ಪಹಲ್ಗಾಮ್ ಭಯೋತ್ಪಾದನೆ, ಕ್ರೌರ್ಯ ಖಂಡನೀಯ

Oplus_131072
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಆಯೋಜಿಸಿದ್ದ ಕಾರ್ಯರಮದಲ್ಲಿ ಭಯೋತ್ಪಾದನೆಯಿಂದ ಹತರಾದ 26 ಜನ ಭಾರತೀಯರಿಗ ರೈತ ಸಂಘಟನೆಯಿಂದ ಹಸಿರು ನಮನ ಸಲ್ಲಿಸಲಾಯಿತು.
Published on

ನಂಜನಗೂಡು: ಭಯೋತ್ಪಾದನೆ, ಕ್ರೌರ್ಯ ಮತ್ತು ಸುಲಿಗೆಗಳನ್ನು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಸಂಘಟನೆ ಯಾವಾಗಲೂ ಖಂಡಿಸುತ್ತದೆ ಎಂದು ರಾಜ್ಯ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ತಿಳಿಸಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಮಂಗಳವಾರ ಏಕೀಕರಣದ ಹಾದಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಜತೆ ಸಂವಾದದಲ್ಲಿ ಪಹಲ್ಗಾಮ್‌ನಲ್ಲಿ ಭಯೋತ್ಪಾದನೆಯಿಂದ ಹತರಾದ 26 ಜನ ಭಾರತೀಯರು ಹಾಗೂ ಅಕಾಲಿಕ ಮರಣ ಹೊಂದಿದ ರೈತ ಸಂಘಟನೆಯ ಕಳಲೆ ಮಹದೇವ್, ಅಹಲ್ಯ ನಾಗರಾಜು, ಸಿಂಧುವಳ್ಳಿ ಬೊಮ್ಮೇಗೌಡ ಅವರಿಗೆ ಹಸಿರು ನಮನ ಸಲ್ಲಿಸಿ ಮಾತನಾಡಿದರು.

ಜ.23 ರಂದು ನಡೆದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜತೆ ರೈತರ ಸಂವಾದದಲ್ಲಿ ನಾವು 33 ಅಂಶಗಳ ಹಕ್ಕೋತ್ತಾಯ ಸಲ್ಲಿಸಿದ್ದೆವು. ಇದರಲ್ಲಿ 27 ಅಂಶಗಳು ಬಗೆಹರಿದು, ಸುಮಾರು 33 ಕೋಟಿ ರೂ. ಅನುದಾನವನ್ನು ಕೂಡ ಸರ್ಕಾರ ನೀಡಿದೆ. ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದ ಜನರಿಗೆ ಹೋರಾಟದ ಮೂಲಕ ನ್ಯಾಯ ಕೊಡಿಸುವಲ್ಲಿ ರೈತ ಸಂಘವು ಮುಂಚೂಣಿಯಲ್ಲಿದೆ. ರೈತರು ಅಕಾಲಿಕವಾಗಿ ಮರಣ ಹೊಂದಿದರೆ ಜನರು ಮರೆತುಬಿಡುತ್ತಾರೆ. ಅವರು ಮಾಡಿದ ಕೆಲಸ ಕಾರ್ಯಗಳನ್ನು ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯ. ಹಾಗಾಗಿ ಅಕಾಲಿಕ ಮರಣ ಹೊಂದಿದ ರೈತರು, ಹಾಗೂ ಭಯೋತ್ಪಾದಕರ ದಾಳಿಯಿಂದ ಮೃತಪಟ್ಟ 26 ಜನರಿಗೆ ಹಸಿರು ನಮನ ಸಲ್ಲಿಸಿದ್ದೇವೆ ಎಂದರು.

ಮಾಜಿ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು ಈ ಭಾಗದಲ್ಲಿ ದೀನ ದಲಿತರು ಮತ್ತು ಬಡವರ ಪರವಾಗಿ ಕೆಲಸಗಳನ್ನು ಮಾಡಿದ್ದರು. ಇಂದು ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ ಇದ್ದು, ಅವರನ್ನು ನಾವು ಸ್ಮರಿಸಬೇಕು ಎಂದರು.

ಗ್ರಾಮಾಂತರ ಪ್ರದೇಶದಲ್ಲಿರುವ ಅವಿಭಕ್ತ ರೈತ ಕುಟುಂಬಕ್ಕೆ ನಿವೇಶನದ ಕೊರತೆ ಇರುವುದರಿಂದ ಅವರಿಗೆ ಸರ್ಕಾರದಿಂದ ನಿವೇಶನವನ್ನು ನೀಡಬೇಕು. ಗೋಮಾಳಗಳಲ್ಲಿ ಬಡರೈತರಿಗೆ ಉಳುಮೆಗೆ ಅವಕಾಶ ಮಾಡಿಕೊಡಬೇಕು. ವನ ಸಾಗುವಳಿ ಮಾಡಲು ಬಿಟ್ಟು ಕೊಡಬೇಕು. ಅಹಲ್ಯ ಗ್ರಾಮದಲ್ಲಿ ರುದ್ರಭೂಮಿ ಇಲ್ಲದೆ ತೊಂದರೆಯಾಗಿದೆ. ಕೃಷ್ಣಾಪುರ ಗ್ರಾಮದಲ್ಲಿ ಕೆಲವು ಕುಟುಂಬಗಳಿಗೆ ಹಕ್ಕುಪತ್ರ ನೀಡಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಜಾಗಗಳಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ ಎಂದು ರೈತರು ತಹಸೀಲ್ದಾರ್ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಅವರು, ಮರಳೂರು, ಗೊದ್ದನಪುರ, ನಗರ್ಲೆ ಗ್ರಾಮಗಳಲ್ಲಿ ನಿವೇಶನಕ್ಕಾಗಿ ಖಾಲಿ ಜಾಗಗಳನ್ನು ಗುರುತಿಸಲಾಗಿದೆ. ದಾಖಲೆ ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ. ಜಾನುವಾರುಗಳ ಮೇವಿಗಾಗಿ ಮೀಸಲಿಟ್ಟಿರುವ ಗೋಮಾಳವನ್ನು ಸಾಗುವಳಿಗೆ ಕೊಡಲು ಆಗುವುದಿಲ್ಲ. ಸೇಂದಿವನ ಸರ್ಕಾರದ ಅಧೀನದಲ್ಲಿರುತ್ತದೆ. ಮೇಲಧಿಕಾರಿಗಳ ಜತೆ ಚರ್ಚಿಸಿ ಈ ಬಗ್ಗೆ ಕ್ರಮ ವಹಿಸಲಾಗುವುದು. ಜಿಲ್ಲಾಧಿಕಾರಿಗಳ ಜತೆ ಮಾತನಾಡಿ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ರೈತ ಮುಖಂಡ ಪಚ್ಚೆ ನಂಜುಂಡಸ್ವಾಮಿ, ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವಿ, ಸಣ್ಣ ನೀರಾವರಿ ಇಲಾಖೆಯ ಎಇಇ ಹಜರುದ್ದೀನ್, ತಾಲೂಕು ಅಧ್ಯಕ್ಷ ಸತೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು, ಬೊಕ್ಕಹಳ್ಳಿ ನಂಜುಂಡಸ್ವಾಮಿ, ದೇವರಾಜ್, ಬಂಗಾರ ನಾಯಕ, ಶಿರಮಳ್ಳಿ ಮಂಜುನಾಥ್, ಮೋಹನ್ ರಾಯಣ್ಣ, ಶಂಕರ ನಾಯಕ, ತಾಲೂಕು ಉಪಾಧ್ಯಕ್ಷ ನಂಜುಂಡೇಗೌಡ, ಸಿದ್ದಪ್ಪಾಜಿ, ಯೋಗಿ, ಮಂಜುನಾಥ, ಗಜ, ನಾಗೇಂದ್ರ ಕುಮಾರ್, ಕೃಷ್ಣ, ಸವಿತಾ, ಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net