

ಶಿವರಾಜ ಎಂ. ಬೆಂಗಳೂರು
ಕುಸ್ತಿ ಎಂದರೆ ಒಂದು ಕ್ಷಣ ಮೈಸೂರಿನ ದಸರಾ ನೆನಪಿಗೆ ಬರುತ್ತದೆ. ದಸರಾ ವೇಳೆ ಮದಗಜಗಳಂತ ಪೈಲ್ವಾನರ ಕಾದಾಟ ನೋಡುವುದೇ ರೋಚಕ. ಈ ಹಿಂದೆ ಇಂಥ ಪಂದ್ಯಗಳನ್ನು ಹಬ್ಬದಂತೆ ಆಚರಿಸಲಾಗುತ್ತಿತ್ತು. ಇಂಥದ್ದೆ ರೋಚಕ ದೃಶ್ಯ ಕಟ್ಟಿಕೊಡುವ ನಿಟ್ಟಿನಲ್ಲಿ ಬೆಂ.ಗ್ರಾಮಾಂತರ ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆ ಮುಂದಾಗಿದ್ದು, ಇದೇ ಮೊದಲ ಬಾರಿಗೆ ಗ್ರಾಮಾಂತರ ಜಿಲ್ಲೆಯಲ್ಲಿ ‘ಕುಸ್ತಿಹಬ್ಬ’ಕ್ಕೆ ಅಖಾಡ ಸಿದ್ಧಗೊಳಿಸಿದೆ.
ಪ್ರತಿ ಸಾಲಿನಲ್ಲಿ ಪಂದ್ಯಾವಳಿ ಆಯೋಜಿಸಿಕೊಂಡು ಬರುತ್ತಿದ್ದ ಇಲಾಖೆ ಪಂದ್ಯಾವಳಿಗೆ ಹಬ್ಬದ ವಾತಾವರಣ ಸೃಷ್ಟಿಸಲು ಚಿಂತನೆ ನಡೆಸಿದೆ. ಇದಕ್ಕಾಗಿ ಈಗಾಗಲೆ ಸಿದ್ಧತೆ ನಡೆಸಿದ್ದು, ೆ.28ರಂದು ಬೆಳಗ್ಗೆ 10ಗಂಟೆಗೆ ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ಕುಸ್ತಿ ಹಬ್ಬ ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಕುಸ್ತಿ ಹಬ್ಬ ನಡೆಯಲಿದ್ದು, ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಹಾಗೂ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹಬ್ಬದ ಪೌರೋಹಿತ್ಯ ವಹಿಸಲಿದ್ದಾರೆ.
ಮದಗಜಗಳ ಕಾದಾಟ: ಕುಸ್ತಿ ಪಂದ್ಯಕ್ಕೆ ರಾಜಮಹಾರಾಜರ ಕಾಲದ ಇತಿಹಾಸವಿದೆ. ಮೈಸೂರು ಗರಡಿಮನೆಗಳ ನಗರಿ ಎಂದೇ ಪ್ರಖ್ಯಾತಿ ಪಡೆದಿದೆ. ಮೈಸೂರು ದಸರಾ ವೇಳೆ ಕುಸ್ತಿಗೆ ವಿಶೇಷ ಸ್ಥಾನ ನೀಡಲಾಗುತ್ತದೆ. ಇಂಥ ಪರಂಪರೆಯ ಕ್ರೀಡೆಯನ್ನು ಗ್ರಾಮಾಂತರ ಜಿಲ್ಲೆಯಲ್ಲೂ ಮುನ್ನೆಲೆಗೆ ತರಬೇಕೆಂಬ ಮಹತ್ವಾಕಾಂಕ್ಷಿಯಿಂದ ಇದೇ ಮೊದಲ ಬಾರಿಗೆ ಕುಸ್ತಿಹಬ್ಬ ಆಚರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗದು ಬಹುಮಾನ: ದೇಶಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವವರು ಉತ್ತೇಜಿಸುವ ಸಲುವಾಗಿ ಕುಸ್ತಿಹಬ್ಬದಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 1 ಸಾವಿರ ರೂ.ನಗದು, ದ್ವಿತೀಯ ಬಹುಮಾನವಾಗಿ 500 ರೂ. ನಗದು ಜತೆಗೆ ಪದಕದೊಂದಿಗೆ ಪ್ರಮಾಣಪತ್ರ ವಿತರಿಸಿ ಸನ್ಮಾನಿಸಲಾಗುವುದು ಎಂದು ಯುವಜನ ಮತ್ತು ಕ್ರೀಡಾಇಲಾಖೆ ಸಹಾಯಕ ನಿರ್ದೇಶಕಿ ಆರ್.ಗೀತಾ ತಿಳಿಸಿದ್ದಾರೆ.
ಗುರುತಿನ ಚೀಟಿ ಕಡ್ಡಾಯ: ಫೆ.28 ರಂದು ಬೆಳಗ್ಗೆ 8 ಗಂಟೆಗೆ ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ಕುಸ್ತಿಪಟುಗಳ ದೇಹತೂಕ ಪರೀಕ್ಷೆ ನಡೆಯಲಿದೆ, ಕುಸ್ತಿಪಟುಗಳು ಜಿಲ್ಲೆಯಲ್ಲಿ ವಾಸಿಸುತ್ತಿರುವ ಯಾವುದಾದರೂ ಗುರುತಿನ ಚೀಟಿಯೊಂದಿಗೆ ಹಾಜರಿರಬೇಕು.
ಕುಸ್ತಿ ಪಂದ್ಯಾವಳಿಯ ತೂಕದ ವಿವರ: ಹಿರಿಯ ವಿಭಾಗದ ಫ್ರೀಸ್ಟೈಲ್ ಪುರುಷರಿಗೆ 55 ಕೆಜಿ, 60 ಕೆಜಿ, 65 ಕೆಜಿ, 70 ಕೆಜಿ, 76 ಕೆಜಿ, 86 ಕೆಜಿ, 96 ಕೆಜಿ, 125 ಕೆಜಿ ಮತ್ತು ಕಿರಿಯ ವಿಭಾಗದ ಫ್ರೀಸ್ಟೈಲ್ ಪುರುಷರಿಗೆ 32 ಕೆಜಿ, 35 ಕೆಜಿ, 40 ಕೆಜಿ, 44 ಕೆಜಿ, 50 ಕೆಜಿ, 54 ಕೆಜಿ, 60 ಕೆಜಿ, 70 ಕೆಜಿ ಹಾಗೂ ಫ್ರೀಸ್ಟೈಲ್ ಮಹಿಳೆಯರ ವಿಭಾಗದಲ್ಲಿ 36 ಕೆಜಿ, 40 ಕೆಜಿ, 44 ಕೆಜಿ, 50 ಕೆಜಿ, 54 ಕೆಜಿ, 60 ಕೆಜಿ, 64 ಕೆಜಿ, 70 ಕೆಜಿಯ ಸ್ಪರ್ಧೆಗಳಿವೆ.
ಧಾರವಾಡದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಕುಸ್ತಿ (ಪಂದ್ಯಾವಳಿ)ಹಬ್ಬದಂತೆ ಗ್ರಾಮಾಂತರ ಜಿಲ್ಲೆಯಲ್ಲೂ ಕುಸ್ತಿ ಪಂದ್ಯಾವಳಿಗೆ ಹಬ್ಬದ ಮೆರುಗು ನೀಡುವ ನಿಟ್ಟಿನಲ್ಲಿ ಇಲಾಖೆ ನೂತನ ಪ್ರಯೋಗಕ್ಕೆ ಮುಂದಾಗಿದೆ. ಆರ್.ಗೀತಾ, ಯುವಜನ ಮತ್ತು ಕ್ರೀಡಾಇಲಾಖೆ ಸಹಾಯಕ ನಿರ್ದೇಶಕಿ