ಪೆಹಲ್ಗಾಮ್ ಘಟನೆ ಕರುಣೆಯಿಲ್ಲದ ಕೃತ್ಯ : ಡಾ. ಕಲ್ಯಾಣಸಿರಿ ಭಂತೇಜಿ

WhatsApp Image 2025-04-27 at 1.50.03 PM
Published on

ಮೈಸೂರು: ಪೆಹಲ್ಗಾಮ್ ಘಟನೆ ಕರುಣೆಯಿಲ್ಲದ ಕೃತ್ಯ ಎಂದು ವಿಶ್ವಮೈತ್ರಿ ಬುದ್ಧವಿಹಾರದ ಪೂಜ್ಯ ಡಾ. ಕಲ್ಯಾಣಸಿರಿ ಭಂತೇಜಿ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನ ಪೊಲೀಸ್ ಬಡಾವಣೆಯ ಜೈಭೀಮ್‌ಬಂಧು ಬಳಗದ ಆಶ್ರಯದಲ್ಲಿ ಸಮಾನ ಮನಸ್ಕರ ವೇದಿಕೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕರುಣೆ, ಮಾನವೀಯತೆ ಮತ್ತು ಪ್ರೀತಿ ಇಲ್ಲದ ದೇಶ ನಾಶವಾಗಲಿದೆ. ಹೆತ್ತ ತಾಯಿ ಮತ್ತು ಹೊತ್ತ ಭೂಮಿ ಸ್ವರ್ಗಕ್ಕಿತ ಮಿಗಿಲು. ಭಾರತ ಇತರೆ ದೇಶಕ್ಕಿಂತ ಭಿನ್ನ ಎಂಬುದು ಈಗಾಗಲೇ ಗೊತ್ತಾಗಿದೆ ಎಂದು ಸೂಚ್ಯವಾಗಿ ತಿಳಿಸಿದರು.

ದೇಶ ಪ್ರಬುದ್ಧರಾಗಬೇಕಾದರೆ ಎಲ್ಲರೂ ಉದ್ಧಾರ ಆಗಬೇಕು ಎಂಬುದು ಅಂಬೇಡ್ಕರ್‌ಅವರ ಆಶಯವಾಗಿತ್ತು. ಅಂಬೇಡ್ಕರ್ ಅವರು ಒಂದು ಸಮುದಾಯಕ್ಕೆ ಸೀಮಿತವಾಗಿ ಕೆಲಸ ಮಾಡಲಿಲ್ಲ. ಎಲ್ಲ ಜಾತಿಗೆ ಹಕ್ಕು, ಅಧಿಕಾರ ತಂದುಕೊಟ್ಟರು. ಹಿಂದೂ ಕೋಡ್ ಬಿಲ್ ಜಾರಿಗೆ ಅವಿರತ ಶ್ರಮಿಸಿದರು. ಸಮಾನ ಕೆಲಸ ಸಮಾನ ವೇತನ ಜಾರಿಗೆ ಶ್ರಮಿಸಿದರು. ಕಾರ್ಮಿಕರು ಯಂತ್ರವಲ್ಲ ಎಂಬ ವಿಚಾರವನ್ನು ಮುಂದೆ ತಂದರು. ಹೆಣ್ಣುಮಕ್ಕಳಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟರು ಎಂದು ಹೇಳಿದರು.

ಈ ದೇಶದಲ್ಲಿರುವ ತುಳಿತಕ್ಕೊಳಗಾದ ಜನ ಉನ್ನತ ಶಿಕ್ಷಣ ಪಡೆಯಬೇಕು, ಪ್ರಜ್ಞಾವಂತರಾಗಬೇಕು. ಶೋಷಿತ ವರ್ಗದ ಜನ ದೇಶವನ್ನು ಆಳುವ ವರ್ಗವಾಗಿ ರೂಪುಗೊಳ್ಳಬೇಕು. ಬುದ್ಧದಮ್ಮದ ಕಡೆ ನನ್ನ ಜನ ಹೊರಳಬೇಕು ಎಂಬುದು ಅಂಬೇಡ್ಕರ್ ಅವರ ಸಂಕಲ್ಪವಾಗಿತ್ತು ಎಂದು ಹೇಳಿದರು.

ಭಾರತ ಇಂದು ರೋಗಗ್ರಸ್ತವಾಗಿದೆ. ಯಾವ ಸಮಾಜ, ಧರ್ಮ ಮತ್ತೊಂದು ಸಮಾಜವನ್ನು ಕಡೆಗಣಿಸುತ್ತದೋ ಅದು ಧರ್ಮವೇ ಅಲ್ಲ. ಧರ್ಮ ಎಂದರೆ ವೈಚಾರಿಕ ಭಾವನೆ ಹೊಂದಿರಬೇಕು, ಕಿಡಿಗೇಡಿ ಮನಸ್ಥಿತಿ ಇರಬಾರದು. ಮಾನವೀಯ ಮೌಲ್ಯಗಳನ್ನು, ಗುಣಗಳನ್ನು ಹೊಂದಿರಬೇಕು ಎಂದು ಆಶಿಸಿದರು.

ಬೇರೆಯವರ ಬಗ್ಗೆ ಮಾತನಾಡಿ ಕಾಲಾಹರಣ ಮಾಡಬೇಡಿ.ಬುದ್ಧ ದಮ್ಮ ಮಾನವೀಯ ಸಾಗರ. ಅದನ್ನು ಅರ್ಥ ಮಾಡಿಕೊಂಡು ಮುಂದೆ ಸಾಗಿ. ಸೆಲ್ಫ್ ಕರೆಕ್ಷನ್ ಬಹಳ ಮುಖ್ಯ. ಅಸೂಯೆ ಪ್ರಪಂಚದಲ್ಲಿ ನಮ್ಮ ಸಾಧನೆ ಮುಖ್ಯ. ಅನ್ಯರ ಬಗ್ಗೆ ಕೆಟ್ಟದಾಗಿ ಮಾತನಾಡುವ ಸಂದರ್ಭ ಎದುರಾದಲ್ಲಿ ಮೂಕವಾಗಿರಿ. ಮನದೊಳಗಿನ ಕಿಚ್ಚು ಮನಸ್ಸನ್ನು ಸುಡಲಿದೆ, ಮೊದಲು ತನ್ನನ್ನು ಸುಡಲಿದೆ, ಆದ್ದರಿಂದ ತಟಸ್ಥವಾಗಿರಿ. ಎಷ್ಟೋ ಸಂದರ್ಭದಲ್ಲಿ ಮೌನ ಹಾಗೂ ನಗು ನಿರೀಕ್ಷೆಗೂ ಮೀರಿದ ಫಲಿತಾಂಶ ನೀಡಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಜೆ.ಸೋಮಶೇಖರ್, ಮೈಸೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಉಪಪೊಲೀಸ್ ಆಯುಕ್ತ ಕೆ.ಎಸ್. ಸುಂದರರಾಜ್, ಆಲನಹಳ್ಳಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸ್ವರ್ಣ, ಬಳಗದ ಅಧ್ಯಕ್ಷ ವೈ.ಎಂ.ರಂಗಸ್ವಾಮಿ, ಪದಾಧಿಕಾರಿಗಳಾದ ಮೋಹನ್, ಶಿವಸ್ವಾಮಿ, ಸಿದ್ದೇಶ್, ಶಾಂತರಾಜು, ಶ್ರೀನಿವಾಸ್ ಪ್ರಸಾದ್, ನಾಗರಾಜು, ಶಿವರಾಮಚಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net