ಆರು ತಿಂಗಳಾದರೂ ತಿದ್ದುಪಡಿಯಾಗದ ಪಹಣಿ !

ಪಹಣಿ ತಿದ್ದುಪಡಿಗಾಗಿ ತಹಸೀಲ್ದಾರ್​ ಕಚೇರಿ ಎದುರು ಚಿಂತಾಮಣಿ ತಾಲೂಕಿನ ಮೈಲಾಂಡ್ಲಹಳ್ಳಿಯ ವಿಕಲಚೇತನ ಆಂಜನಪ್ಪ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
Aaru tinagaladaru Tiddupadiyagada Pahani
Published on

ತಾಲೂಕು ಕಚೇರಿ ಮೆಟ್ಟಿಲುಗಳ ಮೇಲೆ ಅಂಗವಿಕಲನ ಧರಣಿ


ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ಪಹಣಿ ತಿದ್ದುಪಡಿಗೆ ಆರು ತಿಂಗಳಿನಿಂದ ಸತಾಯಿಸುತ್ತಿರುವ ಅಧಿಕಾರಿಗಳ ವರ್ತನೆಯಿಂದ ಬೇಸತ್ತ ಅಂಗವಿಕಲ ಆಂಜನಪ್ಪ ಎಂಬುವರು ತಾಲೂಕು ಕಚೇರಿ ಆವರಣದ ಮೆಟ್ಟಿಲುಗಳ ಮೇಲೆ ಏಕಾಂಗಿಯಾಗಿ ಕುಳಿತು ಗುರುವಾರ ಧರಣಿ ನಡೆಸಿದರು.
ತಾಲೂಕಿನ ಕಸಬಾ ಹೋಬಳಿ ಮೈಲಾಂಡ್ಲಹಳ್ಳಿಯ ಸರ್ವೇ ನಂ.44ರಲ್ಲಿ 4.17 ಎಕರೆ ಜಮೀನಿನ ಪೈಕಿ 5 ಗುಂಟೆ ಜಮೀನು ಆಂಜನಪ್ಪ ಬಿನ್​ ನಾರಾಯಣಪ್ಪ ಗಡಗದಾಸನಹಳ್ಳಿ ಎಂಬುವರ ಹೆಸರಿನಲ್ಲಿ ಖಾತೆಯಾಗಿದೆ. ಆದರೆ ಜಮೀನಿನ ದಾಖಲೆಯಲ್ಲಿ ಮೂರು ಮತ್ತು ಒಂಬತ್ತನೇ ಕಾಲಂ ತಾಳೆ ಆಗುತ್ತಿಲ್ಲ. ಹೀಗಾಗಿ ಸರ್ವೇ ಮಾಡಲು ಉಪವಿಭಾಗಾಧಿಕಾರಿ, ತಹಸೀಲ್ದಾರ್​ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
ಆಂಜನಪ್ಪ ಅವರ ತಾಯಿ ಮುನೆಮ್ಮ ಕೊಂ ನಾರಾಯಣಪ್ಪ ಅವರ ಪೌತಿಯಾಗಿದ್ದು, ಅವರ ಪುತ್ರ ಆಂಜನಪ್ಪಗೆ ಪೌತಿ ಖಾತೆ ಮಾಡಲಾಗಿದೆ. ಆಂಜನಪ್ಪ ಅವರಿಗೆ ಖಾತೆಯಾಗಿರುವ ಜಮೀನು ಅಳತೆ ಮಾಡಿ ಜಾಗ ಗುರುತಿಸಿಕೊಡುವಂತೆ ಅಧಿಕಾರಿಗಳಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದರು. ಸರ್ವೇ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮನವಿಗೆ ಸ್ಪಂದಿಸದೆ ನಿತ್ಯ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ಧರಣಿ ನಿರತ ಆಂಜಿನಪ್ಪ ಆಕ್ರೋಶ ವ್ಯಕ್ತಪಡಿಸಿದರು.
ತನ್ನ ಜಮೀನಿಗೆ ತೆರಳಲು ಅಕ್ಕಪಕ್ಕದ ಜಮೀನಿನವರು ಅವಕಾಶ ನೀಡುತ್ತಿಲ್ಲ. ಹಾಗಾಗಿ ಪಹಣಿ ತಿದ್ದುಪಡಿ ಮಾಡಿ ಜಮೀನನ್ನು ಅಳತೆ ಮಾಡಿ ಗುರುತಿಸಿಕೊಡಬೇಕು. ಇಲ್ಲದಿದ್ದರೆ ತಾಲೂಕು ಕಚೇರಿ ಆವರಣದಲ್ಲೇ ವಿಷ ಕುಡಿಯುತ್ತೇನೆ ಎಂದೂ ಅವರು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net