

ವಿಜಯಪುರ: ‘ಸಹಿಷ್ಣುಗಳಾದ ಹಿಂದುಗಳನ್ನು ಕೆಣಕಬೇಕು, ಒಂದಷ್ಟು ಗೊಂದಲ ಸೃಷ್ಟಿಸಬೇಕು, ತಮ್ಮ ಬೇಳೆ ಬೇಯಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ರಾಜಕೀಯ ನಾಯಕರು ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದು ಉಡುಪಿ ಪೇಜಾವರ ಮಠದ ಪೀಠಾಧಿಪತಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
‘ತಮ್ಮನ್ನು ತಾವು ಹಿಂದುಗಳೆಂದು ಕರೆದುಕೊಳ್ಳುವವರು ಹಿಂಸಾಚಾರ, ದ್ವೇಷದಲ್ಲಿ ಹಗಲಿರುಳು ನಿರತವಾಗಿದ್ದಾರೆ’ ಎಂಬ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಸಂಬಂಧಿಸಿದಂತೆ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಮಣಿಪುರದಲ್ಲಿ ಬೆಂಕಿ ಹಚ್ಚಿಯಾಗಿದೆ. ಈವರೆಗೆ ನಂದಿಸಲು ಆಗಿದೆಯಾ?ಇಂಥ ಬೇಜವಾಬ್ದಾರಿ ಹೇಳಿಕೆ ಕೊಡುತ್ತಾರೆಂದರೆ ಸಮಾಜ ಅದನ್ನು ತಿರಸ್ಕರಿಸಬೇಕೆಂದರು.
ರಾಮ ಮಂದಿರ ಕಳಪೆಯಾಗಿಲ್ಲ. ಮಳೆ ಬಂದಾಗ ಮೇಲ್ಛಾವಣಿಯಿಂದ ನೀರು ಬರುವುದು ಸಹಜ. ಹಾಗಂತ ನಿರ್ಮಾಣದಲ್ಲಾದ ಕುಂದುಕೊರತೆಯಿಂದಾಗಿದ್ದಲ್ಲ. ಇನ್ನೊಂದು ವರ್ಷದಲ್ಲಿ ಮಂದಿರ ಪರಿಪೂರ್ಣಗೊಳ್ಳಲಿದೆ.
ಅಯೋಧ್ಯೆಯಲ್ಲಿ ಬಿಜೆಪಿ ಸೋಲಿಗೆ ಪ್ರತಿಪಕ್ಷಗಳ ಆಸೆ, ಆಮಿಷವೇ ಕಾರಣ. ಧಾರ್ಮಿಕ ನಂಬಿಕೆಗಳಿಗೆ ಹೊಡೆತ ಎಂದು ಭಾವಿಸಬಾರದು. ಮೋಸದಿಂದ ಕಾರ್ಯಸಾಧನೆ ಮಾಡಿದ್ದಾರೆ.
ಅಯೋಧ್ಯೆ ಶ್ರೀರಾಮ ಮಂದಿರದ ಛಾವಣಿ ನಿರ್ಮಾಣ ಇನ್ನೂ ಪೂರ್ಣವಾಗಿರದ ಕಾರಣಕ್ಕೆ ಮಳೆ ಬಂದಾಗ ಸೋರಿಕೆಯಾಗಿದೆಯೇ ಹೊರತು, ರಾಮಮಂದಿರ ಕಾಮಗಾರಿಯಲ್ಲಿ ಯಾವುದೇ ಕುಂದುಕೊರತೆಯಾಗಿಲ್ಲ, ಇನ್ನೊಂದು ವರ್ಷದೊಳಗೆ ಮಂದಿರ ನಿರ್ಮಾಣ ಕಾರ್ಯ ಸಂಪೂರ್ಣಗೊಳ್ಳಲಿದೆ ಎಂದರು.
ಅಯೋಧ್ಯೆಯಲ್ಲಿ ಬಡತನ ಹೆಚ್ಚಿರುವುದರಿಂದ ಮತದಾರರು ಆಸೆ, ಆಮಿಷಕ್ಕೆ ಒಳಗಾಗಿ ಮತ ಚಲಾಯಿಸಿದ್ದಾರೆ. ಇದು ಹಿಂದುಗಳ ಧಾರ್ಮಿಕ ನಂಬಿಕೆಗೆ ಹೊಡೆತ ಎಂದು ಭಾವಿಸಬಾರದು. ಪ್ರತಿ ಪಕ್ಷಗಳ ಮೋಸ, ಆಸೆ, ಆಮಿಷದಿಂದಾಗಿ ಅಯೋಧ್ಯೆಯಲ್ಲಿ ಬಿಜೆಪಿಗೆ ಸೋಲಾಗಿದೆಯೇ ಹೊರತು, ಇದನ್ನು ಹಿಂದುಗಳಿಗೆ ಹಿನ್ನೆಡೆ ಎಂದು ವಿಶ್ಲೇಷಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಸಿಎಂ ಮತ್ತು ಡಿಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಮಠಾಧಿಪತಿಗಳು ಆಯಾ ಜಾತಿ ಹಾಗೂ ಪಂಗಡಗಳಿಗೆ ಆದ್ಯತೆ ನೀಡುವ ಬಗ್ಗೆ ಹೇಳಿಕೆ ನೀಡುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಯಾರೇ ಆಡಳಿತದಲ್ಲಿರಲಿ ನ್ಯಾಯಯುತ ಮಾರ್ಗದಲ್ಲಿ ರಾಜ್ಯವಾಳಬೇಕೆಂದು ನಾವು ಪ್ರಾರ್ಥಿಸುತ್ತೇವೆ. ರಾಜಕೀಯ ಪಕ್ಷಗಳು ಜಾತಿಯನ್ನೇ ಪ್ರಧಾನವನ್ನಾಗಿ ಆಡಳಿತ ನಡೆಸುತ್ತಿರುವಾಗ ಜಾತಿವಾರು ಬೇಡಿಕೆ ಸಹಜ. ತಮ್ಮ ಪಂಗಡಗಳಿಗೆ ಅನ್ಯಾಯವಾದಾಗ ಆಯಾ ಪಂಗಡಗಳ ಮಠಾಧಿಪತಿಗಳು ಬೇಡಿಕೆ ಇಡುವುದು ಸಹಜ ಎಂದರು.
ಸೀಟ್ ಕೊಡುವುದು, ನಿಗಮ-ಮಂಡಳಿಗಳಿಗೆ ನೇಮಕ ಮಾಡುವುದನ್ನು ಮಾಡಿದರೆ ಈ ರೀತಿ ಜಾತಿವಾರು ಬೇಡಿಕೆ ಇಡುವುದು ಸರಿ ಎನ್ನಿಸುತ್ತದೆ.ನಾವು ಮಾತ್ರ ಸಂವಿಧಾನ ಬದ್ಧವಾಗಿ, ಕಾನೂನು ಬದ್ಧವಾಗಿ ಆಡಳಿತ ನೀಡಬೇಕೆನ್ನುತ್ತೇವೆ. ಚುನಾಯಿತ ಪ್ರತಿನಿಧಿಗಳು ಕೂಡಿ ಸರ್ಕಾರ ರಚಿಸಿದಾಗ ಅದು ಎಲ್ಲರ ಸರ್ಕಾರವಾಗಲಿದೆ. ಹೀಗಾಗಿ ಅಂಥವರು, ಇಂಥವರಿಗೆ ಕೊಡಬಾರದು ಎಂಬುದು ಹೇಳಲ್ಲ ಎಂದರು.