ಲಕ್ಷ್ಮಣ್, ಮಲ್ಲೇಶ್, ಆರಾಧ್ಯ, ಗಣೇಶ್, ವಿಜಯಕುಮಾರ್, ರಮೇಶ್, ರವಿಹೊಳ್ಳ ಸೇರಿದಂತೆ ಇತರರಿದ್ದರು.