

ಮೈಸೂರು: ಮೈಸೂರು-ಬೋಗಾದಿ ರಸ್ತೆಯ ಹಲವೆಡೆ ರಸ್ತೆ ಉಬ್ಬು ನಿರ್ಮಿಸಿ ಅದಕ್ಕೆ ಬಣ್ಣ ಬಳಿಯದ ಕಾರಣಕ್ಕೆ ಸಂಭವಿಸಿದ ಸರಣಿ ಅಪಘಾತದಿಂದ ಎಚ್ಚೆತ್ತುಕೊಂಡಿರುವ ನಗರ ಪಾಲಿಕೆ, ನಗರದಾದ್ಯಂತ ರಸ್ತೆ ಉಬ್ಬುಗಳಿಗೆ ಬಣ್ಣ ಬಳಿಯುವ ಕಾರ್ಯ ಆರಂಭಿಸಿದೆ.
ಮೈಸೂರು ವಿವಿ ಬಳಿಯ ರಸ್ತೆ ಉಬ್ಬಿಗೆ ಬಣ್ಣ ಬಳಿಯದ ಕಾರಣ ವಾಹನ ಸವಾರರು ಅದನ್ನು ಗುರುತಿಸಲಾರದೆ ಸರಣಿ ಅಪಘಾತವಾಗಿತ್ತು. ಹತ್ತಾರು ಮಂದಿ ಗಾಯಗೊಂಡರೆ, ಮೂವರ ಪ್ರಾಣ ಕಳೆದುಕೊಂಡರು.
ಇವುಗಳನ್ನು ಗಮನಿಸಿದ ಪಾಲಿಕೆ ಆಯುಕ್ತ ಅಶಾದ್ ಉರ್ ರೆಹಮಾನ್ ಷರೀಫ್ ಅವರು ಪಾಲಿಕೆ ಅಧಿಕಾರಿಗಳ ಸಭೆ ನಡೆಸಿ ನಗರದಲ್ಲಿರುವ ರಸ್ತೆ ಡುಬ್ಬಗಳಿಗೆ ಬಣ್ಣ ಬಳಿದು ಸಂಚಾರ ನಿಯಮಾನುಸಾರ ಕ್ರಮ ವಹಿಸಲು ಅಧಿಕಾರಿಗಳಿಗೆ 25 ದಿನಗಳ ಗಡುವು ನೀಡಿದ್ದರು. ಅದರ ಅನುಸಾರವಾಗಿ ಅಧಿಕಾರಿಗಳು ಶುಕ್ರವಾರ ನಗರದಲ್ಲಿ ಬಣ್ಣ ಅಳಿಸಿ ಹೋಗಿರುವ ರಸ್ತೆ ಉಬ್ಬುಗಳಿಗೆ ಬಣ್ಣ ಬಳಿಯುವ ಕಾರ್ಯ ಆರಂಭಿಸಿದ್ದಾರೆ.
ಮೊದಲ ಆದ್ಯತೆಯಾಗಿ ನಗರದಾದ್ಯಂತ ಇರುವ ಎಲ್ಲ ಹಂಪ್ಸ್‌ಗಳಿಗೂ ಕೂಡಲೇ ಬಿಳಿ ಬಣ್ಣ ಬಳಿಯಬೇಕು. ಈ ಕೆಲಸವನ್ನು 25 ದಿನದೊಳಗೆ ಪೂರ್ಣಗೊಳಿಸಬೇಕೆಂದು ಆಯುಕ್ತರು ಗಡುವು ನೀಡಿದ್ದಾರೆ. ಈ ಸೂಚನೆಯಂತೆ ಶುಕ್ರವಾರ ಜಿಲ್ಲಾ ಪಂಚಾಯಿತಿ ಕಚೇರಿ, ಕ್ರಾಫರ್ಡ್‌ಹಾಲ್, ಕುಕ್ಕರಹಳ್ಳಿ ಕೆರೆ ಮುಂಭಾಗದ ರೈಲ್ವೆ ಜಂಕ್ಷನ್ ಬಳಿ ಸೇರಿದಂತೆ ನಗರದ ಕೆಲವು ರಸ್ತೆಗಳಲ್ಲಿ ಹಂಪ್‌ಗಳಿಗೆ ಬಣ್ಣ ಬಳಿಯಲಾಯಿತು.
ಕೇವಲ ಬಣ್ಣ ಬಳಿಯುವುದಷ್ಟೇ ಅಲ್ಲದೆ, ರಸ್ತೆ ಡುಬ್ಬವಿರುವ ಜಾಗದಲ್ಲಿ ಅದರ ಇರುವಿಕೆಯನ್ನು ಗುರುತಿಸಲು ಸಹಕಾರಿಯಾಗುವಂತೆ ರಿಫ್ಲೆಕ್ಟ್ ಸ್ಟಡ್ಸ್‌ಗಳನ್ನು ಅಳವಡಿಸುವಂತೆ ಆಯುಕ್ತರು ಸೂಚಿಸಿದ್ದಾರೆ. ಇದರಿಂದ ರಾತ್ರಿ ವೇಳೆಯಲ್ಲಿ ಈ ಸ್ಟಡ್ಸ್‌ಗಳಲ್ಲಿರುವ ಸೋಲಾರ್ ಲೈಟ್ ಬ್ಲಿಂಕ್ ಆಗುತ್ತವೆ. ಇದರಿಂದಾಗಿ ರಸ್ತೆ ಡುಬ್ಬಗಳ ಇರುವಿಕೆಯನ್ನು ವಾಹನ ಸವಾರರು ಸುಲಭವಾಗಿ ದೂರದಿಂದಲೇ ಗುರುತಿಸಿ ಎಚ್ಚರಿಕೆಯಿಂದ ತೆರಳಲು ಅನುಕೂಲವಾಗಲಿದೆ. ಅಪಾಯಗಳನ್ನು ತಡೆಯಲು ಸಹಕಾರಿ ಆಗಲಿದೆ.
ಸಂಚಾರ ನಿಯಮಾವಳಿಯಂತೆ ರಸ್ತೆಯಲ್ಲಿ ಸೂಚನಾ ಫಲಕ, ಸ್ಟಡ್ಸ್ ಅಳವಡಿಕೆ, ಬಣ್ಣ ಬಳಿಯುವುದರಿಂದ ಒಂದಷ್ಟು ಪ್ರಮಾಣದಲ್ಲಿ ಅನುಕೂಲವಾಗುತ್ತದೆ. ಇದೇ ರೀತಿ ನಗರ ವ್ಯಾಪ್ತಿಯಲ್ಲಿ ಯಾವ ರೀತಿ ವಾಹನಗಳನ್ನು ಚಾಲನೆ ಮಾಡಬೇಕು ಎಂಬುದರ ಬಗ್ಗೆ ಪೊಲೀಸ್ ಇಲಾಖೆ ವತಿಯಿಂದ ಜಾಗೃತಿ ಮೂಡಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಸದರಿ ರಸ್ತೆಯಲ್ಲಿ ಅಳವಡಿಸಿದ್ದ ಅವೈಜ್ಞಾನಿಕ ರಸ್ತೆ ಡುಬ್ಬಗಳು ಮೂವರನ್ನ್ನು ಬಲಿ ತೆಗೆದುಕೊಂಡಿತ್ತು. ಮೈಸೂರು ವಿವಿಯ ಕುವೆಂಪು ಪ್ರತಿಮೆ ಎದುರಿನ ರಸ್ತೆ ಡುಬ್ಬದ ಬಳಿ ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದ ತಾಲೂಕು ಮರಟಿ ಕ್ಯಾತನಹಳ್ಳಿ ನಿವಾಸಿ ಯಶವಂತ್(27) ಮೃತಪಟ್ಟಿದ್ದರು. ಮತ್ತೊಂದು ಪ್ರಕರಣದಲ್ಲಿ ಗಂಗೋತ್ರಿ ಬಡಾವಣೆಗೆ ತಿರುವು ಪಡೆಯುವ ಜಾಗದಲ್ಲಿನ ಡುಬ್ಬದ ಬಳಿ ಚಾಲನೆಯಲ್ಲಿ ನಿಯಂತ್ರಣ ಕಳೆದುಕೊಂಡು ಗೂಡ್ಸ್ ಆಟೋ ಮಗುಚಿ ಬಿದ್ದಿದ್ದ ಪರಿಣಾಮ ಆಟೋದಲ್ಲಿದ್ದ ತರಕಾರಿ ವ್ಯಾಪಾರಿ ಎಚ್.ಡಿ.ಕೋಟೆಯ ಕೃಷ್ಣಯ್ಯನಹುಂಡಿಯ ಕುಮಾರ್(40) ಮೃತ ಪಟ್ಟಿದ್ದರು. ಬಳಿಕ ಮಡಿಕೇರಿಯ ಶಿವನ್(24) ವಿವಿಯ ಕುವೆಂಪು ಪ್ರತಿಮೆ ಎದುರಿನ ರಸ್ತೆ ಡುಬ್ಬದ ಬಳಿ ಬೈಕ್‌ನಿಂದ ಬಿದ್ದು ಮೃತಪಟ್ಟರು.
ಮೂವರ ಸಾವಿನ ಬಳಿಕ ಸಾರ್ವಜನಿಕರ ವಿರೋಧದಿಂದಾಗಿ ಸದರಿ ರಸ್ತೆಯಲ್ಲಿ ಅಳವಡಿಸಿದ್ದ ಅವೈಜ್ಞಾನಿಕ ಉಬ್ಬುಗಳನ್ನು ತೆರವುಗೊಳಿಸಲಾಯಿತು. ಇದೀಗ ಎಚ್ಚೆತ್ತುಕೊಂಡಿರುವ ಪಾಲಿಕೆ ವತಿಯಿಂದ ನಗರದ ರಸ್ತೆ ಉಬ್ಬುಗಳಿಗೆ ಬಣ್ಣ ಬಳಿಯುತ್ತಿರುವುದು ಸೇರಿದಂತೆ ಇನ್ನಿತರ ಸಂಚಾರ ನಿಯಮಾನುಸಾರ ರಸ್ತೆ ಸುರಕ್ಷತೆಗೆ ಕ್ರಮ ವಹಿಸಲಾಗುತ್ತಿದೆ. ಇದರಿಂದ ನಗರದಲ್ಲಿ ಸುರಕ್ಷಿತವಾಗಿ ವಾಹನ ಚಾಲನೆ ಮಾಡಲು ಸಾಧ್ಯವಾಗುತ್ತದೆ.